Home ನಂಬಿಕೆ ಸುತ್ತಮುತ್ತ ಭಗವಂತನನ್ನು ಹೇಗೆ ಧ್ಯಾನಿಸಬೇಕು?

ಭಗವಂತನನ್ನು ಹೇಗೆ ಧ್ಯಾನಿಸಬೇಕು?

2509
0
SHARE

ಮನಸ್ಸಿನ ತಲ್ಲಣ, ಭಾವೋದ್ರೇಕ, ಹತಾಶೆ ಎಲ್ಲವನ್ನೂ ತೊರೆದು ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಧ್ಯಾನ ಸಹಾಯಕ. ಚಂಚಲಚಿತ್ತವನ್ನು ಒಂದೆಡೆ ಏಕಾಗ್ರಗೊಳಿಸಿ ನಿಯಂತ್ರಿಸಲು ಧ್ಯಾನದ ಮೊರೆ ಹೋಗುತ್ತೇವೆ. ಈ ಧ್ಯಾನದಿಂದಾಗಿ ಮನಸ್ಸು ಉಲ್ಲಸಿತವೂ ಶಕ್ತಿಯುತವೂ ಆಗುತ್ತಲೇ ಹೋಗುತ್ತದೆ. ಸಕಲಕೂ ಕಾರಣವೇ ನಮ್ಮ ಮನಸ್ಸು. ಅಂತೆಯೇ ಒಳ್ಳೆಯದ್ದಕ್ಕೂ ಕೆಟ್ಟದ್ದಕ್ಕೂ ಕಾರಣವಾಗುವುದು ಇದೇ ಮನಸ್ಸು. ಮನಸ್ಸು ಅರಿಷಡ್ವರ್ಗಗಳಿಗೆ ಬಹುಬೇಗ ಬಲಿಯಾಗಿ ದುಃಖವನ್ನುಂಟು ಮಾಡುವ ಕರ್ಮಗಳತ್ತ ಒಲವನ್ನು ಹೊಂದುತ್ತದೆ. ಇದರಿಂದಾಗಿ ಅನೀತಿ ಅನಾಚಾರಗಳು, ಸುಖದ ಭ್ರಮೆಯಲ್ಲಿ ಮಾಡುವ ದುಷ್ಕರ್ಮಗಳು ತಪ್ಪೆಂಬುದನ್ನು ಒಪ್ಪದ ಸ್ಥಿತಿಯನ್ನು ನಮ್ಮ ಮನಸ್ಸು ತಲುಪುತ್ತದೆ. ಇಂತಹ ಸ್ಥಿತಿಯಿಂದ ಹೊರಬರಲು ಅಥವಾ ನಮ್ಮ ಮನಸ್ಸು ಬಯಸುವ ಪ್ರಾಪಂಚಿಕ ಸುಖದ ಮರೀಚಿಕೆಯಿಂದ ಹೊರಬರಲು ಧ್ಯಾನ ಸುಲಭ ಮಾರ್ಗ.

ನಾವು ನಮ್ಮನ್ನು ಮೀರಿದ ಶಕ್ತಿ ಎಂದು ಗುರುತಿಸಿದ ಭಗವಂತನನ್ನು ಕುರಿತು ಧ್ಯಾನ ಮಾಡುವ ಮಾರ್ಗವನ್ನು ರೂಢಿಸಿಕೊಂಡಿದ್ದೇವೆ. ಇಂತಹ ಧ್ಯಾನಕ್ಕೂ ಒಂದು ಸ್ವರೂಪವಿದೆ. ಆ ಪ್ರಕಾರವಾಗಿ ಧ್ಯಾನಿಸಿದರೆ ಅದರಿಂದ ನಿರೀಕ್ಷಿತ ಫಲ ದೊರೆಯುತ್ತದೆ. ಶ್ರೀಮದ್ಭಾಗವತದಲ್ಲಿ ಭಗವಂತನನ್ನು ಹೇಗೆ ಧ್ಯಾನಿಸಬೇಕು? ಎಂಬುದನ್ನು ಹೇಳಲಾಗಿದೆ. ತುಂಬಾ ಎತ್ತರವೂ ತುಂಬಾ ತಗ್ಗಿಲ್ಲದ ಆಸನದಲ್ಲಿ ಕುಳಿತು, ಶರೀರವನ್ನು ನೆಟ್ಟಗೆ ಇಟ್ಟುಕೊಂಡು, ಎರಡೂ ಕೈಗಳನ್ನು ತನ್ನ ತೊಡೆಯ ಮೇಲಿಟ್ಟುಕೊಂಡು, ದೃಷ್ಟಿಯನ್ನು ನಾಸಿಕಾಗ್ರದಲ್ಲಿ ಇಟ್ಟುಕೊಳ್ಳಬೇಕು. ಅನಂತರ ಪೂರಕ, ಕುಂಭಕ, ರೇಚಕ ಹೀಗೆ ಪ್ರಾಣಾಯಾಮದ ಮೂಲಕ ನಾಡೀ ಶೋಧನ ಮಾಡಬೇಕು. ಪ್ರಾಣಾಯಾಮದ ಅಭ್ಯಾಸವನ್ನು ಮೆಲ್ಲಮೆಲ್ಲನೆ ಬೆಳಸಬೇಕು. ಜೊತೆಗೆ ಇಂದ್ರಿಯಗಳನ್ನು ಗೆಲ್ಲುವ ಅಭ್ಯಾಸವನ್ನೂ ಮಾಡಬೇಕು. ಹೃದಯದಲ್ಲಿ ಕಮಲನಾಳಗತ ತೆಳ್ಳನೆಯ ನೂಲಿನಂತೆ ಅವಿಚ್ಛಿನ್ನವಾಗಿ ಓಂಕಾರದ ಚಿಂತನೆ ಮಾಡಬೇಕು. ಪ್ರಾಣದ ಮೂಲಕ ಅದನ್ನು ಮೇಲಕ್ಕೆ ಒಯ್ದು ಅದರಲ್ಲಿ ಘಂಟಾನಾದಂತೆ ಸ್ವರವನ್ನು ಸ್ಥಿರಗೊಳಿಸಬೇಕು. ಈ ಪ್ರಕಾರವಾಗಿ ದಿನವೂ ಹತ್ತತ್ತು ಬಾರಿ ಓಂಕಾರ ಸಹಿತ ಪ್ರಾಣಾಯಾಮ ಮಾಡುವುದರಿಂದ ಪ್ರಾಣವಾಯುವು ವಶವಾಗುತ್ತದೆ. ಆನಂತರ ಭಗವಂತನ ಸ್ವರೂಪವನ್ನು ಸ್ಮರಿಸಬೇಕು. ನಾವೆಲ್ಲ ಕಲ್ಪಿಸಿಕೊಂಡಿರುವ ಸುಂದರವಾದ ಭಗವಂತನ ರೂಪವನ್ನೂ ಹೇಳಲಾಗಿದೆ. ಆ ದೇವರ ರೂಪವನ್ನು ಭಗವಂತನ ದೇಹದ ಪ್ರತಿಯೊಂದು ಅಂಗವನ್ನೂ ನೋಡುತ್ತ ಭಗವಂತನ ಸಂಪೂರ್ಣ ರೂಪವನ್ನು ಧ್ಯಾನಿಸಬೇಕು ಮತ್ತು ಮನಸ್ಸನ್ನು ಪ್ರತಿಯೊಂದು ಅಂಗದಲ್ಲಿಯೂ ಸ್ಥಿರವಾಗಿರಸಬೇಕು. ಇದುವೇ ಧ್ಯಾನದ ಮಾರ್ಗ.

ತ್ರಿಗುಣಾತ್ಮಕವಾದ ಜಗತ್ತಿನಲ್ಲಿ ಮಾನವನು ತ್ರಿಗುಣವನ್ನು ಗೆಲ್ಲುವ ತನಕವೂ ಸಂಕಷ್ಟದಲ್ಲಿಯೇ ಇರುತ್ತಾನೆ. ಈ ತ್ರಿಗುಣಗಳಾದ ಸತ್ತ್ವ, ತಮ ಮತ್ತು ರಜೋಗುಣಗಳನ್ನು ಗೆಲ್ಲವುದು ಸುಲಭವಲ್ಲ. ತಮ ಮತ್ತು ರಜೋಗುಣದಿಂದ ಬೇರ್ಪಟ್ಟು ಸತ್ತ್ವಗುಣವನ್ನು ಮಾತ್ರ ಅಳವಡಿಸಿಕೊಳ್ಳುವುದೇ ಕಷ್ಟವಾದ ಕಾರ್ಯ. ಯಾಕೆಂದರೆ ಮನಸ್ಸು ಯಾವಾಗಲೂ ಆ ಕ್ಷಣದ ಆನಂದವನ್ನು ಅನುಭವಿಸಲು ಹಾತೊರೆಯುತ್ತಿರುತ್ತದೆ. ಆ ಸುಖದ ಮಾರ್ಗ ರಜೋಗುಯುತವೋ ತಮೋಗುಣಯುತವೋ ಅಥವಾ ಸಾತ್ತ್ವಿಕವೋ ಎಂಬುದನ್ನು ಯೋಚಿಸದೆ, ಆನಂತರದಲ್ಲಾಗುವ ಪರಿಣಾಮವನ್ನೂ ಪರಿಗಣಿಸದೆ ಮನಸ್ಸು ಅಂತಹ ಸುಖಕ್ಕಾಗಿ ಕರ್ಮಗಳಲ್ಲಿ ತೊಡಗಿಕೊಳ್ಳತ್ತದೆ. ಇದರಿಂದಾಗಿ ಸ್ವಂತ ಬದುಕಿಗೂ ಸಮಾಜದ ಸ್ವಾಸ್ಥ್ಯಕ್ಕೂ ಅಪಾಯವೇ ಉಂಟಾಗುವುದರಿಂದ ನಮ್ಮ ಮನಸ್ಸನ್ನು ಹಿಡತದಲ್ಲಿಟ್ಟುಕೊಳ್ಳಬೇಕಾದುದು ಅನಿವಾರ್ಯ. ಧ್ಯಾನದ ಮಾರ್ಗವು ಮನಸ್ಸನ್ನು ಶುದ್ಧಗೊಳಿಸಿ ಸಾತ್ತ್ವಿಕ ಕರ್ಮಗಳಲ್ಲಿ ತೊಡಗಿಕೊಳ್ಳಲು ಅನುಕೂಲಕರವಾದುದು. ಶುಭ್ರವಾದ ಮನಸ್ಸಿನಿಂದ ಶುದ್ಧವಾದ ಆಲೋಚನೆಗಳು ಬಂದು ಉತ್ತಮವಾದ ಕಾರ್ಯಗಳೇ ನಡೆಯಲ್ಪಡುವದರಿಂದ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ. ಇಂದಿನ ಸಮಾಜವನ್ನು ಪರಂಬರಿಸಿ ನೋಡಿದರೆ ಇಂತಹ ಧ್ಯಾನ ಪ್ರಾಣಾಯಾಮಾದಿಗಳ ಅವಶ್ಯಕತೆ ಎಲ್ಲರಿಗೂ ಇದೆ ಎಂಬುದು ಗೋಚರವಾಗುತ್ತದೆ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here