Home ಧಾರ್ಮಿಕ ಸುದ್ದಿ ಪಲಿಮಾರು ಪರ್ಯಾಯ-ನಿರಂತರ ಭಜನೆ: ರಥಬೀದಿಯಲ್ಲಿ ರಚಿಸಲ್ಪಟ್ಟಿದೆ ‘ಹೈಟೆಕ್‌ ಭಜನ ಕುಟೀರ’

ಪಲಿಮಾರು ಪರ್ಯಾಯ-ನಿರಂತರ ಭಜನೆ: ರಥಬೀದಿಯಲ್ಲಿ ರಚಿಸಲ್ಪಟ್ಟಿದೆ ‘ಹೈಟೆಕ್‌ ಭಜನ ಕುಟೀರ’

1526
0
SHARE

ಉಡುಪಿ: ಪಲಿಮಾರು ಪರ್ಯಾಯ ಪೀಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ವಿನೂತನ ಯೋಜನೆಯಾದ ನಿರಂತರ ಭಜನೆಗೆ ಶ್ರೀಪಾದರ ಸಂಕಲ್ಪದಂತೆ ವರ್ಷದ ಎಲ್ಲ ಋತುಮಾನಗಳಿಗೂ ಹೊಂದಿಕೆಯಾಗಬಲ್ಲ ಅಹೋರಾತ್ರಿ ಭಜನೆ ಸಂಕೀರ್ತನೆ ನಡೆಸಲು ಅನುಕೂಲವಾಗುವಂತೆ ಸುಮಾರು 25 ಲ.ರೂ. ವೆಚ್ಚದ ‘ಹೈಟೆಕ್‌ ಭಜನ ಕುಟೀರ’ ಕೇವಲ ಮೂರೇ ಮೂರು ದಿನಗಳಲ್ಲಿ ರಥಬೀದಿಯಲ್ಲಿ ಮೈದಳೆದು ನಿಂತಿದೆ.

ಶ್ರೀಕೃಷ್ಣಮಠದ ಕನಕ ಗೋಪುರದ ಬಳಿಯಲ್ಲಿ ಅತ್ಯಾಕರ್ಷಕವಾಗಿ ನಿರ್ಮಿಸಲಾದ ಈ ಕುಟೀರವು ಪಲಿಮಾರುಶ್ರೀಗಳ ಶಿಷ್ಯ ವರ್ಗದವರಲ್ಲಿ ಓರ್ವರಾದ ಸಚ್ಚಿದಾನಂದ ರಾವ್‌ ಅವರ ನೇತೃತ್ವದಲ್ಲಿ ಸಿವಿಲ್‌ ಗುತ್ತಿಗೆದಾರ ವೆಂಕಟೇಶ್‌ ಅವರ ಮಾರ್ಗದರ್ಶನದಲ್ಲಿ ಉಡುಪಿ ಕೊಡಂಕೂರಿನಲ್ಲಿ 11 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನುರಿತ 40 ಮಂದಿ ಕೆಲಸಗಾರರಿಂದ ಕೂಡಿದ, ಪ್ರಿ-ಎಂಜಿನಿಯರ್ಡ್ ಬಿಲ್ಡಿಂಗ್‌ ಮಾಡುವ ವ್ಯವಸ್ಥೆ ಹೊಂದಿರುವ, ಈಗಾಗಲೇ 5 ಮಠಗಳ ವಿವಿಧ ಫ್ಯಾಬ್ರಿಕೇಶನ್‌ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರೈಸಿದ ಸ್ಕ್ಯೂಬ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿಯ ರಾಮಚಂದ್ರ ಅವರು ನಿರ್ಮಾಣದ ಹೊಣೆ ಹೊತ್ತು ವ್ಯವಸ್ಥಿತವಾಗಿ ಮೂಡಿಬರಲು ಕಾರಣೀಭೂತರಾಗಿದ್ದಾರೆ.

ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಈ ಭಜನ ಕುಟೀರದಲ್ಲಿ ಸುಮಾರು 30 ಮಂದಿ ಕುಳಿತು ಭಜನೆ ಹಾಡಲು ಸ್ಥಳಾವಕಾಶ ಹೊಂದಿರುವುದಲ್ಲದೆ ಮುಂದಿನ ಸರತಿಗೆ ಕಾಯುವ ತಂಡಕ್ಕೂ ಸ್ಥಳಾವಕಾಶ ಕಲ್ಪಿಸಲಾಗಿದೆ. ಮಳೆಗಾಲದಲ್ಲಿ ಗಾಳಿ ಮಳೆಯಿಂದ ರಕ್ಷಣೆ ದೊರೆಯಬೇಕೆನ್ನುವ ನೆಲೆಯಲ್ಲಿ ಸುತ್ತಲೂ ಗ್ಲಾಸ್‌ಡೋರ್‌ ಅಳವಡಿಸಲಾಗಿದೆ. ಉಳಿದ ದಿನಗಳಲ್ಲಿ ಭಜನೆ ನಡೆಸಲು ಈ ಬಾಗಿಲನ್ನು ತೆರೆದು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಭಜನ ಕುಟೀರದಲ್ಲಿ ಧ್ವನಿವರ್ಧಕ, ವಿದ್ಯುದ್ದೀಪಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಕುಟೀರದ ಒಳಭಾಗದಲ್ಲಿ ಪುರಂದರದಾಸರು, ಕನಕದಾಸರು, ಶ್ರೀವಾದಿರಾಜರು ಸೇರಿದಂತೆ ದಾಸವರೇಣ್ಯರ ಆಕರ್ಷಕ ಚಿತ್ತಾರಗಳು, ಮಂದಿರದ ನಾಲ್ಕು ದಿಕ್ಕುಗಳಲ್ಲಿ ಶ್ರೀಕೃಷ್ಣ, ವೆಂಕಟೇಶ್ವರ ಸ್ವಾಮಿ, ಶ್ರೀರಾಮ, ಲಕ್ಷ್ಮಣ, ಸೀತಾಮಾತೆಯರ ಚಿತ್ರಗಳನ್ನು ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here