ಕೆಮ್ಮಾಯಿ : ಇಲ್ಲಿನ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ 7ರಂದು ಪ್ರತಿಷ್ಠಾ ವಾರ್ಷಿಕ ಉತ್ಸವ ನಡೆ ಯಲಿದ್ದು, ರವಿವಾರ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು.
ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ, ನಾಗದೇವರು, ಶ್ರೀ ರಕ್ತೇಶ್ವರಿ, ಮಹಿ ಷಂದಾಯ, ಪಂಜುರ್ಲಿ, ಗುಳಿಗೆ ದೈವಗಳು ಮತ್ತು ವೃಕ್ಷರಾಜ ಅಶ್ವತ್ಥ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಹಾಗೂ ರಂಗಪೂಜೆ ಮೇ 7ರಂದು ನಡೆಯಲಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ನಿತ್ಯ ಮಹಾಪೂಜೆ, ಶ್ರೀ ಗಣಪತಿ ಹವನ, ಕಲಶಪೂಜೆ, ಅಶ್ವತ್ಥ ಕಲ್ಪೋಕ್ತ ಪೂಜೆ, ಶ್ರೀ ರಕ್ತೇಶ್ವರಿ ಸಹಿತ ಪರಿವಾರ ದೈವಗಳಿಗೆ ತಂಬಿಲ, ಶ್ರೀ ನಾಗದೇವರಿಗೆ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಕಲಶಪೂಜೆ, ಕಲಶಾಭಿಷೇಕ ನಡೆಯಲಿದೆ. ಬಳಿಕ ಕರ್ನಾಟಕ ಶಾಸ್ರೀಯ ಸಂಗೀತ ಜರಗಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನದ ಬಳಿಕ ಭಜನೆ, ರಂಗಪೂಜೆ, ಪ್ರಸಾದ ವಿತರಣೆ, ಧಾರ್ಮಿಕ ಸಭೆ, ಅನ್ನಪ್ರಸಾದ ವಿತರಣೆ, ಭರತನಾಟ್ಯ, ಯಕ್ಷಗಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರವಿವಾರ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಬೆಳಿಗ್ಗೆ ನಿತ್ಯ ಮಹಾಪೂಜೆ ಬಳಿಕ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಮೈದಾನದಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ಹೊರೆಕಾಣಿಕೆ ಮೆರವಣಿಗೆ ಹೊರಟಿತು. ಮೆರವಣಿಗೆಗೆ ಉಪ್ಪಿನಂಗಡಿಯ ಕಂಗ್ವೆ ವಿಶ್ವನಾಥ ಶೆಟ್ಟಿ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ. ರಾಧಾ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು. ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.