ಕೋಟ: ಜೀರ್ಣೋದ್ಧಾರಗೊಂಡ ಕಕ್ಕುಂಜೆಯ ಕಂಬಿಕಲ್ಲು ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಜ. 17ರಿಂದ 19ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆ ಯಿಂದ ಸಂಪನ್ನಗೊಂಡಿತು.
ಜ.19ರಂದು ಧರ್ಮಸ್ಥಳದ ಧಮಾಧಿಕಾರಿ ಡಾ| ಡಿ| ವೀರೇಂದ್ರ ಹೆಗ್ಗಡೆಯವರು ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ಜರಗಿತು. ಈ ಸಂದರ್ಭ ಕಾರ್ಯಕ್ರಮಕ್ಕೆ ಆಗಮಿಸಿದ ಡಾ|ವೀರೇಂದ್ರ ಹೆಗ್ಗಡೆಯವರನ್ನು ಗ್ರಾಮಸ್ಥರು ಹಾಗೂ ಭಕ್ತರು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಂಡರು. ಅನಂತರ ದೇಗುಲವನ್ನು ಸಂದರ್ಶಿಸಿ ಕ್ಷೇತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಅಷ್ಟೋತ್ತರ ಶತ ನಾಳಿಕೇರ ಗಣಯಾಗ ,ಪರಿಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ, ಅನ್ನಸಂತರ್ಪಣೆ, ಧಾರ್ಮಿಕ ಸಭೆ, ಗೌರವ ಸಮ್ಮಾನ ಜರಗಿತು.
ಸಭಾ ಕಾರ್ಯಕ್ರಮದ ಅನಂತರ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ನಡೆಯಿತು.
ಕ್ಷೇತ್ರದ ಅರ್ಚಕರು ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀಪತಿ ಭಟ್ ಕಕ್ಕುಂಜೆ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.