Home ನಂಬಿಕೆ ಸುತ್ತಮುತ್ತ ಸತ್ಪುರುಷನಾಗುವುದು ಹೇಗೆ?

ಸತ್ಪುರುಷನಾಗುವುದು ಹೇಗೆ?

2443
0
SHARE

ಹುಟ್ಟನ್ನು ನಾವು ಸಂಭ್ರಮಿಸುವುದಿಲ್ಲ. ಹುಟ್ಟಿದ ತಕ್ಷಣ ಅಳಬೇಕಂತೆ. ಇದು ಆರೋಗ್ಯದ ಲಕ್ಷಣ. ಹಾಗಾಗಿ ಈ ಹುಟ್ಟು ಎಂಬುದು ಸಂತಸದೊಳಗಿನ ಭಯ. ಸಾವು ನಮ್ಮದಲ್ಲವೇ ಅಲ್ಲ. ಬದುಕು ಮಾತ್ರ ನಮ್ಮದು ಎಂದು ಕೊಂಡಿದ್ದೇವೆ. ಆಳಕ್ಕಿಳಿದು ನೋಡಿದರೆ ಅದೂ ಕೂಡ ಒಂದಿಷ್ಟು ಸಂದಿಗ್ಧಗಳಲ್ಲಿ ಸಿಲುಕಿ, ಪರಾವಲಂಬನೆಯ ದಾರಿಯಲ್ಲಿ ನಡೆದುಕೊಂಡು ಏನನ್ನೋ ಹುಡುಕುತ್ತ, ಪಡೆಯುತ್ತ, ಕಳೆದುಕೊಳ್ಳುತ್ತ ಸಾಗುವ ಸಂಪೂರ್ಣವಾಗಿ ನಮ್ಮದಾಗದ ಬದುಕು ನಮ್ಮದು. ನಾವು ಪೂರ್ಣವಲ್ಲದಿದ್ದರೂ ಆದಷ್ಟು ನಮ್ಮದೇ ಆದ ಗುರಿ, ಆ ಗುರಿಗೊಂದು ಸತ್ಪತವನ್ನು ಹುಡುಕಿಕೊಂಡು, ಆ ಮೂಲಕ ಬದುಕಿನ ಪಯಣವನ್ನು ಸುಂದರವಾಗಿಸಿಕೊಳ್ಳುವ ಯತ್ನ ಮಾಡಲೇಬೇಕು. ಈ ಯತ್ನ ಸಾರ್ಥಕತೆಯ ಆಕಾಂಕ್ಷೆಯನ್ನು ಹೊತ್ತುಕೊಂಡು, ಹಿತವಾದ ಮಾರ್ಗವನ್ನು ಅನುಸರಿಸಿಕೊಂಡು ಹೋಗಬೇಕಾದದ್ದೂ ಅಗತ್ಯ. ಕೇವಲ ಗುರಿ ಮುಟ್ಟುವುದಷ್ಟೇ ಉದ್ದೇಶವಲ್ಲ. ಗುರಿ ಮುಟ್ಟುವ ಹಾದಿಯೂ ಮುಖ್ಯವೇ. ಹಿತವಾದದ್ದನ್ನು ಪಡೆಯಲು ಪರರ ಅಹಿತಕ್ಕೆ
ಕಾರಣವಾಗುವ ನಡೆ ಗುರಿ ತಪ್ಪಿಸುತ್ತದೆ. ನಿಜವಾದ ಸಂತೋಷ ದಕ್ಕುವುದಿಲ್ಲ. ಆನಂದದ ಭ್ರಮೆಯನ್ನೇ ಅಪ್ಪಿಕೊಂಡು ಸಂಭ್ರಮಿಸುತ್ತೇವೆ ಅಷ್ಟೆ.

ಸನ್ಮಾರ್ಗದಲ್ಲಿ ನಡೆದು ಸತ್ಪುರುಷನಾಗುವ ಹಂಬಲ ಎಲ್ಲರಿಗೂ ಇದ್ದದ್ದೇ. ಸತ್ಪುರುಷನಾಗುದೆಂದರೆ ಒಳ್ಳೆಯ ಮನಸ್ಥಿತಿಯನ್ನು ಹೊಂದುವುದೇ ಆಗಿದೆ. ದೇಹವನ್ನು ಆಳುವ ಮನಸ್ಸು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆ ವ್ಯಕ್ತಿತ್ವ ಬೆಳೆದು ಬಂದ ರೀತಿಯಲ್ಲಿ ತನ್ನ
ಬಯಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗುತ್ತದೆ. ಒಳ್ಳೆಯ ವ್ಯಕ್ತಿತ್ವ ಉತ್ತಮ ಮಾರ್ಗವನ್ನೂ ಸಂಸ್ಕಾರರಹಿತವಾದ ವ್ಯಕ್ತಿತ್ವ ದುರ್ಮಾರ್ಗವನ್ನೂ ಅನುಸರಿಸುವುದು ಸಹಜ. ಇಂತಹ ನಡೆಗಳೇ ನಾವು ಸತ್ಪುರುಷರಾಗುವ ಲಕ್ಷಣವನ್ನು ಹೇಳುತ್ತವೆ. ಯಾರು ಸತ್ಪುರುಷರು ಎಂಬುದಕ್ಕೆ ನೀತಿಶತಕ
ಹೀಗೊಂದು ಶ್ಲೋಕದಲ್ಲಿ ಅವರ ಲಕ್ಷಣವನ್ನು ಹೇಳಿದೆ.

ಏತೇ ಸತ್ಪುರುಷಾಃ ಪರಾರ್ಥಘಟಕಾಃ ಸ್ವರ್ಥಂ ಪರಿತ್ಯಜ್ಯ ಯೇ
ಸಾಮಾನ್ಯಾಸ್ತು ಪರಾರ್ಥಮುದ್ಯಮಭ್ಯತಃ ಸ್ವಾರ್ಥಾವಿರೋಧೇನ ಯೇ |
ತೇಮೀ ಮಾನುಷರಾಕ್ಷಸಾಃ ಪರಹಿತಂ ಸ್ವಾರ್ಥಾಯ ನಿಘ್ನಂತಿ ಯೇ
ಯೇ ನಿಘ್ನಂತಿ ನಿರರ್ಥಕಂ ಪರಹಿತಂ ತೇ ಕೇ ನ ಜಾನೀಮಹೇ ||

“ಯಾರು ಸ್ವಾರ್ಥವನ್ನು ಬಿಟ್ಟು ಪರರ ಪ್ರಯೋಜನವನ್ನು ಸಾಧಿಸುತ್ತಾರೋ ಅವರು ಸತ್ಪುರುಷರು. ಯಾರು ಸ್ವಾರ್ಥಕ್ಕೆ ತೊಂದರೆ ಬರದಂತೆ ಪರಾರ್ಥವನ್ನು ಸಾಧಿಸುತ್ತಾರೋ ಅವರು ಸಾಮಾನ್ಯರು. ಯಾರು ಸ್ವಾರ್ಥಕೋಸ್ಕರ ಪರರ ಹಿತವನ್ನು ಹಾಳು ಮಾಡುತ್ತಾರೋ ಅವರು ಮನುಷರಾಕ್ಷಸರು. ಯಾರು ನಿರರ್ಥಕವಾಗಿ ಪರರ ಹಿತವನ್ನು ಹಾಳು ಮಾಡುವರೋ ಅವರನ್ನು ಏನೆಂದು ಕರೆಯಬೇಕೋ
ಗೊತ್ತಿಲ್ಲ” ಎನ್ನುತ್ತದೆ ನೀತಿಶತಕ.

ಅರ್ಥವಿಷ್ಟೆ, ಸ್ವಾರ್ಥವನ್ನು ಮೊದಲು ಬಿಡಬೇಕು ಮತ್ತು ಪರಹಿತವೇ ತಮ್ಮ ಹಿತವೆಂದು ತಮ್ಮನ್ನು ತೊಡಗಸಿಕೊಳ್ಳಬೇಕು. ಆಗ ಸತ್ಪುರುಷನಾಗಲು ಸಾಧ್ಯ. ಇದು ಕಷ್ಟಸಾಧ್ಯ. ಒಬ್ಬ ವ್ಯಕ್ತಿ

ಸ್ವಾರ್ಥವನ್ನು ಬಿಡುತ್ತಾನೆ ಎಂದರೆ ಆತ ಯೋಗಿಯಾಗಬೇಕು. ತ್ಯಾಗವನ್ನು ಪ್ರೀತಿಸಬೇಕು. ಈ ತ್ಯಾಗವೇ ಪರರ ಹಿತದ ಮೊದಲ ಹೆಜ್ಜೆ. ಪರರ ಹಿತವೇ ಆತನ ಪರಮ ಸುಖವಾಗಬೇಕು. ಸ್ವಾರ್ಥದ ಬೇರು ಮನದೊಳಗೆ ಹರಡಿ, ಹೆಮ್ಮರವಾಗಿ ಇಡೀ ಬದುಕನ್ನು ಆವರಿಸಿಕೊಂಡರೆ ಆತ
ಮನುಷ್ಯರಕ್ಕಸನಾಗುತ್ತಾನೆ. ಮನೋ ನಿಯಂತ್ರಣ ಇದಕ್ಕೆ ಸುಲಭದಾರಿ. ಒಂದು ಸತ್ಯವಾದ, ಸಂಸ್ಕಾರಯುತವಾದ, ಪರಹಿತವಾದ ಬದುಕನ್ನು ನಡೆಸುವ ರೀತಿಯೇ ನಮ್ಮನ್ನು ಸತ್ಪುರುಷರನ್ನಾಗಿಸುತ್ತದೆ.

ಭಾಸ್ವ.

LEAVE A REPLY

Please enter your comment!
Please enter your name here