ಪುಷ್ಕರ ಅತ್ಯಂತ ಪ್ರಾಚೀನ ಪಟ್ಟಣಗಳಲ್ಲಿ ಒಂದು. ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದಿನಿಂದಲೂ ಇದೊಂದು ಯಾತ್ರಾ ಸ್ಥಳ. ಇಲ್ಲಿನ ಲಿಖಿತ ಚರಿತ್ರೆ ಸುಮಾರು ಕ್ರಿ.ಸ್ತ ಪೂರ್ವ 500ರ ಕಾಲದಿಂದ ಆರಂಭವಾಗುತ್ತದೆ.
ಪುರಾಣಗಳಲ್ಲಿ ‘ತೀರ್ಥರಾಜ’ ಎಂಬ ಖ್ಯಾತಿ ಪಡೆದಿರುವ ಕ್ಷೇತ್ರ ಇದು. ಆದಿ ಕಾಲದಿಂದಲೂ ಇಲ್ಲಿ ಧಾರ್ಮಿಕ ಆಚರಣೆಗಳು ಅನೂಚಾನವಾಗಿ ನಡೆಯುತ್ತಿದ್ದವು. ಯಾತ್ರಿಗಳು ಪುಷ್ಕರದ ಪವಿತ್ರ ಸ್ನಾನ ಮಾಡಲು ಮತ್ತು ಬ್ರಹ್ಮದೇವನ ದರ್ಶನ ಪಡೆಯಲು ಸಾವಿರಾರು ವರ್ಷಗಳಿಂದ ಬರುತ್ತಿದ್ದರು.
ಆದರೆ ಇಲ್ಲಿ ಒಂಟೆಗಳ ವ್ಯಾಪಾರ ಆರಂಭಿಸಿದ್ದು ಬ್ರಿಟಿಷರು!
1900ರ ಕಾಲದಲ್ಲಿ ಕಾರ್ತಿಕ ಮಾಸದ ಪುಷ್ಕರ ಮೇಳದ ವೇಳೆಗೆ ಒಂದು ಲಕ್ಕಕ್ಕೂ ಹೆಚ್ಚು ಯಾತ್ರಿಗಳು ಇಲ್ಲಿಗೆ ಬರುತ್ತಾರೆ ಎಂದು ಆಗಿನ ಗಜೆಟ್ ಗಳು ನಮೂದಿಸಿದ್ದವು. ಆ ಕಾಲದಲ್ಲಿ ಪುಷ್ಕರ ರಜಪೂತ ಏಜೆನ್ಸಿಯ ಭಾಗವಾಗಿತ್ತು. ಪಟ್ಟಣದ ಜನಸಂಖ್ಯೆ ಆಗ ಕೇವಲ 3800. ಕಾರ್ತಿಕ ಯಾತ್ರೆಯ ವೇಳೆ ಪಟ್ಟಣದಲ್ಲಿ ಕಾಲಿರಿಸಲು ಜಾಗವಿಲ್ಲದಷ್ಟು ಯಾತ್ರಿಗಳು.
ಈ ಯಾತ್ರಿಗಳು ಸಂದಣಿಯ ಲಾಭ ಪಡೆಯಲು, ಪುಷ್ಕರದಲ್ಲಿ ನಡೆಯುವ ವಾರ್ಷಿಕ ಆಚರಣೆಗಳ ವೇಳೆ ತೆರಿಗೆಯ ಆದಾಯ ಗಳಿಸುವ ಮಾಸ್ಟರ್ ಪ್ಲಾನ್ ತಯಾರಿಸಿದ್ದ ಬ್ರಿಟಿಷ್ ಅಧಿಕಾರಿಗಳು ಪುಷ್ಕರ ಪಟ್ಟಣದ ಹೊರಗಿನ ವಿಶಾಲ ಮರುಭೂವಿಯಲ್ಲಿ ಜಾನುವಾರು ವ್ಯಾಪಾರದ ಜಾತ್ರೆ ಆರಂಭಿಸಿದ್ದರು. ಹಿಂದೂ ಧರ್ಮಿಯರ ಧಾರ್ಮಿಕ ಯಾತ್ರೆ ಒಂಟೆಗಳ ಜಾತ್ರೆಯಾಗಿ ಬೆಳೆದಿದ್ದು ಹೀಗೆ!
ಜಾತ್ರೆಯ ಗಮ್ಮತ್ತು
ಕಾರ್ತಿಕ ಮಾಸದ ಪುಷ್ಕರ ಯಾತ್ರೆಯ ಜೊತೆಗೇ ಪಕ್ಕದ ಥಾರ್ ಮರುಭೂಮಿಯಲ್ಲಿ ನಡೆಯುವ ಮೇಳ ಭಾರತದಲ್ಲಿ ಅಲ್ಲ, ಜಗತ್ತಿನಲ್ಲೇ ಅತಿ ದೊಡ್ಡ ಜಾನುವಾರು ಮತ್ತು ಒಂಟೆಗಳ ಜಾತ್ರೆ ಎಂದು ಸುಪ್ರಸಿದ್ಧವಾಗಿದೆ.
ರಾಜಸ್ತಾನದ ಹಳ್ಳಿಗರಿಗಾಗಿ ಒಂಟೆ ವ್ಯಾಪಾರ ಮತ್ತು ಮನೋರಂಜನೆಗಾಗಿ ರೂಪಿಸಿದ್ದ ಈ ಮೇಳ ಇಂದು ಜಗತ್ತಿನ ಅತ್ಯದ್ಭುತ ಉತ್ಸವಗಳಲ್ಲಿ ಒಂದಾಗಿ ಹೆಸರುವಾಸಿಯಾಗಿದೆ. ಈ ಮೇಳದಲ್ಲಿ ಭಾಗವಹಿಸಲು ವಿದೇಶಿಯರೂ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬಂದಿಳಿಯುತ್ತಾರೆ.
ಪ್ರತಿವರ್ಷ ಐವತ್ತು ಸಾವಿರಕ್ಕೂ ಹೆಚ್ಚು ಒಂಟೆಗಳು, ಮೂರು ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಭಾಗವಹಿಸುವ ವರ್ಣರಂಜಿತ ಮೇಳ ಇದು. ಸ್ಥಳೀಯರ ನಂಬಿಕೆಯಂತೆ ಮುಕ್ಕೋಟಿ ದೇವ ದೇವತೆಗಳು ಈ ಹಬ್ಬದ ಸಂಭ್ರಮ ನೋಡಲು ಆಗಮಿಸುತ್ತಾರೆ.
ಐದು ದಿನಗಳ ಮೇಳದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಒಂಟೆಗಳು, ಅಸಂಖ್ಯ ಆಕಳುಗಳು ಮತ್ತಿತರ ಜಾನುವಾರುಗಳು ಇಲ್ಲಿ ಒಂಟೆ ಮತ್ತು ಜಾನುವಾರುಗಳನ್ನು ಮಾರಲು ದೂರದೂರದ ಊರುಗಳಿಂದ ಜನರು ಬರುತ್ತಾರೆ.
ಇಲ್ಲಿ ಮಾರಾಟವಾಗುವ ಒಂಟೆಗಳ ಸೊಬಗೇ ಬೇರೆ. ಇವುಗಳನ್ನು ಚೆನ್ನಾಗಿ ತೊಳೆದು, ಸ್ವಚ್ಛ ಮಾಡಿ, ಬಣ್ಣದ ಚಿತ್ತಾರಗಳಿಂದ ಅಲಂಕರಿಸಿ, ಆಭರಣಗಳನ್ನು ತೊಡಿಸುತ್ತಾರೆ. ಈ ಅಲಂಕಾರಕ್ಕೆ ಹಲವಾರು ಗಂಟೆಗಳೇ ಹಿಡಿಯುತ್ತವೆ.
ಜಾತ್ರೆಗೆ ಒಂಟೆಗಳನ್ನು ತಯಾರಿಸುವುದೇ ಒಂದು ಗಮ್ಮತ್ತು. ಒಂಟೆಗಳು ಬಾಯಿ ಆಡಿಸುತ್ತ ತಮಗೆ ಯಾವುದೂ ಸಂಬಂಧ ಇಲ್ಲವೆಂಬಂತೆ ಇರುತ್ತವೆ. ಅವುಗಳಿಗೆ ನೀರು ಕುಡಿಯಲು ಕೂಡ ಒತ್ತಾಯಿಸಬೇಕಾಗುತ್ತದೆ. ಒಂಟೆ ಮಾಲೀಕರು ಅವುಗಳನ್ನು ತಟ್ಟಿ, ತಳ್ಳಿ,ಬಾಯಿಂದ ವಿಚಿತ್ರ ಶಬ್ದ ಮಾಡುತ್ತ ಅವುಗಳನ್ನು ಹೇಗಾದರೂ ಸ್ನಾನಕ್ಕೆ ಒಪ್ಪಿಸುತ್ತಾರೆ. ಮೈ ತೊಳೆದು, ಹೆಚ್ಚಿನ ರೋಮ ಟ್ರೀಮ್ ಮಾಡಿ, ಮಾಲೀಶು ಮಾಡುತ್ತಾರೆ. ಇಷ್ಟೆಲ್ಲ ಪ್ರಯತ್ನದ ಬಳಿಕ ಒಂಟೆಗಳ ಮೈ ಲಕಲಕ ಹೊಳೆಯುತ್ತದೆ.
ಸ್ನಾನದ ಬಳಿಕ ಅಲಂಕಾರ. ಒಂಟೆಗಳ ಕುತ್ತಿಗೆಗೆ ಬೆಳ್ಳಿಯ ಆಭರಣಗಳು ಮತ್ತು ಮಣಿಗಳ ಸರಗಳನ್ನು ತೊಡಿಸುತ್ತಾರೆ. ಮೈಮೇಲೆ ಕನ್ನಡಿ ಚೂರುಗಳನ್ನು ಕೂರಿಸಿ, ಕಸೂತಿಯಿಂದ ಹೊಲಿದ ರಂಗುರಂಗಿನ ಬಟ್ಟೆಗಳ ಗಂಟೆಗಳು ಮತ್ತು ಬಳೆಗಳನ್ನು ತೊಡಿಸುತ್ತಾರೆ.
ಒಂಟೆಗಳಿಗೆ ಶಾಸ್ತ್ರೋಕ್ತವಾಗಿ ಮೂಗುತಿ ತೊಡಿಸುವುದು ಇಲ್ಲಿನ ಗಮ್ಮತ್ತುಗಳಲ್ಲಿ ಒಂದು. ಮೂಗುತಿ ತೊಟ್ಟಾಗಲೇ ಒಂಟೆಗೆ ಕಳೆ ಬರುವುದು ಎನ್ನುತ್ತಾರೆ.
ಅಲಂಕಾರದ ಬಳಿಕ ಒಂಟೆಗಳನ್ನು ದೇವಾಲಯಗಳ ದರ್ಶನಕ್ಕೆ ಒಯ್ಯುತ್ತಾರೆ. ಪುಷ್ಕರ ಮೇಳದ ವೇಳೆ ಎಲ್ಲ ದೇವಾಲಯಗಳ ಹೊರಗೂ ಅಲಂಕೃತ ಒಂಟೆಗಳು ನರ್ತಿಸುವುದನ್ನು ಕಾಣಬಹುದು.
ಪುಷ್ಕರ ಮೇಳದಲ್ಲಿ ಒಂಟೆಗಳ ಮಾರಾಟ ಮಾತ್ರವೇ ಅಲ್ಲ, ಒಂಟೆಗಳ ನಾಟ್ಯ, ಸೌಂದರ್ಯದ ಸ್ಪರ್ಧೆಗಳೂ ನಡೆಯುತ್ತವೆ. ವಿದೇಶಿ ಪ್ರವಾಸಿಗಳಿಗೆ ಇದರಷ್ಟು ಗಮ್ಮತ್ತು ಬೇರೋಂದಿಲ್ಲ.
ಒಂಟೆಗಳ ಜೊತೆಗೆ ಕುದುರೆ, ಆಕಳು ಮತ್ತಿತರ ಜಾನುವಾರುಗಳ ಮಾರಾಟವೂ ಈ ಮೇಳದಲ್ಲಿ ನಡೆಯುತ್ತದೆ. ಕುದುರೆಗಳ ನಾಟ್ಯ ಸ್ಪರ್ಧೆ, ಆಕಳುಗಳ ಸೌಂದರ್ಯದ ಸ್ಪರ್ಧೆ, ಮರುಭೂಮಿಯ ಡೇರೆಗಳ ನಡುವೆ ಬೆಂಕಿಯ ಬೆಳಕಲ್ಲಿ ರಾಜಸ್ತಾನದ ಅಲೆಮಾರಿ ಕಲಾವಿದರು ಭವಾಯಿ, ಚಾರಿ, ಘೂಮರ್ ನೃತ್ಯಗಳು, ದ್ರೌಪದಿ ಸಂಗೀತ….. ಹೀಗೆ ನಿರಂತರ ಮನೋರಂಜನೆಯ ನಡೆಯುತ್ತಿರುವ ಸಂಭ್ರಮ. ಹಗಲಿರುಳೆನ್ನದೆ ನಡೆಯುವ ಸಾಂಸ್ಕೃತಿಕ ಮೇಳ ಇದು. ಪುಷ್ಕರದ ಸುತ್ತ ನಾಲ್ಕೂರು ದೇವಾಲಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಪೂಜೆ ಪುನಸ್ಕಾರಗಳು ನಡುವೆಯೇ ಕುದುರೆ, ಒಂಟೆ, ಕತ್ತೆಗಳ ರೇಸ್. ಪ್ರಾಣಿಗಳ ಸೌಂದರ್ಯದ ಸ್ಪರ್ಧೆಗಳು, ಜಾನಪದ ನೃತ್ಯ ಸಂಗೀತ, ಮಟ್ಕಾ ಫೋಡ್, ವಧುಗಳ ಸ್ಪರ್ಧೆ, ಉದ್ದದ ಮೀಸೆಗಳ ಸ್ಪರ್ಧೆಯಂತಹ ವಿಚಿತ್ರ ಸ್ಪರ್ಧೆಗಳು, ಗೊಂಬೆಯಾಟ, ಡೊಂಬರಾಟ….
ಮೇಳದ ಆರಂಭದ ದಿನಗಳಲ್ಲಿ ಇಲ್ಲಿ ಒಂಟೆ, ಆಕಳುಗಳ ವ್ಯಾಪಾರವೇ ಪ್ರಧಾನವಾಗಿರುತ್ತದೆ. ಕಾರ್ತಿಕ ಪೌರ್ಣಮಿಯ ಹತ್ತಿರ ಬಂದಂತೆ ಧಾರ್ಮಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಮೇಳಗಳ ಭರಾಟೆ ಹೆಚ್ಚುತ್ತದೆ.
ಇಲ್ಲಿನ ಮೋಜಿಗೆ ಟಿಕೇಟು ಬೇಡ. ಮರುಭೂಮಿಯ ನಡುವೆ ಸಂಜೆಯ ತಂಪಿನಲ್ಲಿ ನಡೆಯುವ ಹಾರ್ಮನಿ ಮ್ಯಾರಥಾನ್ ನಲ್ಲಿ ಯಾರೂ ಬೇಕಾದರೂ ಓಡಬಹುದು. ಲಂಗ್ಡೀ ಟಾಂಗ್ (ಕುಂಟು ಕಾಲಿನ ಓಟ) ಕಬ್ಬಡ್ಡಿ ಪಂದ್ಯಗಳ ಮೋಜು ನೋಡಬಹುದು, ನೃತ್ಯ, ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು, ತೆರೆದ ವಿಶಾಲ ಬಯಲಿನಲ್ಲಿ ಫುಟ್ಬಾಲ್, ವಾಲಿಬಾಲ್, ರಸ್ಸಾ ಕಾಶಿ ಪಂದ್ಯಗಳನ್ನು ಆಡಬಹುದು.
ಸಾಹಸಪ್ರಿಯರಿಗಾಗಿ ಇಲ್ಲಿ ಮರುಭೂಮಿಯ ಬೈಕ್ ರೇಸಿಂಗ್, ಪ್ಯಾರಾಮೋಟರ್ಸ್ ಮತ್ತು ಕುದುರೆ ಮ್ಯಾರಾಥಾನ್ ಗಳೂ ಇವೆ.
ಇತ್ತೀಚಿನ ವರ್ಷಗಳಲ್ಲಿ ಪುಷ್ಕರ ಜಾತ್ರೆಯ ವೇಳೆ ಇಲ್ಲಿ ಒಂದು ಜನಪ್ರಿಯ ಕ್ರಿಕೆಟ್ ಪಂದ್ಯ ಕೂಡ ಆರಂಭವಾಗಿದೆ. ಸ್ಥಳೀಯ ಕ್ರಿಕೆಟ್ ತಂಡ ಮತ್ತು ವಿದೇಶೀ ಯಾತ್ರಿಗಳ ಕ್ರಿಕೆಟ್ ತಂಡಗಳ ನಡುವಿನ ಪಂದ್ಯ ಇದು.
ಇಲ್ಲಿಗೆ ಬರುವ ಬಹುತೇಕ ಯಾತ್ರಿಗಳು ರಾಜಸ್ತಾನದ ಹಳ್ಳಿ ಹಳ್ಳಿಗಳಿಂದ ಬಂದವರು. ಎಳೆ ಮಕ್ಕಳನ್ನೂ ಸೇರಿಸಿ ಸಮೇತ ಬರುವ ಇವರಿಗೆ ಈ ಬಣ್ಣದ ಜಾತ್ರೆ ಸ್ವರ್ಗಲೋಕಕ್ಕೆ ಸಮಾನ. ಜಾತ್ರೆಯ ನಡುವೆ ಡೊಡ್ಡ ಟೀವಿಗಳಲ್ಲಿ ತೋರಿಸುವ ರಾಮಾಯಣದ, ಮಹಾಭಾರತದ ಚಲನಚಿತ್ರಗಳನ್ನು ನೊಡುತ್ತ ಜಗತ್ತನ್ನೇ ಮರೆಯುತ್ತಾರೆ ಇವರು.
ಪುಷ್ಕರದ ಮರುಭೂಮಿಯ ಮಾರುಕಟ್ಟೆಗೆ ಹಗಲು ಇರುಳು ಎಂದಿಲ್ಲ. ಆದರೆ ಇಲ್ಲಿನ ನಿಜವಾದ ಸಂಭ್ರಮ ಆರಂಭವಾಗುವುದು ಸೂರ್ಯಾಸ್ತಾದ ಬಳಿಕ. ಸೂರ್ಯ ಮುಳುಗುತ್ತಲೇ ಪುಷ್ಕರ ಜೀವಂತವಾಗುತ್ತದೆ. ನಿಯೋನ್ ಲೈಟ್, ಟ್ಯೂಬ್ ಲೈಟ್ ಗಳ ಬೆಳಕಿನಲ್ಲಿ ಅಂಗಡಿಗಳು ಮಾಲೀಕರು ತಮ್ಮ ಸರಕುಗಳನ್ನು ಬಿಚ್ಚಿಕೊಳ್ಳುತ್ತಾರೆ. ಭಾರತದ ಸರ್ವಾತಿ ದೊಡ್ಡ ಕರಕುಶಲ ವಸ್ತುಗಳ ಪ್ರದರ್ಶನ ಈ ಮರುಭೂಮಿಯ ಮಾರುಕಟ್ಟೆಯಲ್ಲಿ ತೆರೆದುಕೊಳ್ಳುತ್ತದೆ.
ಇಲ್ಲಿ ಸಿಗದ ವಸ್ತುಗಳೇ ಇಲ್ಲ. ಖಡ್ಗಗಳು,ಬಿಚ್ಚುಗತ್ತಿಗಳು, ಆಕರ್ಷಕ ವಿಸ್ಯಾಸದ ಬಳೆಗಳು. ಅಡುಗೆ ಮನೆಯ ಸಲಕರಣೆಗಳು, ಬಾಂಧನೀ ಮುಂತಾದ ಅಲಂಕೃತ ಬಟ್ಟೆ ಬರೆಗಳು, ಶೃಂಗಾರ ಸಾಧನೆಗಳು ಗ್ರಾಹಕರನ್ನು ಆಕರ್ಷಿಸುತ್ತವೆ. ಜೋಧಪುರ ಮತ್ತು ಅಜಮೇರ್ ನ ಬಟ್ಟೆ ಬರೆಗಳು, ಜೈಪುರದ ಹಿತ್ತಾಳೆಯ ಕರಕುಶಲ ವಸ್ತುಗಳು, ನಾಗೋರ್ ನ ಮಣಿಸರಗಳು, ಇನ್ನೂ ಏನೇನೋ ಅದ್ಭುತಗಳು ಜನರ ಕಣ್ಣು ಕುಕ್ಕುತ್ತವೆ.
ಎಲ್ಲಕ್ಕಿಂತ ಹೆಚ್ಚಿನ ಗ್ರಾಹಕರ ನೂಕುನುಗ್ಗಲು ಇರುವುದು ಒಂಟೆಗಳ ಶೃಂಗಾರ ಸಾಧನಗಳ ಅಂಗಡಿಗಳಲ್ಲಿ. ಬೆಳ್ಳಿಯ ಘಂಟೆಗಳು, ಅಲಂಕೃತ ಜೀನು, ಲಗಾಮುಗಳು, ಸುಂದರ ಕಾಲ್ಗೆಜ್ಜೆಗಳು, ಕಸೂತಿ ಬಟ್ಟೆಗಳು ಭರದಿಂದ ಮಾರಾಟವಾಗುತ್ತವೆ.
ಈ ಅಂಗಡಿಗಳ ವ್ಯಾಪಾರದ ನಡುವೆಯೇ ಪ್ರವಾಸಿಗಳನ್ನು ಆಕರ್ಷಿಸುವ ತಿರುಗು ಬಂಡಿಗಳು, ದೈತ್ಯ ಜೋಕಾಲಿಗಳು, ಆಟಿಕೆ ಕುದುರೆಗಳ ಸಂಭ್ರಮ. ತೂಕದ ಜೊತೆಗೆ ಭವಿಷ್ಯ ಹೇಳುವ ಯಂತ್ರಗಳ ಮುಂದೆ ಹಳ್ಳಿ ಹೆಂಗಸರದ್ದೇ ಕ್ಯೂ.
ಬೃಹತ್ ಬಿಸಿಗಾಳಿ ಬಲೂನುಗಳು ಪುಷ್ಕರ ಮೇಳದ ಇನ್ನೊಂದು ಆಕರ್ಷಣೆ. ಸೂರ್ಯೋದಯದ ಮತ್ತು ಸೂರ್ಯಾಸ್ತದ ವೇಳೇ ಇವುಗಳನ್ನು ಆಕಾಶಕ್ಕೆ ಏರಿಸಲಾಗುತ್ತದೆ. ಪ್ರವಾಸಿಗರು ಈ ಬಿಸಿಗಾಳಿ ಬಲೂನುಗಳಲ್ಲಿ ಆಕಾಶಕ್ಕೇರಿ, ಪುಷ್ಕರ ಜಾತ್ರೆಯ ವಿಹಂಗಮ ದೃಶ್ಯಗಳನ್ನು ನೋಡಬಹುದು.
ರಾಜಸ್ತಾನದ ಜನಜೀವನವನ್ನು ಹತ್ತಿರದಿಂದ ನೋಡಬಯಸುವ ಪ್ರವಾಸಿಗಳಿಗಾಗಿ ಇಲ್ಲಿ ಒಂಟೆ ಸಫಾರಿಗಳಿವೆ. ವಿದೇಶೀ ಪ್ರವಾಸಿಗಳಿಗೆ ಒಂಟೆಗಳ ಸವಾರಿ ಮಾಡುತ್ತ ಮರುಭೂಮಿಯ ಸುತ್ತ ತಿರುಗುವುದೇ ಒಂದು ಮೋಜು. ಅರಾವಳಿ ಬೆಟ್ಟಗಳ ವಿಹಂಗಮ ದೃಶ್ಯಗಳನ್ನು ನೋಡಬಹುದು.
ರಾಜಸ್ತಾನದ ಜನಜೀವನವನ್ನು ಹತ್ತಿರದಿಂದ ನೋಡಬಯಸುವ ಪ್ರವಾಸಿಗಳಿಗಾಗಿ ಇಲ್ಲಿ ಒಂಟೆ ಸಫಾರಿಗಳಿವೆ. ವಿದೇಶೀ ಪ್ರವಾಸಿಗಳಿಗೆ ಒಂಟೆಗಳ ಸವಾರಿ ಮಾಡುತ್ತ ಮರುಭೂಮಿಯ ಸುತ್ತ ತಿರುಗುವುದೇ ಒಂದು ಮೋಜು. ಅರಾವಳಿ ಬೆಟ್ಟಗಳ ವಿಹಂಗಮ ದೃಶ್ಯಗಳನ್ನು ಇಲ್ಲಿ ನೋಡಬಹುದು. ಈ ಸಫಾರಿಗಳಲ್ಲಿ ಯಾತ್ರಿ ತಂಡಗಳು ಒಂಟೆಯ ಮೇಲೇರಿ ಮರುಭೂಮಿಯ ನಡುವಿನ ಹಳ್ಳಿಗಳಿಗೆ ಸಾಗಿ, ಅಲ್ಲಿನ ಮಣ್ಣಿನ ಆಸ್ವಾದ ಸವಿಯುತ್ತಾರೆ, ಅವರ ಜೊತೆಗೆ ಒಂದೆರಡು ದಿನ ಕಳೇಸು ಹಳ್ಳಿ ಜೀವನದ ರುಚಿ ನೋಡುತ್ತಾರೆ.
ಇವೆಲ್ಲ ಆಕರ್ಷಣೆಗಳು ಪುಷ್ಕರ ಮೇಳ ಕೇವಲ ಒಂದು ಧಾರ್ಮಿಕ ಯಾತ್ರೆ, ಒಂಟೆಗಳ ಮಾರಾಟ ಅಥವಾ ಕರಕುಶಲ ವಸ್ತುಗಳ ಪ್ರದರ್ಶನವಾಗಿ ಮಾತ್ರ ಉಳಿಯುವುದಿಲ್ಲ. ಯಾತ್ರಿಗಳ ಪಾಲಿಗೆ ಇದೊಂದು ಅಪೂರ್ವ, ಅವಿಸ್ಮರಣೀಯ ಅನುಭವಾಗುತ್ತದೆ. ಇದಕ್ಕೇ ಹೇಳುತ್ತಾರೆ, ಪುಷ್ಕರ ಮೇಳದಂಥ ಮೇಳ ಜಗತ್ತಿನಲ್ಲೇ ಬೇರೊಂದಿಲ್ಲ!
(ಮುಂದುವರಿಯುವುದು…ಪುಷ್ಕರ ತೀರ್ಥ ಎಂದರೇನು?)