Home ನಂಬಿಕೆ ಸುತ್ತಮುತ್ತ ಸರ್ವಪಾಶಗಳಿಂದಲೂ ಮುಕ್ತನಾಗುವುದು ಹೇಗೆ?

ಸರ್ವಪಾಶಗಳಿಂದಲೂ ಮುಕ್ತನಾಗುವುದು ಹೇಗೆ?

1916
0
SHARE

ಒಂದು ಸಾಧನೆಯ ಹಾದಿಯನ್ನು ಹಿಡಿದು ಹೊರಟವನಿಗೆ ಯಾರೋ ಹಿಂದಕ್ಕೆ ಕರೆದಂತೆ ಅನಿಸುತ್ತದೆ. ಅದನ್ನು ಗಮನಿಸದೆ ಮುಂದಕ್ಕೆ ಹೋದರೆ ಇನ್ನಾರೋ ಅಡ್ಡಗಟ್ಟಿದಂತಹ ಅನುಭವ. ಅದನ್ನೂ ನಿರ್ಲಕ್ಷಿಸಿ ಸಾಗಿದರೆ ಯಾರೋ ದಾರಿ ತಪ್ಪಿಸಿಬಿಟ್ಟಂತೆ ಕಂಗಾಲಾಗಿ ನಿಂತು ಬಿಡುತ್ತಾನೆ. ಸಾಧನೆಯ ದಾರಿಯಲ್ಲಿ ಬಹುವಾಗಿ ಕಾಡುವ ಸಂಗತಿಗಳು ಸಾವಿರಾರು. ಅವುಗಳೇ ತಪ್ಪಿಸಿಕೊಳ್ಳಲಾಗದಂತಹ ಪಾಶಗಳು. ಅವುಗಳಿಗೆ ಸಿಲುಕಿಕೊಂಡರೆ ಸಾಧನೆಯ ಮಾರ್ಗ ದುರ್ಗಮವಾಗಿ, ಕೊನೆಗೆ ಸೋಲೊಪ್ಪಿಕೊಳ್ಳಬೇಕಾದ ಹಂತಕ್ಕೆ ತಲುಪುತ್ತಾನೆ. ಆಮೇಲೆ ಸಾಧನೆ ಎಂಬುದು ದೂರವೇ ಉಳಿದು ಬಿಡುತ್ತದೆ. ರಾಗ, ದ್ವೇಷ, ಕಾಮಾದಿ ಪಾಶಗಳು ಮನುಷ್ಯನನ್ನು ಸುತ್ತಿಕೊಂಡಿರುವಾಗ ಆತ ಆ ವೃತ್ತದಿಂದ ಹೊರಕ್ಕೆ ಬರಲಾರ. ಹೊರಕ್ಕೆ ಬಾರದೆ ಸಾಧನೆಯ ಹಾದಿಯಲ್ಲಿ ಮುಂದಿನ ಹೆಜ್ಜೆಗಳನ್ನು ಇಡಲಾರ. ಜ್ಞಾನಾರ್ಜನೆಗೆ ದೂರದ ಊರಿಗೆ ಹೊರಡಬೇಕಾದ ಮಗುವನ್ನು ತಾಯಿಯ ಮಮತೆ ಅಥವಾ ಮನೆಯ ಮೇಲಿನ ಮೋಹ ತಡೆದು ಬಿಟ್ಟಾಗ, ಆ ಮಗು ಅದನ್ನು ಕಳಚಿಕೊಳ್ಳದೆ ತನ್ನ ಗುರಿಯನ್ನು ತಲುಪಲಾಗದ ಸ್ಥಿತಿಯನ್ನು ತಲುಪುತ್ತದೆ. ಇದು ನಮ್ಮ ಬಾಲ್ಯದಿಂದ ಆರಂಭವಾಗಿ ಜೀವನದ ಪ್ರತಿಯೊಂದು ಗಳಿಗೆಯಲ್ಲೂ ಒಂದಲ್ಲ ಒಂದು ಪಾಶದಲ್ಲಿ ಸಿಲುಕುತ್ತೇವೆ. ಈ ಪಾಶಗಳು ಸತ್ಯಹರಿಶ್ಚಂದ್ರನನ್ನು ನಕ್ಷತ್ರಿಕ ಕಾಡಿದ ರೀತಿಗಿಂತಲೂ ಬಲವಾಗಿ ಕಾಡುವುದು ಮಾತ್ರ ಸತ್ಯ.

ಸರ್ವಪಾಶಗಳನ್ನು ಕಳೆದುಕೊಳ್ಳದೆ ಗೆಲುವಿನ ಗೋಡೆಯನ್ನು ತಟ್ಟಲಾಗದು; ಗುರಿಯನ್ನು ಮುಟ್ಟಲಾಗದು. ಆ ಗುರಿ ಸಣ್ಣದಿರಲಿ, ದೊಡ್ಡದಿರಲಿ ಗಮ್ಯ ಯಾವತ್ತಿಗೂ ಸುಲಭವಲ್ಲ. ಒಂದು ಊರು, ಒಂದು ಮನೆ, ಒಂದು ಪ್ರಯಾಣ, ಒಂದು ನದಿ, ಒಂದು ಪ್ರೀತಿ, ಒಂದು ಸಂಬಂಧ, ಒಂದು ದ್ವೇಷ ಎಲ್ಲವೂ ಪಾಶವೇ. ಇವೆಲ್ಲವನ್ನೂ ಸೇರಿಸಿಯೇ ನಾನು ಸಂಸಾರಬಂಧನ ಎಂದು ಹೇಳುತ್ತೇನೆ. ಇವೆಲ್ಲವೂ ನಮ್ಮ ಮನಸ್ಸನ್ನು ಕಾರಣವಿದ್ದೋ ಕಾರಣವಿಲ್ಲದೆಯೋ ಸುತ್ತುತ್ತಿರುವಾಗ ಅದರಿಂದ ಹೊರಬಂದು ಬದುಕುವುದು ಕಷ್ಟ. ಇಂತಹ ಪಾಶಗಳಿಂದ ಪಾರಾಗಲು ಶ್ವೇತಾಶ್ವತರೋಪನಿಷತ್ತಿನಲ್ಲಿ ಸರಳ ಮಾರ್ಗವನ್ನು ಹೇಳಲಾಗಿದೆ.

ಅನಾದ್ಯನಂತಂ ಕಲಿಲಸ್ಯ ಮಧ್ಯೇ
ವಿಶ್ವಸ್ಯ ಸ್ರಷ್ಟಾರಮನೇಕರೂಪಮ್ |
ವಿಶ್ವಸ್ಯೈಕಂ ಪರಿವೇಷ್ಟಿತಾರಂ
ಜ್ಞಾತ್ವಾ ದೇವಂ ಮುಚ್ಯತೇ ಸರ್ವಪಾಶೈಃ || ೪. ೧೩||

ಗಹನಗಂಭೀರವಾದ ಸಂಸಾರದ ಮಧ್ಯದಲ್ಲಿ ಆದ್ಯಂತರಹಿತನೂ ವಿಶ್ವದ ಕರ್ತೃವೂ ಬಹುರೂಪಕನೂ ವಿಶ್ವದ ಏಕಮಾತ್ರ ವ್ಯಾಪಕನೂ ಆದ ಪರಮಾತ್ಮನನ್ನು ಅರಿತುಕೊಂಡಾಗ ಸರ್ವಪಾಶಗಳಿಂದಲೂ ಮುಕ್ತನಾಗುತ್ತಾನೆ.ಹೀಗೆ ಸಂಸಾರದ ಅನಿತ್ಯತ್ವವನ್ನು ಕಂಡುಕೊಂಡು ಇಹಲೋಕ-ಪರಲೋಕ-ಭೋಗಗಳಲ್ಲಿ ವೈರಾಗ್ಯವನ್ನು ಹೊಂದಿ, ಶಮ-ದಮಾದಿ- ಸಂಪನ್ನನಾದರೆ ಆತ್ಮನನ್ನು ಅರಿತುಕೊಂಡು ಮುಕ್ತನಾಗುತ್ತಾನೆ ಎಂಬುದು ಒಳಾರ್ಥ.

ಪರಮಾತ್ಮನನ್ನು ಕಾಣುವುದೆಂದರೆ ಏಕಾಗ್ರತೆಯ ಕೊನೆಯ ಹಂತವನ್ನು ತಲುಪುವುದು. ಆಗ ಯಾವುದೇ ಪಾಶಗಳನ್ನು ಮನಸ್ಸು ಗಮನಿಸುವುದೇ ಇಲ್ಲ. ಇಹ-ಪರದ ಸತ್ಯವನ್ನು ಅರಿತುಕೊಂಡು, ಯಾವುದು ನಿತ್ಯವಲ್ಲವೋ ಅಂದರೆ ಶಾಶ್ವತವಲ್ಲವೋ ಅವುಗಳ ಮೋಹದಿಂದ ಬಿಡಿಸಿಕೊಳ್ಳಬೇಕು. ಕಣ್ಣಿಗೆ ಕಾಣದ್ದನ್ನು ಇಲ್ಲವೇ ಇಲ್ಲ ಎಂದು ಹೇಳಲಾಗದು. ಅದು ಸರ್ವವ್ಯಾಪಿಯೂ ಆಗಿರಬಹುದು. ಹಾಗಾಗಿ ಪರಮಾತ್ಮನು ಸರ್ವವ್ಯಾಪಿ. ಅವನನ್ನು ಕಾಣಲು ಒಳಗಣ್ಣು ಬೇಕು. ಅದು ಆಳಕ್ಕಿಂತಲೂ ಆಳಕ್ಕಿಳಿಯಬೇಕು, ನೋಟ ದೂರಕ್ಕಿಂತಲೂ ದೂರ ಹರಿಯಬೇಕು. ಸಾಧನೆಯೆಂಬುದು ಪಾಶಗಳನ್ನು ಕಳೆದುಕೊಳ್ಳುವುದೇ ಆಗಿದೆ. ಪರಮಾತ್ಮನನ್ನು ಅರಿಯುವ ಯುಕ್ತಿಯೇ ಸಾಧನೆಗೆ, ಮುಕ್ತಿಗೆ ಸುಲಭ ಹಾದಿ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

LEAVE A REPLY

Please enter your comment!
Please enter your name here