Home ಧಾರ್ಮಿಕ ಸುದ್ದಿ ಭಜನ ಸಂಭ್ರಮ: ಕೋಟಿ- ಚೆನ್ನಯ ಸಂಕೀರ್ತನ ಯಾತ್ರೆ

ಭಜನ ಸಂಭ್ರಮ: ಕೋಟಿ- ಚೆನ್ನಯ ಸಂಕೀರ್ತನ ಯಾತ್ರೆ

1245
0
SHARE

ಈಶ್ವರಮಂಗಲ: ಹನುಮ ಗಿರಿಯಲ್ಲಿ ನಡೆದ ಭಜನ ಸಂಭ್ರಮಕ್ಕೆ ಕೋಟಿ-ಚೆನ್ನಯ ಸಂಕೀರ್ತನ ಯಾತ್ರೆ ಮೆರುಗು ನೀಡಿತ್ತು. ಸಮಯಕ್ಕೆ ಸರಿಯಾಗಿ ಹನುಮಗಿರಿ ಕ್ಷೇತ್ರದಿಂದ ಸುಮಾರು ಒಂದು ಕಿ.ಮೀ. ದೂರದಿಂದ ಎರಡು ಭಾಗ ದಿಂದ ಕೋಟಿ-ಚೆನ್ನಯ ಎನ್ನುವ ಎರಡು ಸಂಕೀರ್ತನ ಯಾತ್ರೆ ಪ್ರಾರಂಭಗೊಂಡಿತ್ತು.

ಕೋಟಿ ಸಂಕೀರ್ತನ ಯಾತ್ರೆಯನ್ನು ಸುಳ್ಯ ಶಾಸಕ ಎಸ್‌. ಅಂಗಾರ ಚಾಲನೆ ನೀಡಿದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಚೆನ್ನಯ ಸಂಕೀರ್ತನ ಯಾತ್ರೆಗೆ ಚಾಲನೆ ನೀಡಿದರು. ನಾಲ್ಕು ಜಿಲ್ಲೆಗಳಿಂದ ಆಗಮಿಸಿದ ಭಜನ ತಂಡಗಳು ಸಂಕೀರ್ತನ ಯಾತ್ರೆಯಲ್ಲಿ ಆಯ್ದ ಭಜನೆಗಳ ಮೂಲಕ ಕುಣಿತ ಭಜನೆ, ಭಜನೆಗಳಿಗೆ ತಾಳ ಹಾಕಿ ಮುನ್ನಡೆದವು. ಶಾಸಕರು ಯಾತ್ರೆಗೆ ಸಾಥ್‌ ನೀಡಿದರು.

ಮಹಿಳಾ ಭಜಕರು ಯಾತ್ರೆಯ ಮುಂಭಾಗದಲ್ಲಿ, ಮಕ್ಕಳ ಭಜಕ ತಂಡ ಮಧ್ಯದಲ್ಲಿ ಹಾಗೂ ಪುರುಷರ ಭಜಕ ತಂಡ ಯಾತ್ರೆ ಪಾಲ್ಗೊಂಡಿತ್ತು. ಯಾತ್ರೆಯ ಕೊನೆಯಲ್ಲಿ ದಾಸ ಸಾಹಿತ್ಯ ಇರುವ ಪುಸ್ತಕ ಹೊತ್ತ ಪಲ್ಲಕ್ಕಿ ಯಾತ್ರೆಗೆ ಮೆರುಗು ನೀಡಿತು. ಎರಡು ಭಾಗಗಳಿಂದ ಏಕಕಾಲಕ್ಕೆ ಪ್ರಾರಂಭವಾದ ಕೋಟಿ-ಚೆನ್ನಯ ಸಂಕೀರ್ತನ ಯಾತ್ರೆ ಹನುಮಗಿರಿಯಲ್ಲಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ರವಿವಾರ ಮುಂಜಾನೆ ಅಸ್ತಂಗತರಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಶಿವರಾಮ ಭಟ್‌ ಬೀರ್ನಕಜೆ, ಪ್ರಧಾನ ಕಾರ್ಯದರ್ಶಿ ಸಹಜ್‌ ರೈ, ಕಾರ್ಯಾಧ್ಯಕ್ಷ ಮಂಜುನಾಥ ರೈ, ಪ್ರಧಾನ ಕಾರ್ಯದರ್ಶಿ ಸುಬ್ಬಪ್ಪ ಪಾಟಾಳಿ, ದೇವಿಪ್ರಕಾಶ್‌ ಶೆಟ್ಟಿ, ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಮಹಾಲಿಂಗ ಪಾಟಾಳಿ, ನಾರಾಯಣ ರೈ ಕುದಾಡಿ, ಗಂಗಾಧರ ರೈ ಎನ್‌.ಜಿ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ದನ, ಆನಂದ ರೈ ಸಾಂತ್ಯ, ಶ್ರೀಧರ ಮಾಲೆತ್ತೋಡಿ, ಶ್ರೀರಾಮ್‌ ಪಕ್ಕಳ, ಶಂಕರಿ ಭಂಡಾರಿ, ನಿತಿನ್‌ ಪ್ರಸಾದ್‌ ಹೆಗ್ಡೆ, ಪ್ರವೀಣ್‌ ರೈ ಮೇನಾಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here