Home ಧಾರ್ಮಿಕ ಕ್ಷೇತ್ರಗಳು ದೈವಗಳ ನ್ಯಾಯ ತೀರ್ಮಾನ; ಸತ್ಯ ಸ್ಥಳ “ಕಾನತ್ತೂರು” ಕ್ಷೇತ್ರ ಮಹಿಮೆ

ದೈವಗಳ ನ್ಯಾಯ ತೀರ್ಮಾನ; ಸತ್ಯ ಸ್ಥಳ “ಕಾನತ್ತೂರು” ಕ್ಷೇತ್ರ ಮಹಿಮೆ

6006
0
SHARE

ಯಾರಾದರೂ ತೊಂದರೆ ನೀಡಿದರೆ ಅವರ ಜತೆಗೆ ಗುದ್ದಾಡಲಾರದೆ, ‘ನಿನ್ನನ್ನು ಆ ದೇವರು ಅಥವಾ ದೈವಗಳೇ ನೋಡಿಕೊಳ್ಳಲಿ’ ಎಂದು ಪ್ರಸಂಗಕ್ಕೆ ಮುಕ್ತಾಯ ಹಾಡುವುದು ಹೆಚ್ಚಿನ ಸಜ್ಜನರು ಮಾಡುವ ಕೆಲಸ. ದೈವ-ದೇವರುಗಳ ಮೇಲೆ ಭಾರ ಹಾಕುವುದು ದುಷ್ಟರಿಂದ ದೂರವಿರುವ ಸುಲಭ ಉಪಾಯ,ಅವರ ವಿರುದ್ದ ನ್ಯಾಯಾಲಯಕ್ಕೆ ದೂರು ನೀಡಿದರೆ, ಹಲವಾರು ಸಮಸ್ಯೆಗಳು, ಅದರಲ್ಲೂ ಸಾಕ್ಷಿಗಳನ್ನು ಕಲೆ ಹಾಕುವುದು ಬಹಳ ಕಷ್ಟದ ಕೆಲಸ.

ಆದರೆ ಇಂಥ ವ್ಯಾಜ್ಯಗಳನ್ನು ನಿಜಕ್ಕೂ ದೈವಗಳೇ ತೀರ್ಮಾನಿಸಿ, ಶಿಕ್ಷೆ ನೀಡಿದರೆ..!
ನೀವು ಸಾಕ್ಷಿಗಳನ್ನು ಕಲೆ ಹಾಕಬೇಕಿಲ್ಲ, ವಕೀಲರಲ್ಲಿ ವಿನಂತಿಸಬೇಕಿಲ್ಲ, ಪೋಲಿಸರನ್ನು ಎದುರಿಸಬೇಕಿಲ್ಲ. ಆದರೆ ಒಂದೇ ಶರತ್ತೆಂದರೆ ನೀವು ತಪ್ಪು ಮಾಡಿದ್ದು. ಅದನ್ನು ಮುಚ್ಚಿಟ್ಟಿರಬಾರದು.
ಹೇಗಿದೆ ದೈವಲೀಲೆ!

ಅರೆ,ಹಾಗೆಂದು ವ್ಯವಸ್ಥೆ ಇದೆಯೇ ಎಂದು ಹುಬ್ಬೇರಿಸದಿರಿ. ನಿಜಕ್ಕೂ ಅಂಥ ವ್ಯವಸ್ಥೆಯೊಂದು ತಲೆಮಾರುಗಳಿಂದ ಕಾರ್ಯ ನಿರ್ವಹಿಸುತ್ತದೆ.
ನಮ್ಮ ಕರ್ನಾಟಕದ ಪಕ್ಕದ ರಾಜ್ಯ ಕೇರಳದ ಜಿಲ್ಲೆಯ, ಗಡಿನಾಡು ಕಾಸರಗೋಡಿನ ‘ಕಾನತ್ತೂರು ನಾಲ್ವರ್ ದೈವಸ್ಥಾನ’ದಲ್ಲಿ ದೈವಗಳೆ ನ್ಯಾಯ ತೀರ್ಮಾನ ಮಾಡುತ್ತವೆ. ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕೇರಳದ ಅಸಂಖ್ಯಾತ ಭಕ್ತರು ಇಲ್ಲಿಗೆ ನಡಕೊಳ್ಳುತ್ತಾರೆ. ದೇಶಾದ್ಯಂತ ಖ್ಯಾತಿವೆತ್ತಿರುವ ಈ ತಾಣ ಸತ್ಯ ಸ್ಥಳವೆಂದೇ ಭಕ್ತರ ಮನಸ್ಸಿನಲ್ಲಿ ಜಾಗ ಪಡೆದಿದೆ. ಜನರು ಈ ಕ್ಷೇತ್ರದ ಹೆಸರನ್ನು ಉಚ್ಚರಿಸಲೂ ಹೆದರುತ್ತಾರೆ.

ದಾಯಾದಿ ಕಲಹ, ಭೂಮಿಯ ಪಾಲು-ಪಟ್ಟಿ, ಪರಂಪರೆಯ ವಾಕ್ ದೋಷ, ದಾಂಪತ್ಯ ಕಲಹ, ನಂಬಿಸಿ ಮೋಸ ಮಾಡುವುದು ಮತ್ತಿತರ ಸಂಗತಿಗಳ ಜತೆಗೆ, ವೈಯಕ್ತಿಕ ನೆಲೆಗಟ್ಟಿನ ಸಮಸ್ಯೆಗಳ ಪರಿಹಾರಕ್ಕೂ ಇಲ್ಲಿ ದೂರು ನೀಡಲಾಗುತ್ತದೆ.

ದೂರು ಸಲ್ಲಿಸುವುದು ಹೇಗೆ?
ಇಲ್ಲಿಗೆ ಹರಸಿಕೊಳ್ಳುವ ಭಕ್ತರು, ಸಂತ್ರಸ್ತರು ಕ್ಷೇತ್ರಕ್ಕೆ ಖುದ್ದಾಗಿ ಬಂದೇ ದೂರು ಸಲ್ಲಿಸಬೇಕು.ಹೀಗೆ ದೂರು ಸಲ್ಲಿಸಿದ ತತ್ ಕ್ಷಣ ಅವರನ್ನು ನಂಬಿ ದೂರನ್ನು ಸ್ವೀಕರಿಸಲಾಗುವುದಿಲ್ಲ. ಮೊದಲಿಗೆ ಅವರೆಷ್ಟು ಸತ್ಯವಾದಿಗಳು ಎಂಬುದನ್ನು ಹಲವಾರು ಪ್ರಶ್ನೆಗಳ ಮೂಲಕ ಪರಿಶೀಲಿಸಲಾಗುತ್ತದೆ.ಬಳಿಕವಷ್ಟೇ ದೂರು ಸ್ವೀಕಾರ.

ಇಂಥ ದೂರುಗಳಿಗೆ ಇತ್ತೀಚೆಗೆ ಒಂದು ದಾಖಲಾತಿ ಪುಸ್ತಕ ಇಡಲಾಗಿದೆ. ಇದು ಇಲ್ಲಿಗೆ ಬರುವ ಸಾವಿರಾರು ದೂರುಗಳನ್ನು ನೆನೆಪಿಟ್ಟುಕೊಳ್ಳಲು ಸಹಾಯಕವಾಗುತ್ತದೆ ಎನ್ನುತ್ತಾರೆ ಇಲ್ಲಿನ ಕಾರ್ಯದರ್ಶಿ ಬಲರಾಮ ನಾಯರ್.

ದೂರು ಸ್ವೀಕರಿಸಿದ ಬಳಿಕ ಎದುರು ಪಕ್ಷದವರಿಗೆ ಒಂದು ಕಾಗದ ಕಳುಹಿಸಲಾಗುತ್ತದೆ. ಇದು ಲಾಯರ್ ನೋಟೀಸಿನಂತಲ್ಲ, ಇದೊಂದು ಸೂಚನಾ ಪತ್ರ. ಒಂದು ವೇಳೆ ಆ ಪತ್ರ ಸಿಗದಿದ್ದರೆ, ದೂರು ಕೊಟ್ಟವರ ವಿನಂತಿಯಂತೆ ಮತ್ತೊಂದು ಪತ್ರವನ್ನು ಕಳುಹಿಸಿಕೊಡಲಾಗುತ್ತದೆ. ಹೆಚ್ಚೆಂದರೆ ಮೂರು ಬಾರಿ ಪತ್ರ ಕಳುಹಿಸಿಕೊಡಲಾಗುತ್ತದೆ.

ವ್ಯಾಜ್ಯ ತೀರ್ಮಾನ ಯಾರಿಂದ?
ಕಾನತ್ತೂರು ಒಂದು ಮನೆತನಕ್ಕೆ ಸೇರಿದ ಕ್ಷೇತ್ರ. ಇಲ್ಲಿನ ಒಡೆತನ ಮತ್ತು ಆಡಳಿತ ನಡೆಸುತ್ತಿರುವವರು ’ಕಾನತ್ತೂರು ಪುದುಕ್ಕುಡಿ ನಾಯರ್ ತರವಾಡ್ (ಮನೆತನ)’ ನವರು.
ಮಾವನಿಂದ ಸೋದರಳಿಯನಿಗೆ ಆಸ್ತಿ ಹಸ್ತಾಂತರವಾಗುವ ಅಳಿಯಕಟ್ಟು ಕ್ರಮ ಇವರದ್ದು. ಈಗ ದೈವಸ್ಥಾನ ಹಾಗೂ ಅದಕ್ಕೆ ಆಡಳಿತ, ಪರಂಪರಾಗತವಾಗಿ ಮುಂದುವರಿದುಕೊಂಡು ಬಂದು, ಈ ಮನೆತನದ ಮೂರು ಕುಟುಂಬಗಳಲ್ಲಿ ಹಂಚಿ ಹೋಗಿದೆ. ಈ ಕುಟುಂಬಗಳ ಆಡಳಿತಾವಧಿ ತಲಾ ಮೂರು ವರ್ಷಗಳು.

ಆಡಳಿತಾವಧಿಯಲ್ಲಿ ಕುಟುಂಬದ ಹಿರಿಯರೂ ಮುಖ್ಯಸ್ಥರೂ (ಕಾರ್ಣವರ್) ಆದವರು ಆಡಳಿತ ಮಂಡಳಿಯ ಟ್ರಸ್ಟಿಯೂ, ಧರ್ಮದರ್ಶಿಯೂ ಆಗಿ ಕಾರ್ಯ ನಿರ್ವಹಿಸುತ್ತಾರೆ. ವಾದ-ವಿವಾದಗಳನ್ನು ಆಲಿಸಿ ತೀರ್ಪು ಕೊಡುವವರು ಆವರೇ!
ಈಗ ಇಲ್ಲಿ ಆಡಳಿತ ಟ್ರಸ್ಟಿ ಆಗಿರುವವರು ಕೆ.ಪಿ. ಗೋಪಾಲನ್ ನಾಯರ್. ಕುಟುಂಬದ ಇತರರು, ಮುಖ್ಯವಾಗಿ ಅಳಿಯಂದಿರು, ಅವರಿಗೆ ಸಹಾಯಕರು.

ತೀರ್ಪು ನೀಡುವ ಕ್ರಮ
ಕುಲದೇವಿ ಭುವನೇಶ್ವರಿ ಸನ್ನಿಧಿಯಲ್ಲಿ, ಇಲ್ಲಿರುವ ಗರಡಿ ಮನೆ(ಕಳರಿ)ಯ ಮುಂಭಾಗದಲ್ಲಿ ಕಾರ್ಣವರ್ ಮತ್ತು ಇತರ ಕುಟುಂಬಸ್ಥರ ಎದುರು ನಿಗದಿತ ದಿನಾಂಕದಂದು ಎರಡೂ ಪಕ್ಷಗಳ ಹಾಜರಾಗಬೇಕು.ತಮ್ಮ ವಾದ-ವಿವಾದಗಳನ್ನು ಮಂಡಿಸಬೇಕು.ಈ ಮಂಡನೆಯನ್ನು ಆಲಿಸುವ ಧರ್ಮದರ್ಶಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಎಲ್ಲವನ್ನೂ ಆಲಿಸಿದ ಬಳಿಕ ಧರ್ಮದರ್ಶಿಗಳು ಒಂದು ತೀರ್ಮಾನ ಘೋಷಿಸುತ್ತಾರೆ. ಈ ತೀರ್ಮಾನಕ್ಕೆ ಅತ್ಯಂತ ಮಹತ್ತ್ವವಿದೆ. ಕುಲದೇವಿ, ನಾಲ್ವರ್ (ನಾಲ್ಕು) ದೈವಗಳು ಮತ್ತು ಇರುವರ್ (ಇಬ್ಬರು) ಭೂತಗಳ ಪ್ರೇರಣೆಯಿಂದ ಅವರು ಈ ತೀರ್ಮಾನ ನೀಡುತ್ತಾರೆ ಎಂಬ ಪ್ರತೀತಿ ಇದೆ.

ಇದು ಅಂತಿಮ ತೀರ್ಮಾನ, ಇದನ್ನು ಎರಡೂ ಪಕ್ಷಗಳವರು ಮೀರಿ ಹೋಗುವಂತಿಲ್ಲ, ಕೆಲವೊಮ್ಮೆ ಒಂದೇ ದಿನದಲ್ಲಿ ಇಂಥ ತೀರ್ಮಾನಗಳು ಹೊರಬೀಳುವುದಿದೆ. ಕೆಲಮೊಮ್ಮೆ ವ್ಯಾಜ್ಯ ದೊಡ್ಡದಾಗಿದ್ದರೆ, ಹಣವೋ ಸಂಪತ್ತೋ ಹೆಚ್ಚು ಮೌಲ್ಯದ್ದು ಎಂದಾದರೆ ತೀರ್ಮಾನ ಕೈಗೊಳ್ಳಲು ತಿಂಗಳುಗಳೇ ಹಿಡಿಯಬಹುದು. ಕೆಲವೊಮ್ಮೆ ದೂರು ಕೊಟ್ಟವರು ಹಾಗೂ ಪ್ರತಿವಾದಿಗಳ ಕುಟುಂಬದ ಮುಖ್ಯ ಸದಸ್ಯರೆಲ್ಲರಿಗೂ ಹಾಜರಾಗಲು ಸಾಧ್ಯವಾಗದಿದ್ದರೂ ತೀರ್ಮಾನ ವಿಳಂಬವಾಗಬಹುದು. “ಸಣ್ಣ ಪುಟ್ಟ ಸಮಸ್ಯೆಗಳಾದರೆ ಒಂದರಿಂದ ಎರಡು ಗಂಟೆಗಳೊಳಗೆ ಮುಗಿದು ಹೋಗುವುದಿದೆ” ಎನ್ನುತ್ತಾರೆ ಬಲರಾಮ ನಾಯರ್.

ಸಾಕ್ಷಿ ಪ್ರಮಾಣವೂ ಸತ್ಯ ಪ್ರಮಾಣವೂ
ನ್ಯಾಯಾಲಯ ಸಾಕ್ಷಿ ಪ್ರಮಾಣವನ್ನು ಅವಲಂಬಿಸಿದ್ದರೆ, ಕಾನತ್ತೂರು ಸನ್ನಿಧಿ ಸತ್ಯ ಪ್ರಮಾಣವನ್ನು ಅವಲಂಬಿಸಿದೆ.
ಇಲ್ಲಿ ದೂರು ಸಲ್ಲಿಸಲು ಬರುವವರಲ್ಲಿ ಹಲವು ಭಾಷಿಗರು, ಹಲವು ಜಾತಿ, ಧರ್ಮಗಳವರೂ ಇರುತ್ತಾರೆ. ಆಡಳಿತ ಮಂಡಳಿಯ ಮನೆಭಾಷೆ ಮಲಯಾಳಮ್, ಕಲಿತ ಭಾಷೆ ಇಂಗ್ಲಿಷ್, ಜತೆಗೆ ಅಲ್ವ ಸ್ವಲ್ಪ ಕನ್ನಡ ಮಾತನಾಡುವವರಿದ್ದಾರೆ.ಹೀಗಾಗಿ ಮಲಯಾಳಮ್, ಇಂಗ್ಲೀಷ್ ಗೊತ್ತಿಲ್ಲದ, ತುಳು ಕನ್ನಡ ಮಾತ್ರ ಗೊತ್ತಿರುವ ಭಕ್ತರ ಅನುಕೂಲಕ್ಕಾಗಿ ಭಾಷಾಂತರಕಾರರೊಬ್ಬರನ್ನು ಆಡಳಿತ ಮಂಡಳಿ ನಿಯಮವಿದೆ.

‘ಕೋರ್ಟಿನಲ್ಲಿ ನೀಡಿದ ತೀರ್ಪು ಸಮಾಧಾನವಾಗದೆ ಇಲ್ಲಿಗೆ ಬಂದರೆ?’ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಬಲರಾಮ ನಾಯರ್ ಅವರು, ಆಗ ನಾವೂ ಏನೂ ಮಾಡುವಂತಿಲ್ಲ, ಕೋರ್ಟನ್ನು ಮೀರಿ ಆಡಳಿತ ಮಂಡಳಿ ಹೋಗುವುದಿಲ್ಲ’ ಎನ್ನುತ್ತಾರೆ. ‘ನಮಗೆ ಕೋರ್ಟು ಬೇಡ ಎನ್ನುವವರು, ಅಲ್ಲಿಂದ ಪ್ರಕರಣ (ಕೇಸ್)ವನ್ನು ಮೊದಲಿಗೆ ಹಿಂತೆಗೆದುಕೊಳ್ಳಬೇಕು. ಬಳಿಕವಷ್ಟೇ ಇಲ್ಲಿ ದೂರು ಸಲ್ಲಿಸಬಹುದು.ಆದರೆ ಅಂಥ ಪ್ರಕರಣಗಳಲ್ಲಿ ಇಲ್ಲಿಂದ ಸೂಚನಾ ಪತ್ರ ಕಳುಹಿಸುವ ಕ್ರಮವಿಲ್ಲ. ಎರಡೂ ಪಕ್ಷಗಳವರು ಒಮ್ಮತದಿಂದ ಬಂದರೆ, ಇಲ್ಲಿ ಮಾತುಕತೆಗೆ, ಪ್ರಾರ್ಥನೆಗೆ ಅವಕಾಶವಿದೆ. ನಾವು ಪರ್ಯಾಯ ಕೋರ್ಟ್ ಆಗಿ ಕಾರ್ಯ ನಿರ್ವಹಿಸುವುದಿಲ್ಲ, ಕೋರ್ಟಿನ ರ್ತೀಪನ್ನು ನಾವು ಪ್ರಶ್ನಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಹೀಗೆ ಕೋರ್ಟಿನಲ್ಲಿದ್ದ ಪ್ರಕರಣಗಳನ್ನು ವಾದಿ-ಪ್ರತಿವಾದಿಗಳಿಬ್ಬರೂ ಒಮ್ಮತದಿಂದ ಹಿಂತೆಗೆದುಕೊಂಡು ಕಾನತ್ತೂರಿನಲ್ಲಿ ತೀರ್ಮಾನ ಪಡೆದುಕೊಂಡ ಪ್ರಸಂಗಗಳೂ ಬಹಳಷ್ಟಿವೆ.

ಯಾವ ದಿನಗಳಲ್ಲಿ ನ್ಯಾಯ ತೀರ್ಮಾನ ?
ವಾರದ ಆರು ದಿನಗಳಲ್ಲೂ ವ್ಯಾಜ್ಯ ಸಂಬಂಧಿ ಮಾತುಕತೆಗಳ ಜಾರಿಯಲ್ಲಿರುತ್ತವೆ.ಆದರೆ ವಿಷು,ಓಣಮ್,ಆದಿತ್ಯವಾರ,ಮೂಲಸ್ಥಾನದಲ್ಲಿ ವಿಶೇಷ ಪೂಜೆ ನಡೆಸುವ ದಿನವಾದ ಮಂಗಳವಾರ, ಸಂಕ್ರಮಣ, ಜಾತ್ರೆಯ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಕೆಲಸಗಳಲ್ಲಿ ಆಡಳಿತ ಮಂಡಳಿ ವ್ಯಸ್ತರಾಗಿರುವುದರಿಂದ ವ್ಯಾಜ್ಯ ತೀರ್ಮಾನದ ಕೆಲಸಗಳು ಕಡಿಮೆಯಾಗಿರುತ್ತವೆ. ಉಳಿದಂತೆ ವರ್ಷದಲ್ಲಿ ಸುಮಾರು ಮೂರು ಸಾವಿರ ಇಂಥ ದೂರುಗಳು ಬರುತ್ತವೆ.

ಕೇವಲ ದೂರುಗಳ ವಿಲೇವಾರಿಯಲ್ಲದೆ, ಭಕ್ತರ ಇತರ ಬೇಡಿಕೆಗಳಿಗೆ ಅನುಗುಣವಾಗಿ ಕವಡೆ ಪ್ರಶ್ನೆ, ಸ್ವರ್ಣ ಪ್ರಶ್ನೆ, ರಾಶಿ ನೋಡುವುದು ಮೊದಲಾದ ಸೇವೆಗಳೂ ಇಲ್ಲಿ ದೊರೆಯುತ್ತವೆ.

ಭಯವೋ ಭಕ್ತಿಯೋ
ಪತ್ರ ತಲಪುವುದೇ ಬೇಡ, ದೂರು ಕೊಟ್ಟ ಸುದ್ದಿ ತಿಳಿದ ತತ್ ಕ್ಷಣ ಹಾಜರಾಗುವವರಿದ್ದಾರೆ. ಬೇಗನೆ ಎರಡೂ ಕಡೆಯವರನ್ನು ಕರೆಸಿ ತೀರ್ಮಾನಿಸಿಬಿಡಿ’ ಎಂದೂ ವಿನಂತಿಸುವವರಿದ್ದಾರೆ. ಹೀಗಾಗಿ ಎರಡೂ ಕಡೆಯವರು ರಾಜಿಯಾಗಿ, ಜತೆಯಾಗಿ ಪ್ರಾರ್ಥಿಸಿ ನಗುನಗುತ್ತಾ ಹೋಗುವುದು ಇಲ್ಲಿನ ಸಹಜ ಸಂಗತಿಗಳಲ್ಲೊಂದು. ಆದರೆ ದೂರು ಕೊಟ್ಟು, ಸೂಚನಾ ಪತ್ರ ತಲಪಿಯೂ ಪ್ರತಿವಾದಿ ಹೋಗದಿದ್ದರೆ ಅಥವಾ ಇಲ್ಲಿನ ತೀರ್ಮಾನವನ್ನು ಒಪ್ಪದಿದ್ದರೆ ಮುಂದೇನು?

ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ, ಅವರನ್ನು ದೈವಗಳೇ ನೋಡಿಕೊಳ್ಳುತ್ತದೆ ಎಂದರ್ಥ.ಇಲ್ಲಿರುವ ‘ಬೇತಾಳ’ ಎನ್ನುವ ಶಕ್ತಿಯೊಂದು ತಪ್ಪುಗಾರರನ್ನು ಎಳೆದು ತರುತ್ತದೆ ಎಂಬ ಭಾವನೆ ಆಡಳಿತ ಮಂಡಳಿಯದ್ದು. ಮೊದಲಿಗೆ ಸೂಚನಾ ಪತ್ರವನ್ನು ಅಸಡ್ಡೆ ಮಾಡಿ,ಬಳಿಕ ಹಲವು ಕಷ್ಟಗಳನ್ನು ಅನುಭವಿಸಿ, ಅಂತಿಮ ಪರಿಹಾರವಾಗಿ ಕ್ಷೇತ್ರಕ್ಕೆ ಬಂದು,ಪ್ರಾರ್ಥನೆ ಮಾಡಿ, ತಪ್ಪು ಕಾಣಿಕೆ ನೀಡಿದ ಹಲವು ಪ್ರಕರಣಗಳನ್ನು ಅವರು ಉದಾಹರಿಸುತ್ತಾರೆ ಇಲ್ಲಿನ ತೀರ್ಮಾನವನ್ನು ಒಪ್ಪದಿರುವವರಿಗೂ ಅದೇ ಶಿಕ್ಷೆ ಎನ್ನುತ್ತಾರೆ ಭಕ್ತರು.

ಧರ್ಮ ಬುದ್ದಿಯಲ್ಲಿ ವ್ಯವಹರಿಸುವ ಜನರಿಗೆ ತೊಂದರೆಯಾಗದು ಎನ್ನುವ ಭಾವನೆ ಈ ನ್ಯಾಯ ತೀರ್ಮಾನದಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಹಾಗಾಗಿ ಇಲ್ಲಿ ಪ್ರತಿದಿನವೂ ಭಕ್ತಾದಿಗಳ ಜಂಗುಳಿ. ವಾದಿ-ಪ್ರತಿವಾದಿಗಳು ಮಾತ್ರವಲ್ಲ ತಮ್ಮ ಕಷ್ಟವನ್ನು ಹೇಳಿ ಪ್ರಾರ್ಥನೆ ಸಲ್ಲಿಸುವವರು, ಶುಭಕಾರ್ಯಕ್ಕೆ ಅನುವು ಕೇಳುವವರು, ಮೌನವಾಗಿ ದೇವರ ಮುಂದೆ ನಿಂತು ಪ್ರಾರ್ಥಿಸಿ ಹೋಗುವವರು…ಹೀಗೆ ವಿಭಿನ್ನ ಮನೋಭಾವದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.ಅವರೆಲ್ಲರಿಗೂ ಇದೊಂದು ಸತ್ಯಸ್ಥಳ ಎಂಬ ನಂಬಿಕೆ ಗಟ್ಟಿಯಾಗಿದೆ.
ಇದು ಕನಕ ಮಹರ್ಷಿಯ ಊರು!

ಪಯಸ್ವಿನಿ ನದಿಯ ಮಡಿಲಲ್ಲಿರುವ ಈ ಪ್ರದೇಶದಲ್ಲಿ ಬಹಳ ಹಿಂದೆ ಕನಕ ಮಹರ್ಷಿ ತಪಸ್ಸು ಮಾಡುತ್ತಿದ್ದರಂತೆ. ಆಗ ಇಲ್ಲಿ ಅಗ್ನಿಯಾಜನ, ಮಾಹಾಯಾಗಗಳು ನಡೆಯುತ್ತಿದ್ದವು. ಹಾಗಾಗಿ ಇಲ್ಲಿಗೆ ಕನಕತ್ತೂರು ಎಂದೂ ಹೆಸರಾಯಿತ.ಕಾಲಕ್ರಮೇಣ ಅದೇ ಕಾನತ್ತೂರು ಎಂದಾಗಿದೆ. ಇಲ್ಲಿನ ಅರಮನೆಗೆ ಈಗಲೂ “ಕನಕತ್ತೂರು ಅರಮನೆ’ ಎಂದೇ ಹೆಸರು. ಅದೇ ರೀತಿ ಇಲ್ಲಿರುವ ದೈವಗಳು ಎಲ್ಲಿಂದ ಬಂದವು ಎಂಬ ಪ್ರಶ್ನೆಗೂ ಕುತೂಹಲಕಾರಿ ಐತಿಹ್ಯವೊಂದಿದೆ. ಇಲ್ಲಿರುವ ದೈವಗಳ ಕರ್ನಾಟಕದಿಂದ ಬಂದವು ಎನ್ನುತ್ತಾರೆ ಬಲರಾಮ ನಾಯರ್.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ರೇತ್ರದ ಕುಮಾರಧಾರಾ ಪವರ್ತದಲ್ಲಿದ್ದ ಮುತ್ತೋರ್ (ಹಿರಿಯವರು-ಪೂಮಾಣಿ), ಎಳೆಯೋರ್(ಕಿರಿಯವರು-ಕಿನ್ನಿಮಾಣಿ) ಭೂತಗಳಿಗೆ ಇರಲ್ಲೊಂದು ಪ್ರಶಸ್ತ ಸ್ಥಳ ಬೇಕೇಂದಾಯಿತು. ಆಗ ಅವರು ಮೊದಲಿಗೆ ಕ್ಷೇತ್ರದೊಡೆಯನಾದ ಸುಬ್ರಹ್ಮಣ್ಯನಲ್ಲಿಯೇ ಕೇಳಿದರು. ಅಲ್ಲಿ ಒಪ್ಪದಿದ್ದಾದ ಅಲ್ಲಿನ ಗರುಡಗಂಭವನ್ನು ಮುರಿದು ಹಾಕಿ, ಸ್ಥಳ ಹುಡುಕುತ್ತಾ ತೆಂಕಣ ಮುಖ ಮಾಡಿ ಹೊರಟು, ಕಾನತ್ತೂರಿಗೆ ತಲಪಿದರು. ಇದು ಒಳ್ಳೆಯ ಸ್ಥಳವೆಂದು ಮನಗಂಡು ಇಲ್ಲೇ ನೆಲೆಯಾದರು. “ಇರುವವರ್ ಭೂತಂಗಳ್” (ಇಬ್ಬರು ಭೂತಗಳು ಎಂದು ಖ್ಯಾತಿ ಪಡೆದರು ಎಂಬ ಐತಿಹ್ಯವಿದೆ.

ಕರ್ನಾಟಕದ ಚಾರಂವಾಡಿ (ಚಾರ್ಮಾಡಿ) ದಾರಿಯಾಗಿ ಘಟ್ಟದಿಂದ ಇಳಿದ ಪಂಜುರ್ಲಿ ಎಂಬ ದೈವ ನೆಲೆಯಾಗಲು ಸ್ಥಳ ಹುಡುಕುತ್ತಾ ಧರ್ಮಸ್ಥಳಕ್ಕೆ ಹೋಯಿತು. ಅಲ್ಲಿ ಸಾನ್ನಿಧ್ಯ ಕೊಟ್ಟು, ಬಳಿಕ ನೇತ್ರಾವತಿ ದಾಟಿ, ಸೂಕ್ತ ಸ್ಥಳ ಹುಡುಕುತ್ತಾ ಮುಂದುವರಿಯಿತು. ನೇತ್ರಾವತಿಯ ಇನ್ನೊಂದು ದಡದಲ್ಲಿರುವ ಮಂಗಳೂರಿನ ಜಪ್ಪು-ಕುಡುಪ್ಪಾಡಿಗೆ ಬಂದು ಅಲ್ಲಿ ಅಘ್ಯ ಸ್ವೀಕಾರ ಮಾಡುತ್ತದೆ. ಅಲ್ಲಿರುವ ಸ್ವಯಂಭೂ ವಿಷ್ಣು ಮೂರ್ತಿ ದೈವದ ಜತೆ ಸೇರಿ ಮತ್ತೆ ಸಂಚಾರ ಮುಂದುವರಿಸುತ್ತದೆ.ಅಡೂರು ಕೌಡಿಂಗಾನ ವನ ಹಾಗೂ ಕುಂಟಾರು ಮಂತ್ರ ಶಾಲೆಯಲ್ಲಿ ರಕ್ತೇಶ್ವರಿ ಹಾಗೂ ಚಾಮುಂಡಿಯನ್ನು ಕೂಡಿಕೊಂಡು ಸ್ಥಳ ಹುಡುಕುತ್ತಾ ತೆಂಕಣ ಮುಖ ಮಾಡಿ ಮುಂದುವರಿದು, ಕಾನರ್ತೂರು ಕಾವು (ದೇಗುಲ)ಗೆ ಬಂದು ಸೇರುತ್ತದೆ. ಹೀಗೆ ಪಂಜುರ್ಲಿ, ವಿಷ್ಣುಮೂರ್ತಿ, ರಕ್ತೇಶ್ವರಿ, ಚಾಮುಂಡಿ ಎಂಬ ‘ನಾಲುವರ್’ ದೈವಗಳು ಕಾನತ್ತೂರಿನಲ್ಲಿ ನೆಲೆಯಾಗುತ್ತಾರೆ.

ಆ ಕಾಲದಲ್ಲಿ ಕಾನತ್ತೂರಿನಲ್ಲಿ ತುಳುನಾಡ ಬಲ್ಲಾಳರ ಆಡಳಿತವಿರುತ್ತದೆ. ಇಲ್ಲಿರುವ ಅರಮನೆ ಹಾಗೂ ಕಳರಿ (ಗರಡಿ) ಮನೆ ಎರಡೂ ಅವರದಾಗಿತ್ತು. ಅಲ್ಲೆನೋ ತಕರಾರು ನಡೆದು, ಸೇನಾಧಿಪತಿಯ ವಶವಾಗುತ್ತದೆ. ಅ ಸೇನಾಧಿಪತಿಯೇ ಈ ನಾಯರ್ ವಂಶಸ್ಧರ ಮೂಲ ಪುರುಷ. ಅವನಿಗೆ ಮಕ್ಕಳಿರಲಿಲ್ಲ. ಆತ ಕರಿಚ್ಚೇ(ಶ್ಮೇ)ರಿನ ನಾಯರ್ ತರನಾಡಿನಿಂದ ದತ್ತು ತೆಗೆದುಕೊಂಡರು ವಂಶ ಮುಂದುವರಿಸುತ್ತಾರೆ.ಅಂದಿನಿಂದ ಶ್ರೀ ಕ್ಷೇತ್ರದ ವಂಶಪಾರಂಪರ್ಯ ಆಡಳಿತ ಮುಂದುವರಿಯುತ್ತಿದೆ.

ಕಾನತ್ತೂರಿನ ಕಳರಿಯಲ್ಲಿ ಅರಸರ ಕಾಲದಲ್ಲೇ ಭುವನೇಶ್ವರಿ ದೇವಿಯ ಸನ್ನಿಧಿ (ಪ್ರತಿಷ್ಟೆ) ಇತ್ತು.ದೇವಿಯ ಜತೆಗೆ ದೈವಗಳು, ಭೂತಗಳು ಹಾಗೂ ಸ್ಥಳದ ಇತರ ಶಕ್ತಿಗಳು ಸೇರಿವೆ ಎಂದು ಸ್ಥಳ ಪುರಾಣದಲ್ಲಿನ ವಿವರವನ್ನು ಮುಂದಿಡುವ ಬಲರಾಮ ನಾಯರ್, ಈ ಸ್ಥಳಕ್ಕೆ ಸುಮಾರು 950 ವರ್ಷಗಳ ಪರಂಪರೆಯಿದೆ ಎನ್ನುತ್ತಾರೆ.ಅಂದಿನಿಂದ ಆರಂಭಗೊಂಡ ನ್ಯಾಯ ತೀರ್ಮಾನ ಸೇವೆ ಇಂದೂ ಮುಂದುವರಿಯುತ್ತಿದೆ.

ಇಲ್ಲಿ ದೂರು ಸಲ್ಲಿಸುವವರು ಸಾಂಕೇತಿಕವಾಗಿ ಕಿರುಕಾಣಿಕೆಯನ್ನು ಭುವನೇಶ್ವರಿಯ ಸನ್ನಿಧಿಯಲ್ಲಿರುವ ಕಾಣಿಕೆ ಡಬ್ಬಕ್ಕೆ ಅರ್ಪಿಸುತ್ತಾರೆ. ನ್ಯಾಯ ಪಡೆದು ಇತರ ಸೇವೆ ಪಡೆದು ಸಂತುಷ್ಟರಾದವರೂ ಅದೇ ರೀತಿ ಮಾಡುತ್ತಾರೆ. ಇಷ್ಟೇ ಮೊತ್ತ ಎಂಬ ಕ್ರಮವಿಲ್ಲ. ಇಲ್ಲಿಗೆ ಬರುವ ಭಕ್ತರಿಗೆ ಉಚಿತ, ಅಚ್ಚುಕಟ್ಟಾದ ಊಟೋಪಚಾರದ ವ್ಯವಸ್ಥೆಯೂ ಇದೆ.
ಪ್ರೇತ ವಿಮೋಚನೆ ಪಕ್ರಿಯೆ ಕಾನತ್ತೂರು ಕ್ಷೇತ್ರ ವಿಮೋಚನೆಗೆ ಸಂಬಂಧಿಸಿದ ವಿಧಿಯಾಚರಣೆಗೆ ವಿಶೇಷ ಪ್ರಸಿದ್ಧಿ ಪಡೆದಿದೆ. ಮರಣಹೊಂದಿದರೂ, ಭವಬಂಧನದಿಂದ ಮುಕ್ತಿ ಪಡೆಯದೆ ಇರುವ ಆತ್ಮಗಳೇ ಪ್ರೇತಗಳು.ಇಂಥ ಪ್ರೇತಗಳು ಕುಟುಂಬದ ಸದಸ್ಯರಿಗೆ ತೊಂದರೆ ಕೊಡುತ್ತವೆ ಎಂಬುದು ಒಂದು ನಂಬಿಕೆ. ಕುಟುಂಬದಲ್ಲಿ ವಿನಾಕಾರಣ ಸಮಸ್ಯೆಗಳು ತಲೆದೋರುವುದು.ಅಕಾಲ ಮರಣ ಸಂಭವಿಸುವುದು ಇದರ ಲಕ್ಷಣ. ಯಾಕೆ ಹೀಗೆ?

ಸಿಟ್ಟಿನ ಸಂದರ್ಭದಲ್ಲಿ ಯಾವುದೇ ಪವಿತ್ರ ಕ್ಷೇತ್ರದ ಹೆಸರಿನಲ್ಲಿ ಆಣೆ-ಪ್ರಮಾಣ ಮಾಡಿ, ಬಳಿಕ ಅದಕ್ಕೆ ಪರಿಹಾರ ಮಾಡಿಕೊಳ್ಳದೆ ಜತೆ ಸೇರಿದರೆ ಅದು ‘ವಾಗ್ದೋಷ’ ಅನ್ನಿಸಿಕೊಳ್ಳುತ್ತದೆ. ಇದರ ಜತೆಗೆ, ಕಪ್ಟಕಾಲದಲ್ಲಿ ಹೇಳಿಕೊಂಡ ಹರಕೆಯನ್ನು ಸುಖ ಬಂದಾಗ ಮರೆತು ಬಿಡುವುದು, ಕ್ಷೇತ್ರದಲ್ಲಿ ನೀಡಿದ ತೀರ್ಪನ್ನು ಮನ್ನಿಸದಿರುವುದು ಮೊದಲಾದ ಹಲವಾರು ಕಾರಣಗಳೂ ಸೇರುತ್ತವೆ.

ಪ್ರೇತದೋಷ ಉಂಟಾಗುವ ಇನ್ನೊಂದು ಮುಖ್ಯ ಕಾರಣವೆಂದರೆ, ಸತ್ಯವಂತರ ಸಾತ್ವಿಕ ಸಿಟ್ಟು ಅನ್ಯಾಯ ಮಾಡಿದ ಕುಟುಂಬಕ್ಕೆ ತಲೆತಲಾಂತರದವರೆಗೆ ಶಾಪವಾಗಿ ಕಾಡುತ್ತದೆ ಎಂಬ ನಂಬಿಕೆ. ತನಗೆ ಅನ್ಯಾಯ ಮಾಡಿದವರನ್ನು ‘ಆ ಕಾನತ್ತೂರಿನ ದೈವಗಳೇ ನೋಡಿಗೊಳ್ಳಲಿ” ಎಂದು ನೊಂದವರು ಪ್ರಾರ್ಥಿಸಿದರೆ ಅಥವಾ ಬಹಿರಂಗವಾಗಿ ಹೇಳಿಬಿಟ್ಟರೆ, ಆ ನೊಂದ ಮನಸ್ಸಿನ ಬಾಧೆ, ಅನ್ಯಾಯಿಯನ್ನು ಸತ್ತರೂ ಬಿಡದೆ ಕಾಡುತ್ತದೆ. ಅಷ್ಟೇ ಅಲ್ಲ, ಅನ್ಯಾಯ ಮಾಡಿದವರ ಕುಟುಂಬದ ಇತರ ಮಂದಿಗೂ ಅದೇ ಶಿಕ್ಷೆ.
ಈ ಹಿನ್ನೆಲೆಯಲ್ಲಿ ಪ್ರೇತಬಾಧೆಗೆ ಸಂಬಂಧಿಸಿದ ಎರಡೂ ಕುಟುಂಬಗಳ ಸದಸ್ಯರು ಒಟ್ಟು ಸೇರಿ, ಪರಸ್ಪರ ವೈಮನಸ್ಸನ್ನು ಪರಿಹರಿಸಿಕೊಂಡು, ದೈವಗಳ ಸನ್ನಿಧಿಯಲ್ಲಿ ಪ್ರಾರ್ಥಿಸುವ ಕ್ರಿಯೆಗೆ ವಿಶೇಷ ಮಹತ್ವವಿದೆ.

ಇಂಥ ಸಮಸ್ಯೆಗಳನ್ನು ಹೊತ್ತು ತರುವವರು ಸಾವಿರಾರು ಮಂದಿ. ಡಿಸೆಂಬರ್ ತಿಂಗಳ 28 ರಿಂದ ಜನವರಿ ಒಂದರವರೆಗೆ, ಈ ಕ್ಷೇತ್ರದಲ್ಲಿ ಜಾತ್ರೆಯ ಸಂಭ್ರಮ, ಇದು ವಾರ್ಷಿಕ ‘ಕಳಿಯಾಟ ಮಹೋತ್ಸದ’ದ ಸಂದರ್ಭ. ಈ ಸಂದರ್ಭದಲ್ಲಿ ಸುಮಾರು ಒಂದೂವರೆ ಸಾವಿರ ಪ್ರೇತಗಳಿಗೆ ವಿಮೋಚನೆ ನೀಡುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ಹಾಗಾಗಿ ಪರ್ಷಂಪ್ರತಿ ನವೆಂಬರ್ ತಿಂಗಳಿನಿಂದ ಜಾತ್ರೆಯ ವರೆಗೆ ಇಂಥ ಸಮಸ್ಯೆಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನೇ ಹೆಚ್ಚಾಗಿ ಕೈಗೆತ್ತಿಕೊಳ್ಳಲಾಗುತ್ತದೆ.

LEAVE A REPLY

Please enter your comment!
Please enter your name here