ಕೋಟ : ಪ್ರಾದೇಶಿಕತೆಗೆ ಅನುಗುಣವಾಗಿ ಹಬ್ಬ ಹರಿದಿನಗಳು ವಿಭಿನ್ನವಾಗಿ ಆಚರಿಸಲ್ಪಡುತ್ತವೆ. ಹಾಗೆಯೇ ಶಿವರಾತ್ರಿ ಸಂದರ್ಭ ಕುಂದಾಪುರ-ಉಡುಪಿ ತಾಲೂಕಿನ ಕುಂದಗನ್ನಡ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುವ ಹಬ್ಬ ಧಿಮ್ಸಾಲ ಹಣ್ಬು ಹಬ್ಬ. ಕಾಮನದಹನ ಆಚರಣೆಯಂತೆ ಕಂಡುಬರುವ ಈ ಹಬ್ಬದಲ್ಲಿ ಹಲವು ವಿಶೇಷತೆಗಳು ಅಡಕಗೊಂಡಿವೆ.
ಏನಿದು ಹಣ್ಬಿನ ಹಬ್ಬ ?
ಶಿವರಾತ್ರಿಯ ಜಾಗರಣೆಯ ಮರುದಿನ ಅಮಾವಾಸ್ಯೆಯಂದು ಸಂಜೆ ಊರಿನ ಹಿರಿಯರು, ತರುಣರು ಒಟ್ಟಾಗಿ ತಂಡ ಕಟ್ಟಿಕೊಂಡು ಮನೆ-ಮನೆಗೆ ತೆರಳಿ ಕಾಮನ ಮಕ್ಕಳು ಎಂದು ಹಾಡುತ್ತ ಅಕ್ಕಿ, ತೆಂಗಿನ ಕಾಯಿ, ಬೈಹುಲ್ಲು, ದಕ್ಷಿಣೆ ಮುಂತಾದವುಗಳನ್ನು ಸಂಗ್ರಹಿಸುತ್ತಾರೆ. ಬಳಿಕ ಊರ ವಿಶಾಲ ಗದ್ದೆಗೆ ಮರವೊಂದನ್ನು ಕಡಿದು ತಂದು ಅದಕ್ಕೆ ಬೈಹುಲ್ಲು ಸುತ್ತಿ, ಕಾಮನ ರೀತಿ ಅಲಂಕಾರ ಮಾಡುತ್ತಾರೆ. ಹಾಡುತ್ತ, ಕುಣಿಯುತ್ತ ಅದನ್ನು ದಹಿಸಿ ಮನೋರಂಜಕ ಆಟಗಳನ್ನೂ ಆಡುತ್ತಾರೆ. ಇದೇ ಹಣ್ಬು ಹಬ್ಬ. ಶಿವನು ಕಾಮನನ್ನು ಸುಟ್ಟ ನೆನಪಿಗಾಗಿ ಕೆಟ್ಟದನ್ನು ಸುಟ್ಟು ಊರಿಗೆ ಒಳಿತನ್ನು ಸಾರುವ ಸಂದೇಶ ಇದರ ಹಿಂದಿದೆ.
ಧಿಮ್ಸಾಲ್ ಪದ್ಯದ ಆಕರ್ಷಣೆ
ಹಬ್ಬದ ಆಕರ್ಷಣೆಯೇ ಧಿಮಾಲ್ಸ್ ಪದ್ಯ. ‘ಕಾಮಾನೋ ಭೀಮನೋ ಕಳ್ಳ ಬಡ್ಡೀ ಮಕ್ಕಳು…’ ಎನ್ನುವ ಕುಂದಗನ್ನಡದ ಸಾಲುಗಳ ಮೂಲಕ ಹಾಡು ಆರಂಭಗೊಳ್ಳುತ್ತದೆ ಹಾಗೂ ಧಿಮಾಲ್ಸ್, ಧಿಮ್ಸಾಲ್ ಎಂದು ಅಂತ್ಯಗೊಳ್ಳುತ್ತದೆ. ಪ್ರತಿ ಮನೆ ಬಾಗಿಲಿಗೆ ತಲುಪಿದಾಗ ಆ ಮನೆಯ ಯಜಮಾನರ ಕುರಿತು, ಈ ಮನಿ ಯಜಮಾನರ ಊರಿಗೇನು ಮಾಡಿರೋ, ಊರಿಗೇನ್ ಮಾಡಿರೈಯ ಕೇರಿಗೇನು ಮಾಡಿರೋ ಎನ್ನುವ ಮೂಲಕ ಆ ಮನೆಯ ಯಜಮಾನರನ್ನು ಹೊಗಳುವ, ವ್ಯಂಗ್ಯವಾಗಿ ಬಿಂಬಿಸುತ್ತಾರೆ. ಹಾಸ್ಯ ಮಿಶ್ರಿತ ಆಶು ಹಾಡುಗಳೇ ಇಲ್ಲಿರುತ್ತವೆ. ತಂಡದ ನಾಯಕ ಹಾಡನ್ನು ಶುರುಮಾಡುತ್ತಾನೆ.
ಮಕ್ಕಳಿಗಾಗಿ ಆಡಿಕೆ ಹಣ್ಬು
ಶಿವರಾತ್ರಿಯ ಜಾಗರಣೆಯಂದು ಮಕ್ಕಳಿಗಾಗಿಯೇ ಕೆಲವು ಕಡೆ ಸಣ್ಣಮಟ್ಟದ ಆಡಿಕೆ ಹಣ್ಬು ಎನ್ನುವ ಆಚರಣೆ ನಡೆಯುತ್ತದೆ. ಆ ದಿನ ಮಕ್ಕಳೇ ಒಟ್ಟಾಗಿ ಒಂದಷ್ಟು ಚೇಷ್ಠೆ,
ತಮಾಷೆಗಳನ್ನು ಮಾಡುತ್ತ ಕಾಮನ ದಹಿಸುತ್ತಾರೆ. ಆದರೆ ಆಧುನಿಕ ಶೈಲಿಯ ಹೊಡೆತಕ್ಕೆ ಸಿಲುಕಿ ಈ ಗ್ರಾಮ್ಯ ಶೈಲಿಯ ಹಬ್ಬಗಳು ಇದೀಗ ಮರೆಯಾಗುತ್ತಿವೆ. ಕೇವಲ ಶಾಸ್ತ್ರಕ್ಕೆ ಎಂಬಂತೆ ಸೀಮಿತವಾಗಿದೆ.
ಹಣ್ಬು ಸುಡುವ ಹಬ್ಬಕ್ಕೆ ವಿಶೇಷವಾದ ಮಹತ್ವವಿದೆ. ಆದರೆ ಆಧುನಿಕ ಜೀವನದ ಹೊಡೆತಕ್ಕೆ ಸಿಲುಕಿ ಈ ಆಚರಣೆ ನಶಿಸುತ್ತಿದೆ. ಇಂತಹ ಆಚರಣೆಗಳ ಉಳಿವಿಗೆ ಒಂದಷ್ಟು
ಯೋಜನೆಗಳು ಅಗತ್ಯವಿದೆ.
-ಗಿಳಿಯಾರು ಶ್ರೀನಿವಾಸ ಅಡಿಗ,
ಜಾನಪದ ವಿಮರ್ಶಕರು