ಸುಳ್ಯ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಶ್ರೀ ದೇವರ ಕಟ್ಟೆ ಪೂಜೆ, ಪೇಟೆ ಸವಾರಿಯು ಕ್ಷೇತ್ರ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಕಲಾಶಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು.
ಪೇಟೆ ಸವಾರಿ
ಆ ಬಳಿಕ ಪೆರುವಾಜೆ ಶ್ರೀ ದೇವಳದಿಂದ ಬಲಿ ಹೊರಟು ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದ ತನಕ ಶ್ರೀ ದೇವರ ಪೇಟೆ ಸವಾರಿ ನಡೆಯಿತು. ಅಲ್ಲಲ್ಲಿ ಕಟ್ಟೆಪೂಜೆ ನಡೆದು ದೇವಾಲಯಕ್ಕೆ ಮರಳಿತು. ಅನಂತರ ಬೆಡಿ ಕಟ್ಟೆಯಲ್ಲಿ ಸಿಡಿಮದ್ದು ಪ್ರದರ್ಶನ, ಮಹಾಪೂಜೆ, ದೇವರ ಬಲಿ ಹೊರಟು ಶ್ರೀ ಭೂತಬಲಿ ಉತ್ಸವ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಿತು.
ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ ಪಾಲ್ತಾಡು, ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಟಾರ್, ವ್ಯವಸ್ಥಾಪನ ಸದಸ್ಯರಾದ ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಲೀಲಾವತಿ ಎ. ಶೆಟ್ಟಿ ಪೆರುವಾಜೆಗುತ್ತು, ಮಹಾಲಿಂಗ ನಾಯ್ಕ ಪೆಲತ್ತಡ್ಕ, ಅಂಗಾರ ಬಜ, ದೇವಕಿ ಪೂವಪ್ಪ ಪೂಜಾರಿ ಮುಕ್ಕೂರು, ಕರುಣಾಕರ ಗೌಡ ಬೀರುಸಾಗು, ಕಿಶೋರ್ ಕುಮಾರ್ ಪೆರುವಾಜೆ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ., ಮಾಜಿ ಸದಸ್ಯರಾದ ರಾಮಣ್ಣ ರೈ ವೈಪಾಲ, ಕುಶಾಲಪ್ಪ ಪೆರುವಾಜೆ, ವೆಂಕಟಕೃಷ್ಣ ರಾವ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ
ಪೇಟೆ ಸವಾರಿ ಹಿನ್ನೆಲೆಯಲ್ಲಿ ಬೆಳ್ಳಾರೆ ಅಚಾಲಪುರ ಕಟ್ಟೆ ಬಳಿ ವಿರಾಟ್ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ನೃತಾಂಜಲಿ ಕಾರ್ಯಕ್ರಮ ನಡೆಯಿತು. ಪೆರುವಾಜೆ ಶ್ರೀ ದೇವಾಲಯದ ಬಳಿ ಬೆಳ್ಳಾರೆ ಜೇಸಿಐ, ಯುವ ಜೇಸಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ವತಿಯಿಂದ ಧರ್ಮ ಸಂಕಲ್ಪ ತುಳು ಯಕ್ಷಗಾನ ಪ್ರದರ್ಶನಗೊಂಡಿತ್ತು.