Home ಧಾರ್ಮಿಕ ಸುದ್ದಿ ಕಲಿಯುಗದ ದೋಷಗಳಿಂದ ಪಾರಾಗುವುದು ಹೇಗೆ?

ಕಲಿಯುಗದ ದೋಷಗಳಿಂದ ಪಾರಾಗುವುದು ಹೇಗೆ?

1172
0
SHARE

ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಈ ಕಲಿಯುಗ, ಈ ನಾಲ್ಕೂ ಯುಗಗಳಲ್ಲಿ ಧರ್ಮಕ್ಕೆ ನಾಲ್ಕು ಚರಣಗಳು ಮತ್ತು ಅಧರ್ಮಕ್ಕೆ ನಾಲ್ಕು ಚರಣಗಳಿರುತ್ತವೆ. ಕೃತಯುಗದಿಂದ ಕಲಿಯುಗದ ತನಕ ಇರುವ ಈ ಚರಣಗಳು ತಮ್ಮ ಬಲದಲ್ಲಿ ವ್ಯತ್ಯಾಸ ಹೊಂದುತ್ತ ಹೋಗುತ್ತವೆ. ಅಂದರೆ ಕೃತಯುಗದಲ್ಲಿ ಧರ್ಮದ ಚರಣಗಳಾದ ಸತ್ಯ,ದಯೆ , ತಪಸ್ಸು ಮತ್ತು ದಾನ ಹೆಚ್ಚು ಪ್ರಭಾವಕಾರಿಯಾಗಿದ್ದು ಅಧರ್ಮದ ಚರಣಗಳಾದ ಅಸತ್ಯ, ಹಿಂಸೆ, ಅಸಂತೋಷ ಮತ್ತು ಕಲಹ ಇವುಗಳು ಪ್ರಭಾವಶಾಲಿಗಳಾಗಿರುವುದಿಲ್ಲ. ಆದರೆ ತ್ರೇತಾಯುಗದಲ್ಲಿ ಅಧರ್ಮದ ಚರಣಗಳ ಪ್ರಭಾವದಿಂದಾಗಿ ಧರ್ಮದ ಚರಣದ ಒಂದಂಶವು ಕ್ಷೀಣವಾಗುತ್ತ ಹೋಗುತ್ತದೆ. ದ್ವಾಪರದಲ್ಲಿ ಹಿಂಸೆ, ಅಸಂತೋಷ, ಸುಳ್ಳು ಮತ್ತು ಕಲಹಗಳು ವೃದ್ಧಿಯಾಗುತ್ತ ಹೋಗುತ್ತವೆ.

ಇದರಿಂದಾಗಿ ಧರ್ಮದ ನಾಲ್ಕು ಚರಣಗಳ ಅರ್ಧಭಾಗ ಕ್ಷೀಣವಾಗುತ್ತದೆ. ಕಲಿಯುಗದಲ್ಲಿ ಅಧರ್ಮದ ಪಾದಗಳು ಸಂಪೂರ್ಣವಾಗಿ ಬೆಳೆದು, ಧರ್ಮದ ನಾಲ್ಕೂ ಪಾದಗಳು ಕ್ಷೀಣಿಸುತ್ತ ಹೋಗಿ ನಾಲ್ಕನೆಯ ಒಂದಂಶ ಉಳಿದುಕೊಂಡು ಕೊನೆಯಲ್ಲಿ ಅದೂ ಲುಪ್ತವಾಗುತ್ತದೆ. ಹಾಗಾಗಿಯೇ ಕಲಿಯುಗದಲ್ಲಿ ಅನಾಚಾರ, ಅಸಂತೋಷ, ವೈರ, ಕ್ರೂರತನ, ಲೋಭಬುದ್ಧಿ, ಲಾಲಸೆಗಳು ಹೆಚ್ಚಿ ಜನರೆಲ್ಲರೂ ಇದನ್ನೇ ಮಾಡುತ್ತಿರುತ್ತಾರೆ.

ಸುಳ್ಳು ಕಪಟ, ನಿದ್ರಾ, ತಂದ್ರಾ, ಹಿಂಸೆ ವಿಶಾದ, ಶೋಕ ಮೋಹ, ಭಯ ದೈನ್ಯ ಇವುಗಳೇ ಪ್ರಧಾನವಾಗಿರುವ, ಅಂದರೆ ತಮೋಗುಣ ಪ್ರಮುಖವಾದ ಕಾಲವೇ ಕಲಿಯುಗ. ಇದರಿಂದಾಗಿಯೇ ನಾವು ಇರುವ ಈ ಯುಗದಲ್ಲಿ ಅನ್ಯಾಯ, ಅತ್ಯಾಚಾರ, ಸುಳ್ಳು, ಕೊಲೆ ಸುಲಿಗೆಗಳು ಧಾರಾಳವಾಗಿ ನಡೆಯುತ್ತಿವೆ. ನಾವು ನೆಮ್ಮದಿಯಿಲ್ಲದ ಜೀವನವನ್ನು ನಡೆಸುತ್ತಿದ್ದೇವೆ. ಇವತ್ತಿನ ಪರಿಸ್ಥಿತಿ ಹೇಗಿದೆಯೆಂದರೆ ನಮಗೆ ಸಾವಿನ ಬಗೆಗೆ ಭಯವಿಲ್ಲ. ಬದುಕಿನ ಬಗೆಗೇ ಹೆಚ್ಚಿನ ಭಯದ ವಾತಾವರಣ ಉಂಟಾಗಿದೆ. ಕನಸುಗಳೂ ಬೀಳದೆ ಬರುವ ಗಾಢ ನಿದ್ರೆಯ ಸಮಯ ಮಾತ್ರ ಸುಖದ ಗಳಿಗೆಯಾಗಿದೆ. ಅದೂ ಎಚ್ಚೆತ್ತಾಗ ಘೋರವಾದ ಸಂಗತಿಯು ಕಣ್ಣಿಗೋ ಕಿವಿಗೋ ಬೀಳಬಹುದಾದ ಸ್ಥಿತಿ ಈ ಕಲಿಯುಗದ್ದಾಗಿದೆ. ಈ ಕಲಿಯುಗದ ಎಲ್ಲ ದೋಷಯುಕ್ತವಾದ ಭಾವಗಳಿಂದ, ಗುಣಗಳಿಂದ ಹೊರಬರಲೇ ಬೇಕು. ಕಲಿಯುಗವು ದೋಷಗಳಿಂದ ದೂರವಾಗಲೇ ಬೇಕು. ಆಗ ಮಾತ್ರ ಕಲಿಯುಗದ ಎಲ್ಲ ಜೀವಿಗಳಿಗೂ ನೆಮ್ಮದಿ.

ಆದರೆ ಈ ದೋಷಗಳಿಂದ ಪಾರಾಗುವುದು ಹೇಗೆ? ಇದಕ್ಕೂ ಮಾರ್ಗವಿದೆ. ಎಲ್ಲ ದೋಷಗಳು ಹುಟ್ಟಿಕೊಳ್ಳಲು ಕಾರಣವಾಗುವುದೇ ಅಂತಃಕರಣ. ಈ ಅಂತಃಕರಣದಲ್ಲಿ ಭಗವಂತನು ಬಂದು ನೆಲೆನಿಂತಾಗ ಎಲ್ಲ ದೋಷಗಳೂ ನಿವಾರಣೆಯಾಗುತ್ತವೆ. ಭಗವಂತನು ಅಂತಃಕರಣದಲ್ಲಿ ಬಂದು ನೆಲೆಸಲು ಭಗವಂತನ ರೂಪ, ಗುಣ, ಲೀಲೆ, ಧಾಮ ಮತ್ತು ನಾಮ ಶ್ರವಣ, ಸಂಕೀರ್ತನೆ, ಧ್ಯಾನ ಮತ್ತು ಪೂಜೆ, ಇವು ಸಹಾಯ ಮಾಡುತ್ತವೆ. ಇದು ಮದ್ಭಾಗವತದ ದ್ವಾದಶ ಸ್ಕಂದದಲ್ಲಿ ಹೇಳಿದ ಮಾರ್ಗವಾಗಿದೆ. ಭಗವಂತನ ಸಂಕೀರ್ತನೆ, ಧ್ಯಾನ ಮತ್ತು ಪೂಜೆಗಳಿಂದಾಗಿ ಮನಸ್ಸು ಚಂಚಲವಾಗದಿರುವುದರಿಂದ ಸುಲಭವಾಗಿ ಯಾವುದೇ ಮೋಹಕ್ಕೆ ಸಿಲುಕುವುದಿಲ್ಲ. ಮೋಹವಿಲ್ಲದವನು ಯಾವುದನ್ನೂ ಬೇಕೆಂದು ಬಯಸಲಾರ. ತನಗೆ ಬೇಕಾಗಿ ಬೇರೆಯವರಿಂದ ಕಸಿಯಲಾರ. ಅವರ ವಿರುದ್ಧ ದ್ವೇಷ ಸಾಧನೆಯಾಗಲೀ ಅತ್ಯಾಚಾರವಾಗಲೀ ಯುದ್ಧವಾಗಲೀ ಮಾಡಲಾರ. ಮೊಸ ಕಳ್ಳತನಕ್ಕೂ ಮುಂದಾಗಲಾರ. ಹೀಗೆ ದೇವ ಸಂಕೀರ್ತನೆಯಿಂದಾಗಿ ಅಂತಃಕರಣ ಶುದ್ಧವಾಗಿ, ತಮೋಗುಣವು ನಾಶವಾಗುತ್ತ ಬರುತ್ತದೆ. ಆಗ ಸಾತ್ವಿಕಗುಣಗಳೇ ಹರಡಿಕೊಂಡು ಕಲಿಯುಗದ ಎಲ್ಲ ದೋಷಗಳೂ ಕ್ಷೀಣಿಸುವುವು.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here