Home ನಂಬಿಕೆ ಸುತ್ತಮುತ್ತ ಜೀವನ ಎಂಬುದು ಒಂದು ಯಜ್ಞವಿದ್ದಂತೆ…ಶ್ರದ್ಧೆ ಎಂದರೇನು?

ಜೀವನ ಎಂಬುದು ಒಂದು ಯಜ್ಞವಿದ್ದಂತೆ…ಶ್ರದ್ಧೆ ಎಂದರೇನು?

2888
0
SHARE

ಯಾವುದೇ ಕಾರ್ಯದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ ಎಂಬ ಮಾತು ಜಗಜ್ಜನಿತವಾದುದು. ಏನನ್ನೇ ಮಾಡ ಹೊರಟರೂ ಅದನ್ನು ಶ್ರದ್ಧೆಯಿಂದ ಮಾಡಬೇಕೆಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಈ ಶ್ರದ್ಧೆ ಎಂದರೇನು?

ಶ್ರದ್ಧೆ ಎಂಬುದು ಕನ್ನಡದಲ್ಲಿ ಬಳಕೆಯಾಗುತ್ತಿದೆಯಾದರೂ ಇದು ಕನ್ನಡ ಪದವಲ್ಲ. ಇದು ಸಂಸ್ಕೃತದ ಪದ. ಇದನ್ನು ದೃಢಪ್ರಯತ್ನ, ನಿಷ್ಠೆ, ದೃಢವಿಶ್ವಾಸ ಮೊದಲಾದ ಅರ್ಥಗಳಲ್ಲಿ ಹೇಳಲಾಗಿದೆ. ಇಂಗ್ಲೀಷಿನಲ್ಲಿ ಇದಕ್ಕೆ ಫೇತ್ ಎಂಬ ಪದವನ್ನು ಬಳಸಲಾಗುತ್ತದೆ. ಶ್ರದ್ಧೆ ಎಂಬುದು ಒಂದು ಬಗೆಯ ತಲ್ಲೀನತೆಯೂ ಹೌದು. ಉಪನಿಷತ್ತುಗಳಲ್ಲೊಂದಾದ ಕಠೋಪನಿಷತ್ತಿನಲ್ಲಿ ಶ್ರದ್ಧೆಯ ಬಗೆಗೆ ಹೇಳಲಾಗಿದೆ.

ಶ್ರದ್ಧಾ ಹಿ ನಾಮ ವಿಶ್ವಾಸರೂಪಾ ವೃತ್ತಿರ್ಮನೋಗತಾ|
ಅಪ್ರದಾಯವಕಾಶಂ ತು ಚಾಪ್ರೀತೇಃ ಪ್ರೀತಿಕಿಣೀ ||೬||
ಸಮರ್ಥ್ಯತೇ ದೇವಪೂಜಾಪ್ರವೃತ್ತಿಃ ಶಾಸ್ತ್ರ ಸಂಮತಾ |
ದೇಯಂ ಚ ಶ್ರದ್ಧಯೈವೇತಿ ಹ್ಯಾ ಚಷ್ಟೇ ಶ್ರುತಿರುತ್ತಮಾ||೭||

ಕಠೋಪನಿಷತ್ತಿನ ಪ್ರಕಾರ ಶ್ರದ್ಧೆ ಎಂಬುದು ಒಂದು ಬಗೆಯ ಮನೋವೃತ್ತಿ. ಇದು ವಿಶ್ವಾಸರೂಪದ ಮನೋವೃತ್ತಿ. ಯಾವ ಮನೋವೃತ್ತಿಯಿಂದ ಯಾಗಾದಿ ಕರ್ಮವಾದಾಗ ಯಗಾರಾಧ್ಯವಾಗತಕ್ಕ ದೇವತೆಯ ಅಪ್ರೀತಿಗೆ ಅವಕಾಶ ಕೊಡದೆ ಪ್ರೀತಿಯನ್ನು ದೊರಕಿಸಿಕೊಳ್ಳುವಂಥ ಸ್ಥಿತಿಯಲ್ಲಿ ದೇವಪೂಜೆಯಲ್ಲಿ ಪ್ರವೃತ್ತಿಯು ಶಾಸ್ತ್ರಸಮ್ಮತವಾಗಿ ಒದಗುವುದೋ ಅಂಥದು. ಅದೇ ಶ್ರದ್ಧೆ ಎಂದು ಕಠೋಪನಿಷತ್ತು ವಿವರಿಸುತ್ತದೆ.

ಯಜ್ಞಯಾಗಾದಿಗಳು ಶ್ರದ್ಧಾಪೂರ್ತಿಯಿಂದಲೇ ಶ್ರದ್ಧಾಪೂರ್ತಿಯಿದ್ದಾಗಲೇ ಶಾಸ್ತ್ರವಿಹಿತದಂತೆ ನಡೆಸುವಂತಾಗುವುದು. ಗೀತಾಚಾರ್ಯರು ಶ್ರದ್ಧಾವಿರಹಿತವಾದುದು ತಾಮಸವಾದುದು ಎನ್ನುತ್ತಾರೆ. ಆದ್ದರಿಂದ ಶ್ರದ್ಧೆಯೇ ಶುಭಪ್ರದವಾದದು. ಶ್ರದ್ಧೆಯಿದ್ದಾಗ ಮಾತ್ರ ಯಾಗಕರ್ಮಗಳಲ್ಲಿ ಲೋಪಗಳುಂಟಾಗುವುದಿಲ್ಲ. ಶ್ರದ್ಧೆಯಿಂದಾಗಿ ಕರ್ಮದಲ್ಲಿ ಜಾಗ್ರತೆ ವಹಿಸಿ ಯಾಗ ನಡೆಸಲು ಸಾಧ್ಯವಾಗಿ ಫಲಲೋಪಕ್ಕೂ ಅವಕಾಶವಿರದೆ ಶುಭಫಲಗಳು ದೊರೆಯುತ್ತವೆ. ಹೀಗೆ ಕಠೋಪನಿಷತ್ ಶ್ರದ್ಧೆಯ ಮಹತ್ತ್ವವನ್ನೂ ಹೇಳಿದೆ.

ಬದುಕಿನಲ್ಲಿ ಶ್ರದ್ಧೆಯು ಮಹತ್ತ್ವವುಳ್ಳದ್ದು. ಯಾಕೆಂದರೆ ಯಶಸ್ಸಿನ ಕೀಲಿಕೈಯೇ ಶ್ರದ್ಧೆ. ಉಪನಿಷತ್ತುಗಳೆಲ್ಲವೂ ಬದುಕಿನ ಸರಳಸೂತ್ರವನ್ನು ಸೂಕ್ಷ್ಮವಾಗಿ ಹೇಳಿವೆ. ಜೀವನ ಎಂಬುದು ಒಂದು ಯಜ್ಞವಿದ್ದಂತೆ. ಇದನ್ನು ಸಾಂಗವಾಗಿ ನೆರವೇರಿಸಲು ನಮ್ಮಲ್ಲಿ ಅಚಲವಾದ ಶ್ರದ್ಧೆಯಿರಬೇಕು. ಬಾಲ್ಯದಲ್ಲಿ ಜ್ಞಾನಾರ್ಜನೆಯೆಡೆಗೆ ಹೆಚ್ಚಿನ ಶ್ರದ್ಧೆ, ಬೆಳೆಯುತ್ತ ಹೋದಂತೆ ನಾವು ಮಾಡುವ ಉದ್ಯೋಗದಲ್ಲಿ, ಜೀವನದ ಪ್ರತಿಯೊಂದು ಆಗುಹೋಗುಗಳ ಬಗ್ಗೆ, ನಮ್ಮನ್ನು ತೊಡಗಿಸಿಕೊಳ್ಳುವಲ್ಲಿ ಶ್ರದ್ಧೆಯಿದ್ದಾಗ ಮಾತ್ರ ಎಲ್ಲವೂ ಸುಸೂತ್ರವಾಗಿ ಸಾಗುವುದು. ಜೀವನದಲ್ಲಿ ಶ್ರದ್ಧೆ ಎಂದರೆ ಜೀವನಪ್ರೀತಿ. ಶ್ರದ್ಧೆ ಎಂಬುದು ತನ್ಮಯತೆಯಾದ್ದರಿಂದ ನಾವು ತೊಡಗಿದ ಕಾರ್ಯದಲ್ಲಿ ಸಂಪೂರ್ಣ ಏಕಾಗ್ರತೆ ಇದ್ದಾಗ ತಪ್ಪುಗಳಾಗುವುದಿಲ್ಲ. ಆಗ ಅಲ್ಲಿ ಜಯ ದೊರೆಯುತ್ತದೆ. ನಾಲ್ಕು ದಿನ ಬದುಕುವ ಇರುವೆಯ ಶ್ರದ್ಧೆಯನ್ನು ನೋಡಿ ಕಲಿಯಬೇಕು. ಇರುವೆಯ ಶ್ರದ್ಧೆ ಸಾಲುಗಟ್ಟಿಕೊಂಡು ಹೋಗುವಲ್ಲಿಂದ ಆರಂಭವಾಗಿ, ಎಡಬಿಡದೆ ಮಣ್ಣನ್ನು ನೆಲದಿಂದ ತೆಗೆದು ಅವನ್ನು ಹನಿಹನಿಯಾಗಿ ಸೇರಿಸಿ, ಗೂಡನ್ನು ಕಟ್ಟಿಕೊಳ್ಳುವ ತನಕ ಶ್ರದ್ಧೆ ಒಂದೇ ರೀತಿಯದಾಗಿರುತ್ತದೆ. ಅಂತಹ ಶ್ರದ್ಧೆ ಮಾನವರಾದ ನಾವು ಅಳವಡಿಸಿಕೊಂಡಾಗ ನಮ್ಮ ಜೀವನವು ಸುಖಕರವಾಗಿರುತ್ತದೆ.

ಮಾನವನಿಗೆ ಶ್ರದ್ಧೆಯೂ ಒಂದು ಶಕ್ತಿ. ಹಾಗಾಗಿ ಶ್ರದ್ಧೆಯನ್ನು ಬಾಲ್ಯದಿಂದಲೇ ಬೆಳಸಿಕೊಳ್ಳಬೇಕು. ಶ್ರದ್ಧೆಯಿಂದ ಪರಮಾತ್ಮನೂ ಒಲಿಯುತ್ತಾನೆ; ಗೆಲುವೂ ನಮ್ಮದಾಗುತ್ತದೆ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here