Home ಧಾರ್ಮಿಕ ಸುದ್ದಿ ಕಡಿಯಾಳಿ ಗಣೇಶ: ಜಿಲ್ಲೆಯ ಹಿರಿಯ ಗಣೇಶೋತ್ಸವ

ಕಡಿಯಾಳಿ ಗಣೇಶ: ಜಿಲ್ಲೆಯ ಹಿರಿಯ ಗಣೇಶೋತ್ಸವ

1061
0
SHARE

ವಿಶೇಷ ವರದಿ
ಉಡುಪಿ :
ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಪೂಜೆಗೊಳ್ಳುವ ಕಾರಣ ಉಡುಪಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ಕಡಿಯಾಳಿ ಹೆಸರು ಸೇರಿಕೊಂಡಿದೆ. ಇದರ ಮೂಲ ಹೆಸರು ‘ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಡುಪಿ’, ಉಡುಪಿ ಜಿಲ್ಲೆಯ ಅತಿ ಹಿರಿಯ ಗಣೇಶೋತ್ಸವ ಇದು. ಈ ವರ್ಷ ಈ ಗಣೇಶೋತ್ಸವಕ್ಕೆ 53ನೆಯ ವರ್ಷ ನಡೆಯುತ್ತಿದೆ.

1967ರ ಗಣೇಶ ಚತುರ್ಥಿಗೆ ಮೂರ್‍ನಾಲ್ಕು ದಿನ ಇರುವಾಗ ಕಲ್ಸಂಕದ ಅಮ್ಮುಂಜೆ ಪದ್ಮನಾಭ ನಾಯಕ್‌ ಅವರ ಅಂಗಡಿಯಲ್ಲಿ (ಈಗ ಅಂಗಡಿ ಇಲ್ಲ) ಗುಜ್ಜಾಡಿ ನರಸಿಂಹ ನಾಯಕ್‌, ಕೆ.ದೇವದಾಸ ಭಂಡಾರಿ, ಪ.ವಸಂತ ಭಟ್ ಅವರು ಗಣೇಶೋತ್ಸವವನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಿ ಹೆಜ್ಜೆ ಮುಂದಿಟ್ಟರು. ಆಗ ಗಣೇಶನ ವಿಗ್ರಹ ರಚಿಸುವ ಪೇಂಟರ್‌ ಗಣಪತಿಯವರಲ್ಲಿ ಬೇರೊಬ್ಬರು ಒಂದು ವಿಗ್ರಹವನ್ನು ಬಿಟ್ಟುಹೋಗಿದ್ದರು. ಇದನ್ನು ತಂದು ಟಿ. ದೇವದಾಸ ಪೈಯವರ ಕಲ್ಸಂಕದ ಭಾರತ್‌ ಪ್ರಸ್‌ ಮಹಡಿಯಲ್ಲಿ ಪ್ರಥಮ ಗಣೇಶೋತ್ಸವವನ್ನು ಆಚರಿಸಿದರು.

ಆಗಲೇ ಕಲ್ಪನಾ ಟಾಕೀಸ್‌ ಆವರಣದಲ್ಲಿದ್ದ ಕಡಿಯಾಳಿ ಅನಂತರಾಮ ಉಪಾಧ್ಯರು ಆ ವಠಾರದಲ್ಲಿ ಗಣೇಶನನ್ನು ಇರಿಸಿ ಪೂಜಿಸುತ್ತಿದ್ದರು. ಇದನ್ನು ಮುಂದುವರಿಸುವುದು ಕಷ್ಟ ಎಂಬ ಕಾರಣಕ್ಕೆ ಅವರು ಮತ್ತು ಶೇಷಗಿರಿ ಕಾಮತ್‌, ಡಾ| ಮೋಹನದಾಸ ಪೈಯವರು 1967ರಲ್ಲಿ ಹಣ್ಣುಕಾಯಿಯನ್ನು ತಂದು ಈ ಉತ್ಸವದಲ್ಲಿ ವಿಲೀನಗೊಳಿಸಿದರು. ಈ ಕಾರಣಕ್ಕಾಗಿ 2ನೆಯ ವರ್ಷ ಗಣೇಶನನ್ನು ಕಲ್ಪಾನಾ ಟಾಕೀಸ್‌ ವಠಾರಕ್ಕೆ ಕೊಂಡೊಯ್ದು ಪೂಜಿಸಿದರು. ಮುಂದೆ 10-12 ವರ್ಷ ಗೋವಿಂದ ಕಲ್ಯಾಣ ಮಂಟಪ, ಗೀತಾಂಜಲಿ ಟಾಕೀಸ್‌, ಕೃಷ್ಣಾಪುರ ಮಠದ ಸಭಾಂಗಣ, ಬನ್ನಂಜೆ ನಾರಾಯಣಗುರು ಮಂದಿರ, ವೆಂಕಟರಮಣ ದೇವಸ್ಥಾನ, ಶಾರದಾ ಮಂಟಪ ಹೀಗೆ ವಿವಿಧೆಡೆ ‘ಸಂಚಾರಿ ಗಣೇಶೋತ್ಸವ’ ನಡೆಯಿತು.

1985ರಲ್ಲಿ ಕಡಿಯಾಳಿ ಕಾತ್ಯಾಯಿನಿ ಮಂಟಪಕ್ಕೆ ಬಂದ ಗಣೇಶೋತ್ಸವ ಮತ್ತೆ ಎಲ್ಲಿಗೂ ಹೋಗಲಿಲ್ಲ. ಆರಂಭದಿಂದ ಹಿಡಿದು 2010ರ ವರೆಗೆ ಅನಂತರಾಮ ಉಪಾಧ್ಯರು ನಿಧನರಾಗುವವರೆಗೂ ಅವರೇ ಅಧ್ಯಕ್ಷರಾಗಿ, ಪ.ವಸಂತ ಭಟ್ ಪ್ರ.ಕಾರ್ಯದರ್ಶಿಗಳಾಗಿದ್ದರು. ಅನಂತರ ಪ.ವಸಂತ ಭಟ್ ಅಧ್ಯಕ್ಷರಾಗಿ, ರಾಘವೇಂದ್ರ ಕಿಣಿ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಆರಂಭದಿಂದ ಇದುವರೆಗೂ ಐದು ದಿನಗಳ ಉತ್ಸವ ನಡೆಯುತ್ತಿದೆ. ಇದರಲ್ಲಿ ಸುವರ್ಣ ಸಂಭ್ರಮದಲ್ಲಿ ಮಾತ್ರ ಹತ್ತು ದಿನ ಆಚರಿಸಲಾಗಿತ್ತು. ಅತಿ ಹಿರಿಯ ಗಣೇಶನನ್ನು ಪೂಜಿಸಲು ಸಕಲ ಸಿದ್ಧತೆಗಳು ನಡೆದಿವೆ.

25ನೆಯ ವರ್ಷದ ಉತ್ಸವದಲ್ಲಿ 108 ಕಾಯಿ ಗಣಪತಿ ಹೋಮದೊಂದಿಗೆ ಆರಂಭಿಸಿದ ಅನ್ನಸಂತರ್ಪಣೆ ಇಂದಿಗೂ ಮುಂದುವರಿದಿದೆ. ಈ ಬಾರಿಯ ಗಣಪತಿ ಹೋಮ ಸೆ. 3ರಂದು ನಡೆಯಲಿದೆ.

ದೇಸೀ ಸಾಂಸ್ಕೃತಿಕ ಸ್ಪರ್ಶದ ಸ್ಪರ್ಧೆ
ಗಣೇಶೋತ್ಸವದ ಮೂಲ ಕಾರಣ ಕರ್ತರಾದ ಪುಣೆಯ ಬಾಲಗಂಗಾಧರ ತಿಲಕರ ಭಾವಚಿತ್ರವಿರಿಸಿ ಅವರನ್ನೇ ಒಂದು ರೀತಿಯಲ್ಲಿ ಮುಂದಿರಿಸಿಕೊಂಡು ಗೌರವ ಸಲ್ಲಿಸುವುದು ಈ ದೊಡ್ಡಣ್ಣ ಗಣೇಶೋತ್ಸವದ ವೈಶಿಷ್ಟ್ಯ. ನೆಲದ ಸಂಸ್ಕೃತಿಗೆ ಪೂರಕವಲ್ಲದ ಯಾವುದೇ ಡಾನ್ಸ್‌ಗಳು ಇಲ್ಲಿರುವುದಿಲ್ಲ. ಮಹಿಳೆಯರಿಗೆ, ಮಕ್ಕಳಿಗೆ, ಸಾರ್ವಜನಿಕರಿಗೆ ಹೂಹಾರ ಕಟ್ಟುವುದು, ರಂಗೋಲಿ, ಜಾನಪದ ನೃತ್ಯ, ದೇಶಭಕ್ತಿ ಗೀತೆ ಮೊದಲಾದ ಸ್ಪರ್ಧೆ ನಡೆಯಲಿದೆ.

LEAVE A REPLY

Please enter your comment!
Please enter your name here