Home ಧಾರ್ಮಿಕ ಸುದ್ದಿ ಕಾಲರಾತ್ರಿ

ಕಾಲರಾತ್ರಿ

1225
0
SHARE

ಶರನ್ನವರಾತ್ರಿಯ ಏಳನೆಯ ದೇವಿಯ ಕಾಲರಾತ್ರಿ ರೂಪವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಶುಭಂಕರಿ ಎಂದೂ ಕರೆಯಲ್ಪಡುವ ಈಕೆ ಶುಭಫಲಗಳನ್ನು ನೀಡುತ್ತಾಳೆ. ತಲೆಗೂದಲನ್ನು ಹರಡಿಕೊಂಡಿರುವ, ಮೂರುಕಣ್ಣು ಹೊಂದಿರುವ ಈಕೆ ಆಯುಧಪಾಣಿಯಾಗಿಯೂ ಅಭಯಹಸ್ತೆಯಾಗಿಯೂ ಚತುರ್ಭುಜೆಯೂ ಆಗಿದ್ದಾಳೆ. ಸದಾ ಶುಭಫಲವನ್ನೇ ನೀಡುವ ಜೊತೆಗೆ ನಮ್ಮನ್ನು ದುಷ್ಟಶಕ್ತಿಗಳಿಂದ ಸದಾ ರಕ್ಷಿಸುತ್ತಾಳೆ.

ಏಕವೇಣೀ ಜಪಾಕರ್ಣಪೂರನಗ್ನಾಖರಾಸ್ಥಿತಾ|
ಲಂಬೋಷ್ಠಿಕರ್ಣಿಕಾಕರ್ಣಿ ತೈಲಾಭ್ಯಕ್ತ ಶರೀರಿಣೀ||
ವಾಮಪಾದೋಲ್ಲಸಲ್ಲೋಹಲ ತಾಕಂಟಕಭೂಷಣಾ|
ವರ್ಧನಮೂಧ್ವಜಾ ಕೃಷ್ಣಾಕಾಲರಾತ್ರಿರ್ಭಯಂಕರೀ||
ಎಂಬ ಶ್ಲೋಕವನ್ನು ಪಠಿಸಿ ಪೂಜಿಸಲಾಗುತ್ತದೆ
.

ರಾತ್ರಿ ಎಂಬುದು ಕಾಲಬದಲಾವಣೆಯ ಸಂಕೇತವೂ ಆಗಿದೆ. ಒಂದು ಹಗಲು ಮತ್ತು ಒಂದು ರಾತ್ರಿ ಸೇರಿ ಒಂದು ದಿನವಾಗುತ್ತದೆ. ದಿನ ವಾರವಾಗಿ, ತಿಂಗಳು, ವರ್ಷ ಹೀಗೆ ಕಾಲ ಉರುಳುತ್ತಲೇ ಇರುತ್ತದೆ. ಕಾಲ ಉರುಳಿದಂತೆ ಹಲವಾರು ಬದಲಾವಣೆ ಆಗುತ್ತಲೇ ಇರುತ್ತದೆ. ಮಳೆ, ಗಾಳಿ, ಬಿಸಿಲು ಮೊದಲಾದ ಪ್ರಾಕೃತಿಕ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ. ಅಂತಹ ಕಾಲಬದಲಾವಣೆಯಾದಾಗ ಅದಕ್ಕನುಗುಣವಾಗಿ ನಮ್ಮ ಶರೀರ ಮತ್ತು ಮನಸ್ಸು ಹೊಂದಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಚಳಿಗಾಲಕ್ಕೆ ಹೊಂದಿಕೊಳ್ಳಲಾಗದ ದೇಹಕ್ಕೆ ಚಳಿಗಾಲ ಬಂದಾಗ ಉಳಿಯಲಾಗದು. ಪ್ರತಿಕ್ಷಣಕ್ಕೂ ಬದಲಾಗುವ ಕಾಲಪುರುಷನ ಚಮತ್ಕಾರಕ್ಕೆ ಸೋಲದಂತಹ ಶಕ್ತಿಯುತವಾದ ದೇಹ ನಮ್ಮಲ್ಲಿರಬೇಕು. ಅಂತಹ ಬದಲಾವಣೆಗಳನ್ನು ಅನುಭವಿಸುವ ಶಕ್ತಿಯನ್ನು ನಮ್ಮ ಶರೀರಕ್ಕೆ ಈಕೆ ನೀಡುತ್ತಾಳೆ.

ಕಾಲರಾತ್ರಿಯನ್ನು ಅರಿತುಕೊಳ್ಳುವ ಮೂಲಕ ನಮ್ಮ ದೇಹವನ್ನು ಕಾಲಕ್ಕನುಗುಣವಾಗಿ ಹೊಂದುವಂತೆ ಸಿದ್ಧಪಡಿಸಬೇಕು. ಕಾಲವನ್ನು ಸಮಯ ಎಂತಲೂ ಕರೆಯಬಹುದು. ಹಾಗಾಗಿ ಈ ಕಾಲ ಅಥವಾ ಸಮಯ ಎಂಬುದು ಅಮೂಲ್ಯವಾದದ್ದು. ಸಜ್ಜನರಾಗಿ ಬದುಕುವ ಉದ್ದೇಶವನ್ನಿಟ್ಟುಕೊಂಡಾಗ ಸಮಯವೇ ನಮ್ಮನ್ನು ಮುಕ್ತಿಯೆಡೆಗೆ ಕರೆದೊಯ್ಯುತ್ತದೆ. ಈ ರಾತ್ರಿ ಎಂದರೆ ಕತ್ತಲು. ಕತ್ತಲಿನಲ್ಲಿ ಬೆಳಕಿಲ್ಲದೆ ಹೋಗಲಾಗದು. ಕತ್ತಲೆ ಎಂಬುದು ನಾಶಸೂಚಕವೂ ಹೌದು. ಹಾಗಾಗಿ ನಮಗಿರುವ ಸಮಯವನ್ನು ಸಂಸ್ಕಾರಯುತವಾಗಿ ಬಾಳಲು ಉಪಯೋಗಿಸಿಕೊಂಡಾಗ ನಮ್ಮ ಬದುಕು ಕತ್ತಲಿನಿಂದ ಬೆಳಕಿನತ್ತ ಸಾಗುತ್ತದೆ ಎಂಬುದೇ ಈ ಕಾಲರಾತ್ರಿ ರೂಪದ ಸರಳಾರ್ಥ.

ರಾತ್ರಿಯ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಅಂತಹ ಭಯನಿವಾರಕಳೂ, ಹಗಲು-ರಾತ್ರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಈ ಕಾಲರಾತ್ರಿ ಘೋರರೂಪದಲ್ಲಿಯೇ ಕಾಣಿಸಿಕೊಂಡಿದ್ದಾಳೆ. ಮನುಷ್ಯನು ಸಹಜವಾಗಿಯೇ ಚಾಂಚಲ್ಯಚಿತ್ತವನ್ನು ಹೊಂದಿದವನು. ಆ ಚಂಚಲತೆಯಿಂದಾಗಿಯೇ ಜಗತ್ತಿನ ನೆಮ್ಮದಿ-ಶಾಂತಿ ಕೆಡುತ್ತದೆ. ಈ ಚಿತ್ತಚಾಂಚಲ್ಯವನ್ನು ಹೋಗಲಾಡಿಸಿಕೊಳ್ಳಲು ಇರುವ ಮಾರ್ಗ ಒಂದು ಭಕ್ತಿ ಇನ್ನೊಂದು ಭಯ. ಮನಸ್ಸು ಭಕ್ತಿಗೆ ಶರಣಾಗದಿದ್ದಾಗ ಅದರ ಮೇಲೆ ಭಯವನ್ನು ಹೇರಬೇಕಾಗುತ್ತದೆ. ಹಾಗಾಗಿ ದೇವರ ಬಗೆಗೆ ಭಕ್ತಿಯೂ ಬೇಕು; ಭಯವೂ ಬೇಕು.

ಮನಸ್ಸು ಬದಲಾವಣೆಗೆ ಒಳಗಾಗುತ್ತಲೇ ಇರಬೇಕು. ಒಮ್ಮೆ ಸುಖವನ್ನೂ ಇನ್ನೊಮ್ಮೆ ದುಃಖವನ್ನೂ ಅನುಭವಿಸಲು ಸದಾ ಸಿದ್ಧವಿರಬೇಕು. ಅಂತಹ ಸಿದ್ಧತೆಗೆ ಮಾರ್ಗದರ್ಶಕಿಯೇ ಈ ಕಾಲರಾತ್ರಿ. ಸತ್-ಚಿಂತನೆ, ಸದಾಚರಣೆಗಳನ್ನು ರೂಢಿಸಿಕೊಂಡಾಗ ಅಶಾಶ್ವತವಾದ ಪ್ರಪಂಚದಲ್ಲಿ ದೈವಕೃಪೆಯಿಂದಾಗಿ ಆನಂದದಾಯಕ ಬದುಕು ನಮ್ಮದಾಗಬಲ್ಲದು.

ಮುಂದುವರಿಯುವುದು..

|| ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳವಾಗಿ ಜೀವಿಸಿ||
ವಿಷ್ಣು ಭಟ್ಟ, ಹೊಸ್ಮನೆ.

LEAVE A REPLY

Please enter your comment!
Please enter your name here