ಹಿರಿಯಡಕ: ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಎ.16ರಿಂದ 25ರ ತನಕ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸುಮಾರು 1.5 ಲಕ್ಷ ಜನರಿಗೆ ಅನ್ನ ಸಂತರ್ಪಣೆ ನಡೆಯುತ್ತಿದ್ದು 1,500ಕ್ಕೂ ಮಿಕ್ಕಿ ಸ್ವಯಂ ಸೇವಕರನ್ನೊಳಗೊಂಡ ಅಚ್ಚುಕಟ್ಟಿನ ವ್ಯವಸ್ಥೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಶ್ರೀನಿವಾಸ ಅವರ ನೇತೃತ್ವದ 100ಕ್ಕೂ ಮಿಕ್ಕಿ ಬಾಣಸಿಗರ ತಂಡ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಉಪಾಹಾರ, ರಾತ್ರಿ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. 10 ದಿನಗಳಲ್ಲಿ ಬರುವ ಭಕ್ತರಿಗೆ ಅನ್ನಸಂತರ್ಪಣೆಗೆ ವಾರ್ಡ್‌ವಾರು ತಂಡ ರಚಿಸಲಾಗಿದ್ದು ಪ್ರತಿದಿನ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಬ್ರಹ್ಮಕಲಶದ ದಿನ 50 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು ಭಕ್ತರಿಗೆ ತೊಂದರೆಯಾಗದಂತೆ ಸ್ವಯಂ ಸೇವಕರ ತಂಡ ವಿಶೇಷವಾಗಿ ಶ್ರಮಿಸುತ್ತಿದೆ.
ಸ್ವಚ್ಛತೆಗೆ ಗಮನ
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರೂ ಎಲ್ಲೂ ಕಸದ ರಾಶಿ ಕಾಣಸಿಗದಿರುವುದು ಇಲ್ಲಿಯ ಸ್ವಚ್ಛತೆ ಬಗ್ಗೆ ಕಾಳಜಿ ಜನರ ಪ್ರಶಂಸೆಗೆ ಕಾರಣವಾಗಿದೆ.
ದಾಖಲೆ ಹೊರೆಕಾಣಿಕೆ
ಕಳೆದ ಎರಡು ತಿಂಗಳ ಮೊದಲೇ ಗ್ರಾಮಸ್ಥರು ತಮ್ಮ ಜಾಗದಲ್ಲಿ ವಿವಿಧ ತರಕಾರಿಗಳನ್ನು ಬೆಳೆಸಿದ್ದು ಹೊರೆಕಾಣಿಕೆ ಮೂಲಕ ಸುಮಾರು 4 ಬ್ರಹ್ಮಕಲಶಗಳಿಗೆ ಸಾಕಾಗುವಷ್ಟು ದಾಖಲೆಯ ತರಕಾರಿ ಸಮರ್ಪಿತವಾಗಿದೆ.
ವಿಶಾಲ ಅನ್ನಸಂತರ್ಪಣೆ ಚಪ್ಪರ
ನೂಕುನುಗ್ಗಲು ತಡೆಯಲು ಏಕಕಾಲದಲ್ಲಿ 3 ಸಾವಿರ ಮಂದಿ ಕುಳಿತು ಊಟಮಾಡುವ ಟೇಬಲ್ ವ್ಯವಸ್ಥೆ ಹಾಗೂ 6 ಸಾವಿರ ಜನರಿಗಾಗುವಷ್ಟು ಬಫೆ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ದಿನದಲ್ಲಿ ಎರಡು ಹೊತ್ತು ಉಪಹಾರ ನೀಡಲಾಗುತ್ತಿದೆ. ಇಡ್ಲಿ, ಸಜ್ಜಿಗೆ, ಅವಲಕ್ಕಿ, ಕಡ್ಲೆ ಅವಲಕ್ಕಿ , ಶಾವಿಗೆ ಬಾತ್, ಹಲ್ವ ಹಾಗೂ ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯಲ್ಲಿ ಅನ್ನ ಸಾರು, ಸಾಂಬಾರು, ಮೆಣಸ್ಕಾಯಿ, ಪಾಯಸ, 2 ಬಗೆಯ ಸಿಹಿ ತಿಂಡಿ
ವ್ಯವಸ್ಥೆ ಮಾಡಲಾಗಿದೆ.