ನೆಲ್ಯಾಡಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೀಮೆ ದೇವಸ್ಥಾನವಾಗಿರುವ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಮತ್ತು ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಮೇ 2ರಂದು ಧ್ವಜಾರೋಹಣ ಮೂಲಕ ಆರಂಭವಾಗಿದ್ದು, ಶುಕ್ರವಾರ ಸಂಜೆ ಕೊಕ್ಕಡ ಪೇಟೆಯಲ್ಲಿ ದೇವರ ಮೆರವಣಿಗೆ ಸಾಗಿ, ಕಟ್ಟೆಪೂಜೆ ನೆರವೇರಿತು. ಸಂಜೆ 4 ಗಂಟೆಗೆ ಮೆರವಣಿಗೆ ಹೊರಟು, ಪಟ್ಲಡ್ಕದ ಶ್ರೀ ಗುರುದೇವ ಕಟ್ಟೆ ಮತ್ತು ಜೋಡುಮಾರ್ಗದ ಹರಿಹರ ಕಟ್ಟೆಯಲ್ಲಿ ಕಟ್ಟೆಪೂಜೆಗಳು ಮತ್ತು ಉತ್ಸವಾದಿಗಳು ನಡೆದವು.
ದೇವಸ್ಥಾನದಲ್ಲಿ ಮಹಾಪೂಜೆ, ಭೂತಬಲಿಗಳು ನಡೆದವು. ನೀಲೇಶ್ವರ ಎಡಮನೆ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಸಂತ ರಾವ್, ಸದಸ್ಯರಾದ ವಿಟuಲ ಗೌಡ ಟಿ., ಶ್ರೀಕಾಂತ ಆಚಾರ್ಯ, ಸುಚಿತ್ರಾ ಕೊಲ್ಲಾಜೆ, ಬಾಬು ಎಂ.ಕೆ., ರೋಹಿತಾಕ್ಷ ಆಚಾರ್ಯ, ಪದ್ಮಾ ಟಿ.ಎಂ., ಸೇಸಪ್ಪ ಸಾಲ್ಯಾನ್, ಅರ್ಚಕರಾದ ರಮಾನಂದ ಭಟ್ ಮತ್ತು ಭಕ್ತರು ಭಾಗವಹಿಸಿದ್ದರು.