ತೆಕ್ಕಟ್ಟೆ: ಶ್ರೀ ವಾದಿರಾಜ ಗುರು ಸಾರ್ವಭೌಮರ ಜನ್ಮಕ್ಷೇತ್ರ ಕುಂಭಾಶಿಯ ಹೂವಿನ ಕೆರೆ ಅನತಿ ದೂರದಲ್ಲಿರುವ ದೇವಾಲಯಗಳ ಸಮುತ್ಛಯದಲ್ಲಿ ಅತಿ ಅಪರೂಪ ವಾದ, ಪ್ರಾಚೀನವೂ ಆದ ಶ್ರೀ ಸೂರ್ಯನಾರಾಯಣ ದೇವಾಲಯ, ಶ್ರೀ ಲಕ್ಷ್ಮೀನಾರಾಯಣ ದೇವಾಲಯ, ಯುದಿಷ್ಠಿರ ಪ್ರತಿಷ್ಠಾಪಿಸಿದ ಶ್ರೀ ಚೆನ್ನಕೇಶವ ದೇವಾಲಯ, ಶ್ರೀ ಅಯ್ಯಪ್ಪ ಸ್ವಾಮಿ ದೇಗುಲವೂ ಇಲ್ಲಿ ನಿರ್ಮಾಣವಾಗಿದೆ.
ಅಪೂರ್ವ ಶೈಲಿಯ ಶಿಲಾ ಶಿಲ್ಪ ವೈಶಿಷ್ಟ್ಯತೆಯಿಂದ ಮೆರೆಯುತ್ತಿರುವ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರೀ ದೇವಾಲಯವನ್ನು ತಾಲೂಕಿನ ಗಂಗೊಳ್ಳಿ ಯವರಾದ ಕುಂಭಾಸಿ ನಿವಾಸಿ, ಮುಂಬಯಿ ಉದ್ಯಮಿ ದೇವರಾಯ ಎಂ. ಶೇರೆಗಾರ್ ಹಾಗೂ ಅನಿತಾ ದಂಪತಿ ಕುಟುಂಬದವರ ಆರಾಧ್ಯ ದೇವತೆಗೆ ನೆಲೆ ಕಂಡುಕೊಂಡಿದ್ದಾರೆ. ಮಲ್ಲಿಗೆ ಹೂವಿನ ಅಟ್ಟೆಗಳನ್ನಿಟ್ಟು, ಅದರಲ್ಲೇ ತಮ್ಮ ಆರಾಧ್ಯ ದೇವತೆ ಕಾಳಿಕಾ ಮಾತೆಯನ್ನು ಕಲ್ಪಿಸಿಕೊಂಡು ಆರಾಧಿಸುತ್ತಿದ್ದರು.
ಮರದ ಅದ್ಭುತ ಕುಸುರಿ ಕೆತ್ತನೆ
ಪಯ್ಯನ್ನೂರಿನ ಜ್ಯೋತಿ ಮಾಧವನ್ ಪೊದುವಾಳರ ಮಾರ್ಗದರ್ಶನ, ವಾಸ್ತು ಶಿಲ್ಪಿ ಮುನಿಯಂಗಳ ಮಹೇಶ ಭಟ್ಟರ ಶಿಲ್ಪಕಲೆ, ಕಾರ್ಕಳದ ಶಿಲ್ಪಿ ಸತೀಶ್ ಆಚಾರ್ ಅವರ ಕಲ್ಲುಕೆತ್ತನೆ, ಬಾರ್ಕೂರಿನ ದಾರು ಶಿಲ್ಪಿ ಶ್ರೀಪತಿ ಆಚಾರ್ ಅವರ ಮರದ ಕುಸುರಿ ಕೆತ್ತನೆ, ತಮಿಳುನಾಡಿನ ಕುಶಲಿಗಳಿಂದ ಲೋಹ ಶಿಲ್ಪಕಲೆ ಅದ್ಭುತವಾಗಿ ಮೇಳೈಸಿ ಈ ದೇವಾಲಯ ಸರ್ವಾಂಗ ಸುಂದರವಾಗಿ ರೂಪುಗೊಂಡಿದೆ. ಇದರ ಮೂರ್ತಿ, ಕಲ್ಲು, ಮರಗಳ ಕೆತ್ತನೆ, ಲೋಹದ ಕುಸುರಿಗಳು ಮಹಾನ್ ಶಿಲ್ಪಿ ಜಕಾಣಾಚಾರಿ ನಿರ್ಮಿತ ಪ್ರಾಚೀನ ದೇವಾಲಯಗಳಿಗೆ ಸರಿಸಾಟಿಯಾಗಿದೆ. ಆಕರ್ಷಕ ಶಿಲಾಮಯ ಮಹಾದ್ವಾರ ನಿರ್ಮಿಸಲಾಗಿದೆ. ಸುಂದರ
ದೇವಾಲಯಗಳಿಂದ ತುಂಬಿ ಕಂಗೊಳಿಸುವ ಕುಂಭಾಶಿ ಇದೀಗ ಆಸ್ತಿಕರು, ಪ್ರಕೃತಿ ಪ್ರೇಮಿಗಳು, ಶಿಲ್ಪಕಲೆ – ಇತಿಹಾಸ ಇತ್ಯಾದಿ ಅಧ್ಯಯನ ಮಾಡುವ ಅಭಿರುಚಿ ಉಳ್ಳವರನ್ನು ಕೈಬೀಸಿ ಕರೆಯುತ್ತಿದೆ.
ಎ.27ರಿಂದ ಮೇ 5ರ ವರೆಗೆ ಕ್ಷೇತ್ರ ಪುರೋಹಿತರು, ತಂತ್ರಿಗಳ ಮಾರ್ಗ ದರ್ಶನದಲ್ಲಿ ಶಿಲಾಮಯ ಗರ್ಭಗೃಹ ಸಹಿತ ನೂತನ ದೇಗುಲ ಸಮರ್ಪಣೆ, ಬಿಂಬಗಳ ಪ್ರತಿಷ್ಠೆ, ರಾಜಗೋಪುರ ಲೋಕಾರ್ಪಣೆ, ಬ್ರಹ್ಮಕುಂಭಾಭಿಷೇಕ, ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.