Home ಧಾರ್ಮಿಕ ಸುದ್ದಿ ಇಂದಿನಿಂದ ಐತಿಹಾಸಿಕ ಮಹಾಮಸ್ತಕಾಭಿಷೇಕ

ಇಂದಿನಿಂದ ಐತಿಹಾಸಿಕ ಮಹಾಮಸ್ತಕಾಭಿಷೇಕ

260
0
SHARE

ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕಕ್ಕೆ ಸಂತ ಸಮ್ಮೇಳನದ ಮೂಲಕ ಚಾಲನೆ ದೊರಕಿದ್ದು, ಫೆ. 9ರಂದು ಪೂಜಾ ಹಾಗೂ ಜನಕಲ್ಯಾಣ ಕಾರ್ಯ ಕ್ರಮದ ಮೂಲಕ ಉತ್ಸವ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ. ಈ ಐತಿಹಾಸಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಧರ್ಮಸ್ಥಳವು ಪೂರ್ಣ ರೀತಿಯಲ್ಲಿ ಸಿಂಗಾರ ಗೊಂಡು ಭಕ್ತರ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ.

ಈಗಾಗಲೇ ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣ ಕಂಡುಬಂದಿದ್ದು, ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸತೊಡಗಿ ದ್ದಾರೆ. ರತ್ನಗಿರಿ ಬೆಟ್ಟದಲ್ಲಿ ಭಗವಾನ್‌ ಬಾಹುಬಲಿಯ ಅಟ್ಟಳಿಗೆ ನಿರ್ಮಾಣದ ಕಾರ್ಯವೂ ಪೂರ್ಣಗೊಂಡಿದ್ದು, ಅಭಿಷೇಕದ ವೀಕ್ಷಣೆಗಾಗಿ ಸುಸಜ್ಜಿತ ಗ್ಯಾಲರಿ ಗಳೂ ನಿರ್ಮಾಣಗೊಂಡಿವೆ.

ಮಹಾಮಸ್ತಕಾಭಿಷೇಕವನ್ನು ನಡೆಸಿ ಕೊಡಲಿರುವ ಪೂಜ್ಯ ಮುನಿ ವರ್ಗದವರು ಈಗಾಗಲೇ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಅವರ ಸತ್ಕಾರಕ್ಕೂ ವಿಶೇಷ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಜತೆಗೆ 30ಕ್ಕೂ ಹೆಚ್ಚು ಸಮಿತಿಗಳ ಎರಡು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಮಹಾಮಸ್ತಕಾಭಿಷೇಕದ ಯಶಸ್ಸಿಗಾಗಿ ದುಡಿಯಲಿದ್ದಾರೆ. ಶುಕ್ರವಾರ ಊಟೋಪಚಾರಕ್ಕಾಗಿ ನಿರ್ಮಿಸಲಾದ ಪ್ರತ್ಯೇಕ ಅನ್ನಛತ್ರದಲ್ಲಿ ಸಾವಿರಾರು ಮಂದಿ ಭೋಜನ ಸ್ವೀಕರಿಸಿದ್ದಾರೆ.

ಪ್ರೊಜೆಕ್ಷನ್‌ ಮ್ಯಾಪಿಂಗ್‌

ಮಹಾಮಸ್ತಕಾಭಿಷೇಕದ ವಿಶೇಷ ಕಾರ್ಯ ಕ್ರಮದ ಭಾಗವಾಗಿ ಬಾಹುಬಲಿಯ ಜೀವನ ಚರಿತ್ರೆಯನ್ನು ಸಾರುವ 3ಡಿ ಪ್ರೊಜೆಕ್ಷನ್‌ ಮ್ಯಾಪಿಂಗ್‌ ವಿಶೇಷ ಆಕರ್ಷಣೆಯಾಗಿದೆ. ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ವಿಗ್ರಹದ ಬಳಿಯಲ್ಲಿ ಸೌಂಡ್‌ ಆ್ಯಂಡ್‌ ಲೈಟ್ ಶೋ ಹೆಸರಿನಲ್ಲಿ ಬಾಹುಬಲಿಯ ಜೀವನ ಚಿತ್ರಿತವಾಗಲಿದೆ.

ಪ್ರತಿದಿನ ರಾತ್ರಿ ಬೆಟ್ಟದಲ್ಲಿ ಇದು ಪ್ರದರ್ಶನಗೊಳ್ಳಲಿದ್ದು, ಫೆ. 9ರಂದು ರಾತ್ರಿ 7ಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಚಿತ್ರನಟ ರಮೇಶ್‌ ಅರವಿಂದ್‌ ಅವರು ಶೋ ಮ್ಯಾಪಿಂಗ್‌ ಉದ್ಘಾಟಿಸಲಿದ್ದಾರೆ. ಜತೆಗೆ ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವೆ ಜಯಮಾಲಾ ಉದ್ಘಾಟಿಸಲಿದ್ದು, ಉಜಿರೆ ಎಸ್‌.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅವರು ರೆಂಜಾಳ ಗೋಪಾಲಕೃಷ್ಣ ಶೆಣೈ ಅವರ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ.

ಮಾಧ್ಯಮ ಕೇಂದ್ರದ ವ್ಯವಸ್ಥೆ

ಮಾಧ್ಯಮ ಕೇಂದ್ರದಲ್ಲಿ ಮುದ್ರಣ, ದೃಶ್ಯ, ವೆಬ್‌ ಮಾಧ್ಯಮಗಳಿಗೆ ಅನುಕೂಲ ವಾಗುಂತೆ 50ಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಜೋಡಿಸಿದ್ದು, ಪ್ರಬಲ ಅಂತರ್ಜಾಲ ಸಂಪರ್ಕವನ್ನೂ ನೀಡಲಾಗಿದೆ. ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ| ಭಾಸ್ಕರ ಹೆಗಡೆ ಅವರ ನೇತೃತ್ವದಲ್ಲಿ ಕೇಂದ್ರವನ್ನು ಸಜ್ಜುಗೊಳಿಸಿದ್ದು, ಮಾಧ್ಯಮ ಸಮಿತಿ ಸಹ ಸಂಚಾಲಕ ಪವಿತ್ರಕುಮಾರ್‌ ಜೈನ್‌, ಉಪನ್ಯಾಸಕರಾದ ಸುನಿಲ್‌ ಹೆಗ್ಡೆ, ಡಾ| ಪದ್ಮನಾಭ, ಹಂಪೇಶ್‌ ಅವರು ಸೂಕ್ತ ಮಾರ್ಗದರ್ಶನ ನೀಡಲು ಸಿದ್ದರಾಗಿದ್ದಾರೆ. ಹಾಗೆಯೇ ಕಂಪ್ಯೂಟರ್‌ ತಂತ್ರಜ್ಞರಾದ ಮಾಧವ ಹೊಳ್ಳ, ಆಶ್ರಯ್‌, ಸಾಗರ್‌ ಅವರು ತಾಂತ್ರಿಕ ಸಹಾಯಕರಾಗಿರುತ್ತಾರೆ.

LEAVE A REPLY

Please enter your comment!
Please enter your name here