Home ನಂಬಿಕೆ ಸುತ್ತಮುತ್ತ ಪವಾಡ ಪುರುಷ ವೆಂಕಟನಾಥ “ರಾಘವೇಂದ್ರ ಸ್ವಾಮಿ”ಯಾಗಿದ್ದು ಹೇಗೆ ಗೊತ್ತಾ

ಪವಾಡ ಪುರುಷ ವೆಂಕಟನಾಥ “ರಾಘವೇಂದ್ರ ಸ್ವಾಮಿ”ಯಾಗಿದ್ದು ಹೇಗೆ ಗೊತ್ತಾ

8605
0
SHARE

ರಾಘವೇಂದ್ರ ಸ್ವಾಮಿಗಳು ಜನಿಸಿದ್ದು 1599ರಲ್ಲಿ. ತಮಿಳುನಾಡಿನ ಭುವನಗಿರಿ ಎಂಬಲ್ಲಿ. ತಂದೆ ತಿಮ್ಮಣ್ಣ ಭಟ್ಟ, ತಾಯಿ ಗೋಪಿಕಾಂಬಾ. ಹೆತ್ತವರು ಮಗುವಿಗಿಟ್ಟ ಹೆಸರು ವೆಂಕಟನಾಥ. ಬಾಲ್ಯದಲ್ಲೇ ಈತ ಬುದ್ಧಿವಂತ ಬಾಲಕ. ಆರಂಭದ ವಿದ್ಯಾಭ್ಯಾಸ ಸೋದರಮಾವನಾದ ಲಕ್ಷ್ಮಿ ನರಸಿಂಹಾಚಾರ್ಯರ ಬಳಿ ಮಧುರೈನಲ್ಲಿ ಪೂರ್ಣಗೊಂಡಿತು. ಕೋಶ, ಕಾವ್ಯ, ನಾಟಕ ವ್ಯಾಕರಣಗಳನ್ನು ಅಧ್ಯಯನ ಮಾಡಿದರು.

ಇವರು ಸಣ್ಣ ವಯಸ್ಸಿನಲ್ಲಿದ್ದಾಗಲೇ ತಂದೆ ತೀರಿಕೊಂಡ ಕಾರಣ ಸಂಸಾರದ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ಸರಸ್ವತಿ ಎಂಬಾಕೆಯೊಂದಿಗೆ ವಿವಾಹವಾಯಿತು.ಆ ಬಳಿಕ ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥದಲ್ಲಿ ದ್ವೈತ ವೇದಾಂತ ವ್ಯಾಸಂಗ ಆರಂಭಿಸಿದರು. ತರ್ಕ, ವ್ಯಾಕರಣ, ಮೀಮಾಂಸಾ, ವೇದಾಂತಾದಿ ಶಾಸ್ತ್ರಗಳನ್ನು ಕಲಿತರು. ಅಲ್ಲಿನ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಬೋಧಿಸಿದರು. ಅದಕ್ಕೆಂದು ಮಕ್ಕಳಿಗೆ ಪ್ರತ್ಯೇಕ ಶುಲ್ಕ ವಿಧಿಸುತ್ತಿರಲಿಲ್ಲ. ಅವರು ಕೊಟ್ಟರಷ್ಟೇ ತೆಗೆದುಕೊಳ್ಳುತ್ತಿದ್ದರು.

ಹೀಗಾಗಿ ಅವರ ಆರ್ಥಿಕ ಸ್ಥಿತಿ ಮತ್ತಷ್ಟು ಕುಸಿಯಿತು. ಅದೆಷ್ಟೋ ಬಾರಿ ಮಡದಿ ಮಕ್ಕಳೊಂದಿಗೆ ಉಪವಾಸ ಮಲಗುತ್ತಿದ್ದರು. ಇರುವ ಮನೆಯೂ ಸೋರುತ್ತಿತ್ತು. ಮನೆಯಲ್ಲಿದ್ದ ಒಡಕು ಪಾತ್ರೆಗಳು ಕಳವಾದವು. ಎಲ್ಲವೂ ಹರಿಯ ಇಚ್ಛೆ ಎಂದುಕೊಂಡು ಗೊಣಗದೆ ಜೀವನ ನಡೆಸುತ್ತಿದ್ದರು.

ಅವರ ಭಕ್ತಿಯ ತೀವ್ರತೆ ಎಷ್ಟಿತ್ತು ಎಂಬುದಕ್ಕೆ ಒಂದು ಉದಾಹರಣೆ ಇದೆ ಕೇಳಿ…ಒಮ್ಮೆ ವೆಂಕಟನಾಥರಿಗೆ ಸಮಾರಂಭವೊಂದರಲ್ಲಿ ಪಾಲ್ಗೊಳುವ ಆಹ್ವಾನ ಸಿಕ್ಕಿತು. ಆದರೆ ಅಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡದೆ ಅವರನ್ನು ಗಂಧ ಅರೆಯುವ ಕೆಲಸಕ್ಕೆ ನೇಮಿಸಲಾಯಿತು. ಅವರು ಬೇಸರಿಸಿಕೊಳ್ಳದೆ ಗಂಧದ ಕೊರಡನ್ನು ತೇಯ್ದರು. ತೇಯುವಾಗ ಪದ್ಧತಿಯ ಪ್ರಕಾರ ಅಗ್ನಿಸೂಕ್ತವನ್ನು ಪಠಿಸುತ್ತಿದ್ದರು.

ಬಳಿಕ ಆ ಗಂಧವನ್ನು ಲೇಪಿಸಿಕೊಂಡವರಿಗೆ ವಿಪರೀತ ಉರಿ ಆರಂಭವಾಯಿತು. ಹೀಗಾಗಲು ಏನು ಕಾರಣವೆಂದು ವೆಂಕಟನಾಥರನ್ನು ಪ್ರಶ್ನಿಸಿದರು. ಅಗ್ನಿ ಸೂಕ್ತ ಹೇಳುತ್ತಾ ಗಂಧ ತೇಯ್ದಿರುವುದೇ ಇದಕ್ಕೆ ಕಾರಣ ಎಂದು ಊಹಿಸಿ ಮತ್ತೆ ವರುಣ ಮಂತ್ರ ಪಠಿಸಿದಾಗ ಎಲ್ಲರ ಉರಿಯೂ ಕಡಿಮೆಯಾಯಿತು. ಇದು ಅವರ ಸ್ತೋತ್ರ ಪಠಣಕ್ಕಿದ್ದ ಶಕ್ತಿ!
ಗುರುಗಳೊಂದಿಗೆ ಅನೇಕ ಪಾಂಡಿತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಜಯಶಾಲಿಯಾಗಿ ಮಠಕ್ಕೆ ಹೆಸರು ತಂದರು. ಗುರುಗಳಿಂದ ‘ಮಹಾಭಾಷ್ಯಕಾರ’ ಎಂಬ ಬಿರುದನ್ನೂ ಪಡೆದುಕೊಂಡರು. ಭೈರವ ಭಟ್ಟ, ವೀರಭದ್ರ ಮೊದಲಾದ ಪ್ರಸಿದ್ಧ ಪಂಡಿತರನ್ನೂ ಸೋಲಿಸಿ ಜಯಪತ್ರ ಗೆದ್ದುಕೊಂಡರು.

ಸುಧೀಂದ್ರ ತೀರ್ಥರು ವೆಂಕಟನಾಥರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು. 1621ರಲ್ಲಿ ತಂಜಾವೂರಿನಲ್ಲಿ ತನ್ನ ಗುರುಗಳ ಸಮ್ಮುಖದಲ್ಲೇ ಸನ್ಯಾಸತ್ವ ಸ್ವೀಕರಿಸಿ ರಾಘವೇಂದ್ರ ತೀರ್ಥ ಎಂದು ನಾಮಾಂಕಿತರಾದರು. ಕುಂಭಕೋಣ ಮಠದ ಉತ್ತಾರಾಧಿಕಾರಿಯಾದರು. ಮುಂದೆ ಅನೇಕ ತೀರ್ಥಕ್ಷೇತ್ರಗಳಿಗೆ ಸಂಚರಿಸಿದರು. ಶ್ರೀರಂಗ, ಮಧುರೈ,ರಾಮೇಶ್ವರ, ತಿರುಪತಿ, ಉಡುಪಿಗೆ ಭೇಟಿ ನೀಡಿ, ನೊಂದು, ಬೆಂದ ಭಕ್ತರ ಕಷ್ಟಗಳನ್ನು ಪರಿಹರಿಸಿದರು.

ಪವಾಡ ಪುರುಷ ಎಂದೇ ರಾಘವೇಂದ್ರ ಸ್ವಾಮಿಗಳು ಹೆಸರು ಮಾಡಿದ್ದರೂ ಪ್ರಚಂಡ ವಿದ್ವಾಂಸರಾಗಿದ್ದರು. 48ಕ್ಕೂ ಹೆಚ್ಚಿನ ಅಮೂಲ್ಯ ಗ್ರಂಥಗಳನ್ನು ಬರೆದು ‘ಟಿಪ್ಪಣ್ಣಾಚಾರ್ಯ ಚಕ್ರವರ್ತಿ’ ಗಳೆಂದು ಪ್ರಸಿದ್ಧರಾದರು. ವೇಸವ್ಯಾಸರ ‘ಬ್ರಹ್ಮಸೂತ್ರ’ ಗಳಿಗೆ ‘ತಂತ್ರ ದೀಪಿಕಾ’, ಮಧ್ವಾಚಾರ್ಯರ ‘ಅಣು ಭಾಷ್ಯ’ಕ್ಕೆ ‘ತತ್ತ್ವ ಮಂಜರೀ’, ವ್ಯಾಖ್ಯಾನ, ಉಪನಿಷತ್ತುಗಳಿಗೆ ‘ಖಂಡಾರ್ಥ’, ಟೀಕಾಕೃತ್ಪಾದರ ‘ನ್ಯಾಯಸುಧಾ’ ಕ್ಕೆ ‘ಪರಿಮಳ’, ಉಳಿದ ಟೀಕಾಗ್ರಂಥಗಳಿಗೆ ‘ಭಾವದೀಪ’ ಎಂಬ ವ್ಯಾಖ್ಯಾನ ರಚಿಸಿದ್ದಾರೆ.

ಚಂದ್ರಿಕಾರ್ಚಾಯರ ‘ಚಂದ್ರಿಕಾ ಗ್ರಂಥ’, ‘ತರ್ಕತಾಂಡವ’ ಗ್ರಂಥಗಳಿಗೂ ವ್ಯಾಖ್ಯಾನ ಬರೆದಿದ್ದಾರೆ. ತಾತ್ಪರ್ಯ ನಿರ್ಣಯದ ಸಂಗ್ರಹ, ಪ್ರಮೇಯ ನವಮಾಲಿಕೆಯ ವ್ಯಾಖ್ಯಾನ, ಪ್ರಾತಃ ಸಂಕಲ್ಪ ಗದ್ಯ ಮೊದಲಾದ ಸ್ವತಂತ್ರ ಗ್ರಂಥಗಳನ್ನೂ ರಚಿಸಿದ್ದಾರೆ. ನದಿ ತಾರತಮ್ಯ ಸ್ತೋತ್ರವೆಂಬ ಚಿಕ್ಕ ಗ್ರಂಥದಿಂದ ಆರಂಭಿಸಿ ಪರಿಮಳ ಗ್ರಂಥವೆಂಬ ಬೃಹತ್ ಗಾತ್ರದ ಗ್ರಂಥಗಳನ್ನೂ ರಚಿಸಿದ್ದಾರೆ.

ಪವಾಡ ಪುರುಷನೆಂದು ಹೆಸರು ಮಾಡಿದ್ದ ರಾಘವೇಂದ್ರ ಸ್ವಾಮಿಗಳನ್ನು ಕಲವರು ಪರೀಕ್ಷಿಸಿದ್ದರು. ಆದವಾನಿಯ ನವಾಬನೊಬ್ಬ ಬಟ್ಟೆ ಮುಚ್ಚಿದ್ದ ಹರಿವಾಣದಲ್ಲಿ ಮಾಂಸದೂಟವನ್ನಿಟ್ಟು ಗುರುಗಳಿಗೆ ಕೊಟ್ಟ. ಅದಕ್ಕೆ ಜಲ ಪೋಕ್ಷಣೆ ಮಾಡಿ ಬಟ್ಟೆ ಸರಿಸಿದಾಗ ಒಳಗೆ ಬಗೆಬಗೆಯ ಹಣ್ಣು ಹಂಪಲುಗಳಿದ್ದವು. ತಪ್ಪನ್ನು ತಿದ್ದಿಕೊಂಡ ನವಾಬ ಗುರುಗಳಿಗೆ ಶರಣಾದ.
ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಗುರು ರಾಘವೇಂದ್ರ ಸ್ವಾಮಿಗಳೂ ಒಬ್ಬರು. ಮಧ್ವಾಚಾರ್ಯರ ಅನುಯಾಯಿಯಾಗಿ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.1671ರಲ್ಲಿ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ವೃಂದಾವನ ಪ್ರವೇಶ ಮಾಡಿದರು. ವೃಂದಾವನವನ್ನು ಸಜೀವವಾಗಿ ಪ್ರವೇಶಿಸಿದ್ದ ಆ ಪ್ರದೇಶ ಇಂದು ಪೂಜನೀಯ ಸ್ಥಳ. ಸಾವಿರಾರು ಭಕ್ತರು ಪ್ರತಿನಿತ್ಯ ದೇವಾಲಯಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.

‘ಇನ್ನೂ 400 ವರ್ಷಗಳ ಕಾಲ ನಾನಿಲ್ಲಿ ವಾಸಿಸುತ್ತೇನೆ’ ಎಂದು ಅವರು ಹೇಳಿದ್ದನ್ನು ಭಕ್ತರಿನ್ನೂ ನಂಬಿಕೊಂಡಿದ್ದಾರೆ. ‘ಲಾಜನ ಬಡವರ, ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಾಘವೇಂದ್ರ ಸ್ವಾಮಿಗಳನ್ನು ಆರಾಧನಾ ಮಹೋತ್ಸವದ ಮೂಲಕ ಪ್ರತಿವರ್ಷ ನೆನಪಿಸಿಕೊಳ್ಳಲಾಗುತ್ತದೆ.
• ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶಿಸುವ ಮೊದಲು ಮಾಡಿದ ಕೊನೆಯ ಪ್ರವಚನದ ಸಾರಾಂಶ:
• ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸತ್ಕಾರ್ಯಗಳನ್ನು ಮಾಡಬೇಕು.
• ಸಮಾಜಕ್ಕೆ ಒಳಿತಾಗುವಂತೆ ಮಾಡುವುದೇ ನಿಜವಾದ ದೇವರ ಪೂಜೆ. ಕಳೆದುಹೋದ ಒಂದು ನಿಮಿಷವೂ ಮತ್ತೆಬಾರದು ಎಂಬುದನ್ನು ಮರೆಯಬಾರದು.
• ದೇವರೆಡೆಗಿನ ನಿಮ್ಮ ಭಕ್ತಿ ಪರಿಶುದ್ಧವಾಗಿರಲಿ. ಪೂರ್ಣ ಮನಸ್ಸಿನಿಂದ ಅವನನ್ನು ಪೂಜಿಸಿ.
• ಸುಜ್ಞಾನವ ಎಂಬುದು ಎಲ್ಲಾ ಪವಾಡಗಳಿಗಿಂತ ಮಿಗಿಲು. ಜ್ಞಾನವಿಲ್ಲದಿದ್ದರೆ ಯಾವ ಪವಾಡವೂ ಘಟಿಸದು.

ಅತಿಥಿ ಕೃಷ್ಣನ ನೈವೇದ್ಯ ಅಂಬಳಪುಳ ಪಾಲ್ ಪಾಯಸಮ್
ಈ ಕ್ಷೇತ್ರದ ಹಾಲು ಪಾಯಸದ ರುಚಿಗೆ ಮನಸೋಲದವರಿಲ್ಲ. ಆದರೆ ಅದೇ ಮಾದರಿಯಲ್ಲಿ ಮನೆಯಲ್ಲಿ ಪಾಯಸ ತಯಾರಿಸಿದರೆ ಆ ರುಚಿಯಿಲ್ಲ. ಯಾಕೆ ಹೀಗೆ? ಅದಕ್ಕೆ ಕಾರಣವನ್ನು ಅಲ್ಲಿನ ಅರ್ಚಕರೇ ವಿವರಿಸಿದ್ದಾರೆ!

ಕೇರಳದ ಅಂಬಳಪುಳ ಶ್ರೀ ಕೃಷ್ಣ ಕ್ಷೇತ್ರದ ನೈವೇದ್ಯ ಹಾಲು ಪಾಯಸ (ಪಾಲ್ ಪಾಯಸಂ) ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕೃಷ್ಣನ ದರ್ಶನ ಮಾಡುವ ತವಕ ಎಷ್ಟಿದೆಯೋ, ಅಷ್ಟೇ ಈ ಪಾಯಸ ಪಡೆಯಲೂ ಇದೆ. ಇದು ನೈವೇದ್ಯವೂ ಹೌದು’ ಇಷ್ಟು ಸ್ವಾದಿಷ್ಟ ಪಾಯಸ ಬೇರೆಲ್ಲೂ ದೊರೆಯದು ಅನ್ನುವಷ್ಟು ಇದರ ಕೀರ್ತಿ ಹಬ್ಬಿದೆ. ಕೇರಳದವರಿಗೊಂದು ಇದೊಂದು ‘ಪಾಲ್ ಪಾಯಸಂ ದೇಗುಲ’.

ಈ ಪಾಯಸಕ್ಕೆ ರುಚಿ ಬರಲು ವಿಶೇಷವಾದ ಪಾಕ ವಸ್ತುಗಳನ್ನು ಬಳಸಲಾಗುತ್ತಿಲ್ಲ. ನೀರು, ಹಾಲು, ಅಕ್ಕಿ ಮತ್ತು ಸಕ್ಕರೆ ಇಷ್ಟೇ ಸಾಮಾಗ್ರಿಗಳು. ಇದನ್ನು ಉಪಯೋಗಿಸಿ ಮಾಡುವ ಈ ಪಾಯಸ ಮತ್ತೇಕೆ ಅಷ್ಟು ಸ್ವಾದ? ಇದನ್ನು ತಯಾರಿಸುವ ಕ್ಷೇತ್ರದ ಅರ್ಚಕ (ಕೀಳ್ ಶಾಂತಿ) ಈ ಕುರಿತಾಗಿ ಹೀಗೆ ಹೇಳುತ್ತಾರೆ. ‘ನಾನು ಮನೆಯಲ್ಲಿ ಇದೇ ರೀತಿ ಪಾಯಸ ಮಾಡಿದೆ. ಆದರೆ ಕ್ಷೇತ್ರದ ಪಾಯಸದ ರುಚಿಯೇ ಇಲ್ಲ. ಈ ಕ್ಷೇತ್ರದಲ್ಲಿ ಪಾಯಸ ತಯಾರಿ ಮಾಡುವ ಅರ್ಚಕರೊಬ್ಬರು ತಿರುವನಂತಪುರಂನ ಪದ್ಮನಾಭ ಸ್ವಾಮಿ ಕ್ಷೇತ್ರಕ್ಕೆ ಹೋಗಿ, ಅಲ್ಲಿ ಇದೇ ಪಾಯಸ ಮಾಡಿದರು. ಆದರೆ ಅಂಬಳಪುಳ ಪಾಯಸದ ಸನಿಹಕ್ಕೆ ಅದರ ರುಚಿ ಬರಲಿಲ್ಲ’. ಹಾಗಿದ್ದರೆ ಇದು ಇಲ್ಲಿನ ಕೃಷ್ಣನ ಲೀಲೆಯೇ?
ಪಾಯಸ ತಯಾರಿ

ಈ ಕ್ಷೇತ್ರದ ತಡಪಳ್ಳಿ ಅನ್ನುವ ಪಾಕಶಾಲೆಯಲ್ಲಿ ಮಡಿಯಲ್ಲಿರುವ ಅರ್ಚಕರೇ ಈ ಪಾಯಸ ತಯಾರಿ ಮಾಡುತ್ತಾರೆ. ಬೆಳಗ್ಗೆ ಮೂರು ಗಂಟೆಗೆ ಕ್ಷೇತ್ರದ ಗರ್ಭಗುಡಿಯ ತೆರೆದಾಗಲೇ ಪಾಯಸ ತಯಾರಿ ಕಾರ್ಯ ಪ್ರಾರಂಭವಾಗುತ್ತದೆ. ಕ್ಷೇತ್ರದ ಗರ್ಭಗುಡಿಯ ಸಮೀಪದ ಬಾವಿ ಮತ್ತು ಕ್ಷೇತ್ರ ಪ್ರಾಂಗಣದಲ್ಲಿರುವ ‘ಮಣಿಕಿರ್ಣ’ ಎಂದು ಕರೆಯುವ ಬಾವಿಯ ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಬೃಹತ್ ಕಂಚಿನ ಉರುಳಿ (ಅಗಲ ಬಾಯಿಯ ದೊಡ್ಡ ಪಾತ್ರೆ) ಯಲ್ಲಿ ಹಾಕಿ ಕಟ್ಟಿಗೆಯ ಬೆಂಕಿಯಿಂದ ಗುದಿಸುತ್ತಾರೆ. ಈ ನೀರನ್ನು ಮರದ ದೊಡ್ಡ ಸಟ್ಟುಗದಿಂದ ಕಲಕುತ್ತಾ ಕುದಿಸುತ್ತಾರೆ. ನೀರನ್ನು ಚೆನ್ನಾಗಿ ಕುದಿದು ಆವಿ ಬಿಡುವಾಗ ಬೆಳ್ಳಗಿನ ಏಳು ಗಂಟೆ ಆಗಿ ಬಿಡುತ್ತದೆ.

ಈ ಹಂತದಲ್ಲಿ ಇದಕ್ಕೆ ಹಾಲು ಬೆರೆಸುತ್ತಾರೆ. ಈ ಮಿಶ್ರಣ ಸಟ್ಟುಗದ ಕಲಕುವಿಕೆಯಲ್ಲಿ ಬಿಸಿಯಾಗುತ್ತಿದ್ದಂತೆ ನೀರು ಪೂರ್ತಿ ಆವಿಯಾಗಿ ಬಿಡುತ್ತದೆ. ಜತೆಗೆ ಹಾಲಿನ ಶೇ.10ರಷ್ಟು ಅಂಶ ಬತ್ತಿ ಹೋಗುತ್ತದೆ. ಈ ಹಂತ ತಲುಪುವಾಗ ಗಂಟೆ ಹನ್ನೊಂದಾಯಿತು. ಆ ವೇಳೆಗೆ ಅಕ್ಕಿ ಹಾಕಿ ಸುಮಾರು ಮುಕ್ಕಾಲು ಗಂಟೆ ಮತ್ತೆ ಸಟ್ಟುಗದ ಕ್ರಿಯೆ ಮುಂದುವರಿದಾಗ ಮಿಶ್ರಣ ಹದ ಬಂದಿರುವುದು ತಿಳಿಯುತ್ತದೆ. ಮುಂದಿನ ಹಂತದಲ್ಲಿ ಶ್ರೀ ಕೃಷ್ಣನಿಗೆ ಕರೆ ಹೋಗುತ್ತದೆ.

ವಾಸುದೇವಾ…
ಈ ಪಾಯಸ ತಯಾರಿಯಲ್ಲಿರುವ ಒಟ್ಟು ನಾಲ್ಕು ಮಂದಿಯಲ್ಲಿ ಓರ್ವ ಅರ್ಚಕ ತರಪಳ್ಳಿ ದ್ವಾರದ ಮೇಲೆ ನಿಂತು ‘ವಾಸುದೇವಾ..’ ಎಂದು ಸುಶ್ರಾವ್ಯವಾಗಿ ದೇಗುಲದ ಗರ್ಭಗುಡಿಯತ್ತ ಮುಖ ಮಾಡಿ ಕರೆದಾಗ,ಇಬ್ಬರು ಕ್ಷೇತ್ರದ ಪರಿಚಾರಕರು ಸಕ್ಕರೆ ಹೊತ್ತು ತರುತ್ತಾರೆ. ಇದನ್ನು ಬೆರೆಸಿ ಸಕ್ಕರೆ ಸರಿಯಾಗಿ ಕರಗಿದ ಬಳಿಕ ಮಿಶ್ರಣ ಸಂಪಿಗೆ ವರ್ಣಕ್ಕೆ ತಿರುಗಿದಾಗ ಉರುಳಿಯಿಂದ ಪಾತ್ರೆಗಳಿಗೆಪಾಯಸ ತುಂಬಿಸಿ ನೈವೇದ್ಯಕ್ಕೆ ಸಾಗುತ್ತದೆ. ಇದರಲ್ಲಿ ‘ಮಂಗಲಿ’ ಅನ್ನುವ ಹೆಸರಿನ ಪಾತ್ರೆಯಲ್ಲಿ ಸುರಿದ ಪಾಯಸ ನೇರ ಗರ್ಭಗುಡಿಯೊಳಕ್ಕೆ ಸಾಗುತ್ತದೆ. ಉಳಿದವುಗಳನ್ನು ಹೊರಭಾಗದಲ್ಲಿ ಇರಿಸಿ ಕೃಷ್ಣನಿಗೆ ನೈವೇದ್ಯ ಮಾಡಲಾಗುತ್ತದೆ. ಅಂತೂ ಮಾಡಲಿರುವ ಪಾಯಸ ಪೂರ್ತಿ ಕೃಷ್ಣನಿಗೆ ನೈವೇದ್ಯ ಆಗಲೇಬೇಕು.

ತಡಪಳ್ಳಿಯಿಂದ ಗರ್ಭಗುಡಿಗೆ ಪಾಯಸ ಸಾಗಿಸುವ ವೇಳೆ ಮಹಿಳೆಯೊಬ್ಬರು ಆ ದಾರಿಯಲ್ಲಿ ತೀರ್ಥ ಸಿಂಪಡಿಸಿ ಶುದ್ಧ ಮಾಡುವುದಿದೆ. ಬಳಿಕ ಯಾರೂ ಪಥ ದಾಟಬಾರದು.ಶಂಖನಾದ ಹೊಮ್ಮಿದಂತೆ, ಕಟಾರಗಳು ಮಂಗಲಿ ಜೊತೆಯಲ್ಲೇ ನೈವೇದ್ಯಕ್ಕಾಗಿ ಸಾಗುತ್ತವೆ. ನೈವೇದ್ಯದ ಬಳಿಕ ಪ್ರಸಾದವ ವಿತರಣೆಗೆ ಕೌಂಟರ್ ನತ್ತ ಈ ಪಾಯಸ ಸಾಗುತ್ತದೆ. ಒಬ್ಬನಿಗೆ ಅರ್ಧ ಲೀಟರ್ ನಂತೆ ನೀಡಲಾಗುತ್ತದೆ. ರೂಪಾಯಿ 80 ತೆರಬೇಕು. ದಿನಕ್ಕೆ 135 ಲೀಟರ್ ಪಾಯಸ ತಯಾರಾಗುತ್ತದೆ. ಹಬ್ಬದ ದಿನಗಳಲ್ಲಿ 150 ರಿಂದ 200 ಲೀಟರ್ ವರೆಗೂ ತಯಾರಿಸಲಾಗುತ್ತದೆ.

ನೈವೇದ್ಯಕ್ಕೆ ಸರತಿ ಸಾಲು
ಅರ್ಚಕರು ತಿಳಿಸುವಂತೆ ನಾಲ್ಕು ಲೀಟರ್ ನೀರಿಗೆ ಒಂದು ಲೀಟರ್ ಹಾಲು ಅನ್ನುವ ಅನುಪಾತದಲ್ಲಿ ಮಿಶ್ರಣ ಮಾಡಲಾಗುತ್ತಿದೆ. ಹಾಲು ಕ್ಷೇತ್ರದ ಗೋಶಾಲೆಯಿಂದಲೇ ಬರುತ್ತದೆ. ಸುಮಾರು ಆರು ಗಂಟೆಗಳ ನಿರಂತರ ಕ್ರಿಯೆಯಲ್ಲಿ ಸ್ವಾದಿಷ್ಟ ಪಾಯಸ ಶ್ರೀ ಕೃಷ್ಣನ ನೈವೇದ್ಯಕ್ಕೆ ಅರ್ಪಿತವಾಗುತ್ತದೆ.

ಸುಮಾರು ವರ್ಷಗಳಿಂದ ಈ ಪಾಯಸ ತಯಾರಿಸುವ ಅರ್ಚಕರೊಬ್ಬರು ತಿಳಿಸುವಂತೆ ಇಲ್ಲಿನ ಬಾವಿಯ ವಿಶೇಷತೆ ಈ ಪಾಯಸದ ಸ್ವಾದಕ್ಕೆ ಕಾರಣವಂತೆ. ಮಣಿ ಕಿರ್ಣ ಹೆಸರಿನ ಬಾವಿಗೆ ಆವರಣ ಮಾಡಲಾಗಿದ್ದು ಇದರೊಳಗೆ ಮಡಿಯಲ್ಲಿರುವ ಅರ್ಚಕರಿಗೇ ಮಾತ್ರವೇ ಪ್ರವೇಶ.

ರೈಲಿನಲ್ಲಿ ಹೋದರೆ ಆಲಪುಳ್ಳದಲ್ಲಿ ಇಳಿಯಬೇಕು. ಅಲ್ಲಿಂದ ಅಂಬಳಪುರಕ್ಕೆ 14 ಕಿ.ಮೀ. ದೂರವಿದೆ. ತಿರುವನಂತಪುರಮ್ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಕ್ಷೇತ್ರ ಸಿಗುತ್ತದೆ.
(ನನ್ನ ಭಾರತ-ನನ್ನ ಪರಂಪರೆ)

LEAVE A REPLY

Please enter your comment!
Please enter your name here