Home ಧಾರ್ಮಿಕ ಸುದ್ದಿ ‘ಸ್ವಾರ್ಥರಹಿತ ದೇವರ ಸೇವೆಗೆ ಶೀಘ್ರ ಫಲ ಪ್ರಾಪ್ತಿ’

‘ಸ್ವಾರ್ಥರಹಿತ ದೇವರ ಸೇವೆಗೆ ಶೀಘ್ರ ಫಲ ಪ್ರಾಪ್ತಿ’

1414
0
SHARE

ಪಡುಬಿದ್ರಿ: ಸ್ವಾರ್ಥರಹಿತ, ಅಹಂಕಾರ ರಹಿತ ದೇವರ ಸೇವೆಗೆ ಅತ್ಯುತ್ತಮ ಫಲ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಮೇ 24ರಂದು ಭೇಟಿ ನೀಡಿದ ಸಂದರ್ಭ ಅನುಗ್ರಹ ಸಂದೇಶ ನೀಡಿದರು.

ಅಜೀರ್ಣಾವಸ್ಥೆಯಲ್ಲಿರುವ ದೇವಳವನ್ನು ಗ್ರಾಮಸ್ಥರೆಲ್ಲಾ ಒಗ್ಗೂಡಿ ಜೀರ್ಣೋದ್ಧಾರಗೊಳಿಸಲು ಮುಂದಾಗಿರುವುದು ಗ್ರಾಮಾಭಿ ವೃದ್ಧಿಯ ಸಂಕೇತವಾಗಿದೆ. ನಮ್ಮೆಲ್ಲ ಸಂಕಲ್ಪ ಪೂರ್ಣಗೊಳಿಸಲು ಶ್ರೀ ಪಾಂಡುರಂಗ ವಿಠಲ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹವಿರಲಿ. ಗ್ರಾಮಸ್ಥರು ಒಗ್ಗೂಡಿ ಮಾಡುವ ದೇವತಾ ಕಾರ್ಯ ಯಾವುದೇ ಅಡೆತಡೆಗಳಿಲ್ಲದೆ ಸಾಂಗವಾಗಿ ನೆರವೇರಲಿ ಎಂದು ಶ್ರೀಗಳು ಶುಭ ಹಾರೈಸಿದರು.

ಇತ್ತೀಚೆಗೆ ಹೆಜಮಾಡಿ ದೇವಳವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಅಷ್ಟಮಂಗಳ ಪ್ರಶ್ನೆ ಇಟ್ಟ ಸಂದರ್ಭ ಶ್ರೀ ದೇವಳಕ್ಕೆ ಸಂಬಂಧಪಟ್ಟ ಶ್ರೀ ಪುತ್ತಿಗೆ ಶ್ರೀಗಳು ಆಗಮಿಸಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸುವಂತೆ ತಿಳಿದುಬಂದ ಹಿನ್ನೆಲೆಯಲ್ಲಿ ಶುಕ್ರವಾರ ಶ್ರೀಗಳು ಹೆಜಮಾಡಿ ದೇವಳಕ್ಕೆ ಆಗಮಿಸಿದ್ದರು.

ಈ ಸಂದರ್ಭ ಮಠದ ಪಟ್ಟದ ದೇವರಾದ ಶ್ರೀ ಪಾಂಡುರಂಗ ವಿಠಲ ದೇವರಿಗೆ ಶ್ರೀಗಳು ಪೂಜೆ ನೆರವೇರಿಸಿದರು. ಇದಕ್ಕೆ ಮುನ್ನ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.

ಇದೇ ಸಂದರ್ಭ ಪ್ರಶ್ನೆಯಲ್ಲಿ ಕಂಡು ಬಂದಂತೆ ಶ್ರೀಗಳ ಭಿಕ್ಷೆ ಸ್ವೀಕಾರ ಪ್ರಕ್ರಿಯೆ ನೆರವೇರಿತು.

ದೇವಳದ ಅರ್ಚಕರಾದ ಪದ್ಮನಾಭ ಭಟ್, ರಾಮಚಂದ್ರ ಭಟ್, ಶ್ರೀನಿವಾಸ ಭಟ್, ಹರಿ ಭಟ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಮೊಕ್ತೇಸರರುಗಳಾದ ಶಂಕರ ಶೆಟ್ಟಿ ಪಠೇಲರಮನೆ, ಶೇಷಗಿರಿ ರಾವ್‌, ರವೀಂದ್ರ ಕೋಟ್ಯಾನ್‌, ಸುರೇಶ್‌ ದೇವಾಡಿಗ, ಸಂಜೀವ ಟಿ., ಜಯಂತಿ ಶೇಖರ್‌, ಪಾಂಡುರಂಗ ಕರ್ಕೇರ, ಜಯಂತ್‌ ಪುತ್ರನ್‌, ಹರೀಶ್‌ ಶೆಣೈ, ಗಣೇಶ್‌ ಸಿ. ಆಚಾರ್ಯ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್‌ ಪುತ್ರನ್‌, ಉಪಾಧ್ಯಕ್ಷ ಸುಧಾಕರ ಕರ್ಕೇರ, ಶಿವನಾಥ್‌ ಪುತ್ರನ್‌, ಸಚಿನ್‌ ನಾಯಕ್‌, ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಜೂ. 5ರಂದು ದೇವಳದ ಜೀರ್ಣೋದ್ಧಾರ ಸಮಿತಿಯ ರಚನೆ, ಈ ಬಗ್ಗೆ ಸಮಿತಿ ಕೈಗೊಂಡ ಕಾರ್ಯಗಳ ಬಗ್ಗೆ ಶ್ರೀಗಳಿಗೆ ಮಾಹಿತಿ ನೀಡಲಾಯಿತು. ಶ್ರೀ ಪುತ್ತಿಗೆ ಮಠದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಶ್ರೀಗಳು ಘೋಷಿಸಿದರು.

LEAVE A REPLY

Please enter your comment!
Please enter your name here