ಕದ್ರಿ: ತನ್ನ ಕ್ಷೇಮದೊಂದಿಗೆ ಇತರರ ಕ್ಷೇಮವನ್ನು ಬಯಸುವವನು ಉತ್ತಮ ಮನುಷ್ಯ. ಪ್ರತಿಯೊಬ್ಬರೂ ಸದ್ವಿಚಾರಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಬೇಕು ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ನುಡಿದರು.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜು ಪ್ರಸಾದದಲ್ಲಿ ನಡೆದ ಗುರುವಂದನ ತುಲಾಭಾರ ಸ್ವೀಕರಿಸಿ ಅವರು ಗುರುವಾರ ಆಶೀರ್ವಚನ ನೀಡಿದರು.
ತುಲಾಭಾರ, ಪಾದಪೂಜೆಯಂತಹ ಕಾರ್ಯಕ್ರಮಗಳು ಜನರ ಸಂಪರ್ಕಕ್ಕೆ ವೇದಿಕೆಯಾಗಿವೆ. ಬಾಂಧವ್ಯ ಗಟ್ಟಿಯಾಗಲು ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ. ಭಕ್ತರು ಮಾಡುವ ಸೇವೆ ಭಗವಂತನಿಗೆ ಸಮರ್ಪಣೆಯಾಗುತ್ತದೆ. ಆ ನಿಟ್ಟಿನಲ್ಲಿ ಪ್ರದೀಪಕುಮಾರ ಕಲ್ಕೂರ ಅವರ ಸೇವೆ ಶ್ಲಾಘನೀಯ ಎಂದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರೊ| ಎಂ.ಬಿ. ಪುರಾಣಿಕ್, ಕೆ.ಎಸ್. ಕಲ್ಲೂರಾಯ, ಕ್ಯಾ| ಗಣೇಶ್ ಕಾರ್ಣಿಕ್, ಕೆ. ಮೋನಪ್ಪ ಭಂಡಾರಿ, ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ ಮತ್ತಿತರರು ಉಪಸ್ಥಿತರಿದ್ದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಸ್ವಾಗತಿಸಿದರು. ಬೆಳಗ್ಗೆ ಶ್ರೀ ರಾಮವಿಠ್ಠಲ ದೇವರ ಮಹಾ ಪೂಜೆ ನಡೆಯಿತು.