ಕಡಬ: ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕೆಥೋಲಿಕ್ ದೇವಾಲಯದ ವಾರ್ಷಿಕ ಹಬ್ಬವು ಶುಕ್ರವಾರ ಸಾಯಂಕಾಲ ಹಾಗೂ ಶನಿವಾರ ನಡೆಯಿತು.
ಶುಕ್ರವಾರ ಸಾಯಂಕಾಲ ಪ್ರಾರ್ಥನೆ ಹಾಗೂ ದಿವ್ಯಬಲಿಪೂಜೆಗೆ ಮತ್ತು ಕೋಡಿಂಬಾಳ ಶಿಲುಬೆ ಗೋಪುರದ ವರೆಗಿನ ಮೆರವಣಿಗೆಗೆ ಪುತ್ತೂರು ಧರ್ಮಪ್ರಾಂತದ ಪ್ರೊಕ್ಯೂರೇಟರ್ ವಂ| ಜಾನ್ ನೇತೃತ್ವ ವಹಿಸಿದ್ದರು. ಈನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶನಿವಾರ ಮುಂಜಾನೆ ಪ್ರಭಾತ ಪ್ರಾರ್ಥನೆಯೊಂದಿಗೆ ಆರಂಭವಾದ ಹಬ್ಬದ ಎರಡನೇಯ ದಿನ ಪುತ್ತೂರು ಧರ್ಮಪ್ರಾಂತದ ವಿರ್ಕಾ ಜನರಲ್ ವಂ| ಡಾ| ಎಲ್ದೋ ಪುತ್ತನ್ ಕಂಡತ್ತಿಲ್ ದಿವ್ಯಬಲಿಪೂಜೆ ಹಾಗೂ ಮೆರವಣಿಗೆ ನೇತೃತ್ವ ವಹಿಸಿದ್ದರು. ಅನಂತರ ಭಕ್ತರು ಹರಕೆಯ ರೂಪದಲ್ಲಿ ತಂದ ವಸ್ತುಗಳನ್ನು ಏಲಂ ಮಾಡಲಾಯಿತು. ನೆರೆದ ಭಕ್ತರಿಗೆ ಹಬ್ಬದ ಪ್ರಸಾದ ವಿತರಣೆಯೂ ನಡೆಯಿತು.
ಕುಂತೂರು ಸಂತ ಜಾರ್ಜ್ ಮಲಂಕರ ಚರ್ಚ್ ಧರ್ಮಗುರುಗಳಾದ ವಂ| ರೋಯಿ ಮಾರ್ಟಿನ್, ಕೋಡಿಂಬಾಳ ಚರ್ಚ್ ಧರ್ಮಗುರುಗಳಾದ ವಂ| ಮಾಥ್ಯು ಕುರಿಯನ್, ಚರ್ಚ್ ಟ್ರಸ್ಟಿ ಜೋಸ್ ತೆಕ್ಕೇಪೂಕಳಂ, ಕಾರ್ಯದರ್ಶಿ ಸನೀಶ್ ಬಿ.ಟಿ., ಚರ್ಚ್ ಆಡಳಿತ ಮಂಡಳಿಯ ಸದಸ್ಯರು, ಭಗಿನಿಯರು ಮತ್ತು ಸಭಾವಿಶ್ವಾಸಿಗಳು ವಾರ್ಷಿಕ ಹಬ್ಬದಲ್ಲಿ ಪಾಲ್ಗೊಂಡು ಸಂತರ ಕೃಪೆಗೆ ಪಾತ್ರರಾದರು.