ಮೂಡಿಗೆರೆ: ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಭಾನುವಾರ ಲೋಕಕಲ್ಯಾಣಾರ್ಥವಾಗಿ ಮಹಾಚಂಡಿಕಾ ಹೋಮ ನಡೆಯಿತು. ಬೆಳಿಗ್ಗೆ 6.30ಕ್ಕೆ ಆರಂಭಗೊಂಡ ಧಾರ್ಮಿಕ ವಿಧಿವಿಧಾನಗಳಲ್ಲಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು. ಇದೇ ಸಂದರ್ಭದಲ್ಲಿ ಮಹಾಚಂಡಿಕಾ ಹೋಮ ನಡೆಯಿತು. ಮದ್ಯಾಹ್ನ 12.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸ್ಥಳಿಯರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಮಾತನಾಡಿದ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಶಿ, ನಡೆಸಿದ ಈ ಧಾರ್ಮಿಕ ಕಾರ್ಯದಿಂದ ಮನುಷ್ಯನಲ್ಲಿರುವ ಕೆಟ್ಟ ಹವ್ಯಾಸ, ಕೆಟ್ಟ ಚಿಂತನೆಗಳು ನಾಶವಾಗಿ ಧನಾತ್ಮಕ ಚಿಂತನೆಗಳು ಬೆಳೆಯುತ್ತವೆ. ಜ್ಞಾನ, ಉತ್ತಮ ಸಂಸ್ಕಾರ, ಉತ್ತಮ ಸೌಹಾರ್ದತೆಯಿಂದ ಧರ್ಮ ಪ್ರವೃತ್ತಕವಾಗುವಂತೆ ರೀತಿಯಲ್ಲಿ ಮನುಷ್ಯ ತನ್ನ ಬದುಕನ್ನು ಅತ್ಯಂತ ಪ್ರೀತಿಸುವಂತ ಭಾಗ್ಯಕ್ಕೆ ಈ ಚಂಡಿಕಾ ಹೋಮ ಅದಕ್ಕೆ ಪೂರಕ ಮತ್ತು ಪ್ರೇರಕ ಎಂದು ಹೇಳಿದರು.
ಅದರ ಜೊತೆಯಲ್ಲಿ ಯಜ್ಞ ಯಾಗಾದಿಗಳನ್ನು ಮಾಡುವ ಮುಖಾಂತರವಾಗಿ ಪ್ರಕೃತಿ ಸಂರಕ್ಷಣೆಯಾಗುತ್ತದೆ ಎಂದು ಹಿಂದು ಸನಾತನ ಧರ್ಮ ಹೇಳುತ್ತದೆ. ಆ ಪ್ರಕಾರ ನಡೆಸಿರುವಂತ ಈ ಯಜ್ಞ ಪ್ರಕೃತಿ ಮಾತೆ ಸಂತುಷ್ಠಳಾಗಿ ಎಲ್ಲಾ ಕಡೆ ಸುವೃಷ್ಟಿಯನ್ನು ಅನುಗ್ರಹಿಸಲಿ. ಶಾಂತಿ ನೆಮ್ಮದಿ ಸೌಹಾರ್ದತೆಯಿಂದ ನೆಮ್ಮದಿಯ ಬದುಕು ಪ್ರಾಪ್ತವಾಗಲಿ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಎಲ್.ಆರ್.ವಿಜಯರಂಗ ಬೆಂಗಳೂರು ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಸಂಜೆ ಕಲಾಶ್ರೀ ಬಾಲಕೀಯರ ಯಕ್ಷಗಾನ ಮೇಳ ಚೆರ್ಕಾಡಿ ಉಡುಪಿ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.