ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಫೆ. 19 ರಿಂದ 23ರ ತನಕ ವಾರ್ಷಿಕ ವಿಶೇಷ ಜಾತ್ರೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ವೈಭವದೊಂದಿಗೆ ಸಂಪನ್ನಗೊಂಡಿತು.
ಫೆ. 19ರಂದು ಕ್ಷೇತ್ರಕ್ಕೆ ತಂತ್ರಿಗಳ ಆಗಮನ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತ್ತಿದ್ದು, ರಾತ್ರಿ ಎಡನೀರು ಮೇಳದ ಕಾಲಮಿತಿ ಯಕ್ಷಗಾನ, ದೈವದ ಭಂಡಾರ ಆಗಮನವಾಗಿ ಧ್ವಜಾರೋಹಣ, ಬಲಿ ಉತ್ಸವಗಳು ನಡೆದವು. 20ರಂದು ಸಂಜೆ ಬಯನ ಬಲಿ ಉತ್ಸವ, ನೃತ್ಯ ಕಾರ್ಯಕ್ರಮ, ಹರಿನಾಮ ಸಂಕೀರ್ತನೆ, ಶ್ರೀ ದೇವರ ಬಲಿ, ಉತ್ಸವ ನಡೆದವು.
21ರಂದು ನಡುಬಲಿ, ಪಾಲಕಿ ಉತ್ಸವ, ನೃತ್ಯ ವೈವಿಧ್ಯ, ರಾತ್ರಿ ಶ್ರೀ ದೇವರ ಬಲಿ, ಪಾಲಕಿ ಉತ್ಸವ, ಸ್ಯಾಕ್ಸೋಪೋನ್ ವಾದನ, 22ರಂದು ಬೆಳಗ್ಗೆ ಶ್ರೀ ದುರ್ಗಾಂಬಾ ದೇವರ ಸನ್ನಿಧಿಯಲ್ಲಿ ಲಲಿತಾ – ತ್ರಿಪುರ ಸುಂದರಿ ಯಾಗ, ಮಧ್ಯಾಹ್ನ ಮಹಾಪೂಜೆ, ಶ್ರೀ ದೇವರ ರಥಾರೋಹಣ, ಅನ್ನಸಂತರ್ಪಣೆ, ಸಂಜೆ ತುಳುನಾಡ ಸಾಂಸ್ಕೃತಿಕ ವೈವಿಧ್ಯಗಳು ನಡೆದವು. ರಾತ್ರಿ ಕಲ್ಲಡ್ಕ ಶಿಲ್ಪ ಗೊಂಬೆ ಬಳಗದ ಕೀಲು ಕುದುರೆ, ಕರಗನೃತ್ಯ, ಗೊಂಬೆ ಕುಣಿತ, ಶ್ರೀ ಶಾರದಾ ಚೆಂಡೆ ಬಳಗದ ಚೆಂಡೆ ವಾದನ, ರಾತ್ರಿ ಶ್ರೀಕ್ಷೇತ್ರದ ವಾರ್ಷಿಕ ಮಹಾ ರಥೋತ್ಸವ ನಡೆಯಿತು. ಇದರೊಂದಿಗೆ ಸುಡುಮದ್ದು ಪ್ರದರ್ಶನ, ಶ್ರೀ ದೇವರ ಬಲಿ, ಉತ್ಸವಗಳು ನಡೆದವು. 23ರಂದು ಧ್ವಜಾವರೋಹಣ, ರಾತ್ರಿ ಶ್ರೀ ನಾಲ್ಕೈತ್ತಾಯ ದೈವದ ನೇಮದೊಂದಿಗೆ ಸಂಪನ್ನಗೊಂಡಿತು.
ಶ್ರೀ ವಿನಾಯಕ, ಶಂಕರನಾರಾಯಣ, ದುರ್ಗಾಂಬಾ ಮತ್ತು ನಾಗದೇವರಿಗೆ ಎಲ್ಲ ದಿನಗಳಲ್ಲಿ ವಿವಿಧ ಪೂಜೆ ಅಲಂಕಾರಗಳು, ನಿರಂತರ ಅನ್ನದಾನ ನಡೆದವು.. ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ. ಭಂಡಾರಿ, ಕಾರ್ಯ ನಿರ್ವಹಣಾಧಿಕಾರಿ ಹರೀಶ್ಚಂದ್ರ, ಪ್ರಧಾನ ಅರ್ಚಕ ವೇ| ಮೂ ಮಹೇಶ್ ಭಟ್, ಸಮಿತಿ ಸದಸ್ಯರಾದ ಕೆ. ಪ್ರಭಾಕರ ಶೆಟ್ಟಿ, ಎಸ್. ಗಂಗಾಧರ ಭಟ್ ಕೊಳಕೆ, ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ, ರಮಾ ಎಸ್. ಭಂಡಾರಿ ಸಹಿತ ಮಾಗಣೆಯ ಸಮಸ್ತರು, ಸಹಸ್ರಾರು ಸಂಖ್ಯೆಯ ಭಕ್ತರು ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.