ಅಳಿಕೆ : ಅಳಿಕೆ ಗ್ರಾಮದ ಜೆಡ್ಡು ಪದ್ಮಗಿರಿ ಶ್ರೀ ಆದಿ ಧನ್ವಂತರಿ ಕ್ಷೇತ್ರದಲ್ಲಿ 1.5 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ಧನ್ವಂತರಿ ದೇವರ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶವು ಎ.26ರಿಂದ 29ರವರೆಗೆ ವಿವಿಧ ವೈದಿಕ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸುಮಾರು 5ರಿಂದ 7 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಧರ್ಮದರ್ಶಿ ಜೆಡ್ಡು ನಾರಾಯಣ ಭಟ್ ತಿಳಿಸಿದರು.
ಪದ್ಮಗಿರಿ ದೇಗುಲದ ವಠಾರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನೇತೃತ್ವ, ಮಾರ್ಗದರ್ಶನದಲ್ಲಿ ದೇಗುಲ ನಿರ್ಮಾಣ ಮತ್ತು ಬ್ರಹ್ಮಕಲಶ ಸಮಿತಿ ರಚಿಸಲಾಗಿದೆ. ವೇ|ಮೂ| ಅಮೈ ಸುಬ್ಬಣ್ಣ ಭಟ್ ಪ್ರಧಾನ ಅರ್ಚಕರಾಗಿ, ವಾಸ್ತುಶಾಸ್ತ್ರಜ್ಞ ಮುನಿಯಂಗಳ ಕೃಷ್ಣಪ್ರಸಾದ್ ಪ್ರಧಾನ ಶಿಲ್ಪಿಯಾಗಿದ್ದಾರೆ. 2015 ಮೇ 7ರಂದು ಭೂಮಿಪೂಜೆ, 2016ರ ಎ.20ರಂದು ಗರ್ಭಗೃಹಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಡಿ.22ರಂದು ನಿಧಿಕಲಶ ಪ್ರತಿಷ್ಠಾಪನೆ, 2017ರ ಎ.11ರಂದು ಶಿವರಾಮ ಭಟ್ ಪೆರಡಾಲ ಅವರು ಗರ್ಭನ್ಯಾಸ ನಡೆಸಿದರು ಎಂದು ವಿವರಿಸಿದರು.
ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಮಾತನಾಡಿ, ಎ.26ರಂದು ಮಧ್ಯಾಹ್ನ 2ಕ್ಕೆ ಒಡಿಯೂರು ಶ್ರೀ ಕ್ಷೇತ್ರದಿಂದ ಉದಾರವಾಗಿ ನೀಡಿದ ಸ್ವರ್ಣಕಲಶ ಸಹಿತ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರ ಹಾಗೂ ಮಾಣಿಲ ಶ್ರೀ ಧಾಮ ಕ್ಷೇತ್ರದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ.
ಮೂರು ಗಂಟೆಗೆ ಬೈರಿಕಟ್ಟೆ ಅಶ್ವತ್ಥ ನಾರಾಯಣ ಭಜನ ಮಂದಿರದ ಬಳಿಯಲ್ಲಿ ಮೂರು ಕಡೆಯಿಂದ ಆಗಮಿಸುವ ಮೆರವಣಿಗೆ ಒಟ್ಟಾಗಿ ಕ್ಷೇತ್ರವನ್ನು ತಲುಪಲಿದೆ ಎಂದು ಹೇಳಿದರು.
ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ಜೆಡ್ಡು ಗಣಪತಿ ಭಟ್ ಮಾತನಾಡಿ, ಎ.26ರಂದು ಸಂಜೆ 4.30ಕ್ಕೆ ಪ್ರಧಾನ ಅರ್ಚಕ ವೇ| ಮೂ| ಅಮೈ ಸುಬ್ಬಣ್ಣ ಭಟ್ಟ, ತಂತ್ರಿಗಳಾದ ವೇ| ಮೂ| ಶಿವರಾಮ ಭಟ್ಟ ಪೆರಡಾಲ ಅವರಿಗೆ ಪೂರ್ಣಕುಂಭ ಸ್ವಾಗತ, ಎ.27ರಂದು ಬೆಳಗ್ಗೆ 5.30ಕ್ಕೆ ಶ್ರೀ ಧನ್ವಂತರಿ ಸಾಲಿಗ್ರಾಮವನ್ನು ಜೆಡ್ಡು ಮನೆಯಿಂದ ಪದ್ಮಗಿರಿ ದೇವಾಲಯ ಸಮುತ್ಛಯಕ್ಕೆ ತರುವುದು, ಸಂಜೆ ಮಂಟಪ ಸಂಸ್ಕಾರ, ಎ.28ರಂದು ಬೆಳಗ್ಗೆ ಶ್ರೀ ಧನ್ವಂತರಿ ಯಾಗ, ಶ್ರೀ ಧನ್ವಂತರಿ ಪೂಜೆ, ಸಂಜೆ 4.30ರಿಂದ ಬಿಂಬ ಶುದ್ಧಿ, ಎ.29ರಂದು ಬೆಳಗ್ಗೆ 6ರಿಂದ ಶ್ರೀ ಮಹಾಗಣಪತಿ ಹವನ, ರತ್ನನ್ಯಾಸಾದಿ ಪೀಠ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, 10.25ರ ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ ನಡೆಯಲಿದೆ ಎಂದು ಹೇಳಿದರು.
ಉಪಾಧ್ಯಕ್ಷ ಕಾನ ಈಶ್ವರ ಭಟ್, ಪ್ರಧಾನ ಸಂಚಾಲಕ ಕೋಡಿಜಾಲು ಗೋವಿಂದ ಭಟ್, ಪ್ರಧಾನ ಕೋಶಾಧಿ ಕಾರಿ ಸತೀಶ್ವರ ಭಟ್ ಪದ್ಯಾಣ, ಸಹಕೋಶಾಧಿಕಾರಿ ನೀಲಪ್ಪ ಗೌಡ ರೆಂಜಾಡಿ, ಸ್ವಾಗತ ಸಮಿತಿಯ ಲಿಂಗಪ್ಪ ಗೌಡ ಅಳಿಕೆ, ಪ್ರಚಾರ ಸಮಿತಿಯ ಸಂಚಾಲಕ ಸದಾಶಿವ ಅಳಿಕೆ, ಹೊರೆಕಾಣಿಕೆ ಸಮಿತಿ ಸಂಚಾಲಕ ನರಸಿಂಹ ಬಲ್ಲಾಳ್ ಎರುಂಬು, ವೈದಿಕ ಸಮಿತಿ ಸಂಚಾಲಕ ವಿಶ್ವೇಶ್ವರ ಭಟ್ ವಳಬೈಲು, ಸುಬ್ರಹ್ಮಣ್ಯ ಶಾಸ್ತ್ರಿ ಕೋಡಂದೂರು, ಪಾಕಶಾಲೆ ಸಮಿತಿ ಸಂಚಾಲಕ ಭಾಸ್ಕರ ರಾವ್ ಮಡಿಯಾಲ, ಸಭೆ ಕಾರ್ಯಕ್ರಮ ನಿರ್ವಹಣೆ ಸಮಿತಿ ಸಂಚಾಲಕ ಈಶ್ವರ ನಾಯ್ಕ ಅಳಿಕೆ, ಸದಸ್ಯ ರಾಜೇಂದ್ರ ರೈ ಪಡಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.