ಕೆಯ್ಯೂರು : ತುಳುನಾಡಿನ ದೇವೀ ಕ್ಷೇತ್ರಗಳಲ್ಲಿ ಪ್ರಮುಖವಾಗಿರುವ ಪುತ್ತೂರು ತಾಲೂಕಿನ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕಾರಣಿಕ ಸ್ಥಳವಾಗಿ ಭಕ್ತರ ಮನದಲ್ಲಿ ನೆಲೆ ನಿಂತಿದೆ. ಭತ್ತದ ಕೃಷಿಗೆ ಖ್ಯಾತಿ ಪಡೆದಿರುವ ಊರಾಗಿ ಕೆಯ್ಯೂರು (ಕೆಯ್+ ಊರು) ಹೆಸರು ಬಂದಿದೆ ಎಂದು ಇತಿಹಾಸ ಹೇಳುತ್ತದೆ. ತುಳುವಿನಲ್ಲಿ ಭತ್ತದ ಪೈರಿಗೆ “ಕೆಯ್’ ಎನ್ನುತ್ತಾರೆ. ಪೂರ್ವಾಭಿಮುಖವಾಗಿರುವ ಈ ದೇವಸ್ಥಾನ ತಾಲೂಕಿನಲ್ಲೇ ಅತೀ ಎತ್ತರದ ಪೀಠವನ್ನು ಹೊಂದಿದೆ.
ಇತಿಹಾಸದ ಅಧ್ಯಯನಗಳ ಪ್ರಕಾರ ಈ ಕ್ಷೇತ್ರ 7ನೇ ಶತಮಾನದ್ದೆಂದು ತಿಳಿದುಬಂದಿದೆ. ದೇವಿ ಮೂರ್ತಿಯನ್ನು ಕಪ್ಪು ಶಿಲೆಯಿಂದ ಕೆತ್ತಲಾಗಿದ್ದು, ಒಂದು ಮೀ. ಎತ್ತರವಿದೆ. ದೇವಿಯ ಮುಖದಲ್ಲಿ ಮಂದಹಾಸ, ಎಡಗೈಯಲ್ಲಿ ಮಹಿಷನನ್ನು ಎತ್ತಿರುವುದು ರೌದ್ರಾವತಾರ ತೋರಿಸುತ್ತದೆ. ದೇವಾಲಯದ ಚಿತ್ರಣವನ್ನು ಗಮನಿಸು ವಾಗ ಇದನ್ನು ತುಳುನಾಡನ್ನಾಳಿದ ಬಲ್ಲಾಳ ಅರಸರು ಸ್ಥಾಪಿಸಿರಬಹುದೆಂದು ಅಂದಾಜಿಸಲಾಗಿದೆ.
ಸಕಲ ದೇವರ ಸಾನ್ನಿಧ್ಯವಿರುವ ಶ್ರೀ ಚಕ್ರ ಮೇರು ಪ್ರಸ್ಥವನ್ನು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠೆ ಮಾಡಲಾಗಿದ್ದು, ಇಂತಹ ಪ್ರತಿಷ್ಠೆ ಶೃಂಗೇರಿ ಮತ್ತು ಕೊಲ್ಲೂರು ಕ್ಷೇತ್ರಗಳಲ್ಲಿ ಶ್ರೀ ಶಂಕರಾಚಾರ್ಯರಿಂದ ಆಗಿದೆ. ಶ್ರೀ ಕ್ಷೇತ್ರದಲ್ಲಿ ಇರಿಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದತೆ ಇಲ್ಲಿ ಗೋಪಾಲಕೃಷ್ಣನ ಸಾನ್ನಿಧ್ಯವಿತ್ತು. ಹೀಗಾಗಿ ೋಪಾಲಕೃಷ್ಣ ಗುಡಿ ನಿರ್ಮಿಸಲಾಗಿದೆ.
ಕ್ಷೇತ್ರದ ಪ್ರಧಾನ ದೇವರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ. ಪರಿವಾರ ದೇವತೆಗಳಾಗಿ ಗಣಪತಿ, ಶಾಸ್ತಾವು, ಗೋಪಾಲಕೃಷ್ಣ, ನಾಗನ ಕಟ್ಟೆ, ದೈವಗಳಾಗಿ ರಕ್ತೇಶ್ವರಿ, ಉಳ್ಳಾಕುಲು, ವರ್ಣರ ಪಂಜುರ್ಲಿ, ಪಿಲಿಚಾಮುಂಡಿ, ಕುಪ್ಪೆ ಪುಂಜುರ್ಲಿ ಹಾಗೂ ಗುಳಿಗ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿವೆ.
ಕ್ಷೇತ್ರದ ಅಂಗಣದಲ್ಲಿ ಇಂಟರ್ಲಾಕ್ ಅಳವಡಿಸಲಾಗಿದೆ. ದೇವಾಲಯದ ಆಡಳಿತ ಮಂಡಳಿ, ಭಜನ ಮಂಡಳಿ, ಸಂಘ ಸಂಸ್ಥೆಗಳು, ಸರಕಾರದ ಅನುದಾನ ಮತ್ತು ಭಕ್ತರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುರಕಲ್ಲಿನ ನಾಗನ ಸಾನ್ನಿಧ್ಯ ಇರುವುದು ಕ್ಷೇತ್ರದ ವಿಶೇಷ. ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆಗಳಲ್ಲಿ ಮಾತ್ರ ಇದು ಕಂಡುಬರುತ್ತದೆ.
ಪುರಾತನ ಭೈರೆತಿಕೆರೆ
ಕ್ಷೇತ್ರದಲ್ಲಿ ಪುರಾತನ ಕಾಲದ ಶಿವನ ರೂಪದ ಬೈರವಕಟ್ಟೆ ಎದುರು ಕೆರೆಯೊಂದಿದೆ. ಹಿಂದೆ ಮಹಿಳೆಯೊಬ್ಬರು ಪ್ರತಿ ದಿನ ಈ ಬೈರವ ಕಟ್ಟೆಗೆ ಹೂವನ್ನು ಸಮರ್ಪಿಸುತ್ತಿದ್ದರು. ಈ ಕಾರಣದಿಂದಲೇ ಕ್ಷೇತ್ರದ ಕೆರೆಗೆ ಬೈರೆತಿಕೆರೆ ಎಂದು ಹೆಸರು ಬಂತು ಎಂದು ಇತಿಹಾಸ ಹೇಳುತ್ತದೆ. ಸುಮಾರು 30 ಸೆಂಟ್ಸ್ ವಿಸ್ತಾರವಾದ ಈ ಕೆರೆಯ ಮಧ್ಯಭಾಗದಲ್ಲಿ ಮುರ ಕಲ್ಲಿನ ನಾಗನ ಕಟ್ಟೆ ಇದೆ. ಪ್ರಸ್ತುತ ಕೆರೆಯ ಪುನರುತ್ಥಾನ ಕಾರ್ಯ ನಡೆಯುತ್ತಿದ್ದು, ಸರಕಾರದ ಅನುದಾನದಲ್ಲಿ ಕಾಮಗಾರಿ ಕೊನೆಯ ಹಂತದಲ್ಲಿದೆ.
ಇಂದು ಕೆಯ್ಯೂರು ಬೆಡಿ
ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ ಮಾ. 21ರಂದು ಆರಂಭಗೊಂಡಿದ್ದು, ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಮಾ. 28ರ ವರೆಗೆ ನಡೆಯಲಿದೆ. ಮಾ. 26ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ದೇವರ ಬಲಿ ಹೊರಟು ಭೂತ ಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ಬಳಿಕ ಕೆಯ್ಯೂರು ಬೆಡಿ (ಸುಡುಮದ್ದು ಪ್ರದರ್ಶನ) ನಡೆಯಲಿದೆ. ಮಾ. 27ರಂದು ಮಹಾಗಣಪತಿ ಹೋಮ, ಕೋಶ ಪೂಜೆ, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ದೈವಗಳ ಭಂಡಾರ ತೆಗೆಯುವುದು ನಡೆಯಲಿದೆ. ಮಾ. 28ರಂದು ಬೆಳಗ್ಗೆ ಉಳ್ಳಾಕುಲು ನೇಮ, ವರ್ಣರ ಪಂಜುರ್ಲಿ, ರಕ್ತೇಶ್ವರಿ, ಪಿಲಿಚಾಮುಂಡಿ ನೇಮ, ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಕುಪ್ಪೆ ಪಂಜುರ್ಲಿ, ಗುಳಿಗ ದೈವದ ನೇಮ, ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.
ವಿಶೇಷ ವರದಿ