ಹೆಬ್ರಿ: ಉಡುಪಿ ತಾಲೂಕಿನ ಪೆರ್ಡೂರು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಆ. 17 ಸಿಂಹ ಸಂಕ್ರಮಣದಂದು ಮದುಮಕ್ಕಳ ಜಾತ್ರೆ ಎಂದೇ ಪ್ರಸಿದ್ಧಿಯಾಗಿದ್ದು, ಮದುಮಕ್ಕಳು ಸೇರಿದಂತೆ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು.
ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಿನಲ್ಲಿ ಜನ ಕಂಡು ಬಂದರೂ ಕಳೆದ ವರ್ಷದಷ್ಟು ಜನಸಾಗರವಿರಲಿಲ್ಲ. ಉಡುಪಿ ಜಿಲ್ಲೆಯಿಂದ ಮಾತ್ರವಲ್ಲದೆ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರದ ದರ್ಶನಕ್ಕೆ ಬರುವುದು ಇಲ್ಲಿಯ ವಿಶೇಷವಾಗಿದ್ದರೂ ಈ ಬಾರಿ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಬೈಂದೂರು ಪ್ರದೇಶದಿಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. 12 ಸಂಕ್ರಮಣಗಳೂ ಇಲ್ಲಿ ವಿಶೇಷವಾಗಿದ್ದು ಸಿಂಹ ಸಂಕ್ರಮಣ ಮದುಮಕ್ಕಳ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದ್ದು ಹೊಸದಾಗಿ ಮದುವೆಯಾದ ಮದುಮಕ್ಕಳು ದೇವರ ದರ್ಶನ ಮಾಡಿ ಹೋಗುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬರುತ್ತಿದೆ.
ಧಾರ್ಮಿಕ ಕಾರ್ಯಕ್ರಮ ಅನ್ನಸಂತರ್ಪಣೆ
ಸಿಂಹ ಸಂಕ್ರಮಣ ಅಂಗವಾಗಿ ಸತ್ಯನಾರಾಯಣ ಪೂಜೆ ಮೊದಲಾದ ಕಾರ್ಯಕ್ರಮಗಳು ಅರ್ಚಕ ಜಗದೀಶ್ ಅಡಿಗ ಅವರ ನೇತೃತ್ವದಲ್ಲಿ ನಡೆಯಿತು.ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು 8 ಸಾವಿರ ಭಕ್ತರು ಅನ್ನ ಪ್ರಸಾದ ಸೇವಿಸಿದರು.
ಭಕ್ತರು ಯಾವುದೇ ನೂಕು ನುಗ್ಗಲಿಲ್ಲದೆ ಮಳೆಯಲ್ಲಿ ಒದ್ದೆಯಾಗದಂತೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ದೇವಸ್ಥಾನ ಒಳಾಂಗಣದ ಸುತ್ತ ತಗಡಿನ ಚಪ್ಪರ ವ್ಯವಸ್ಥೆ ಮಾಡಿದ್ದು ಈ ಬಾರಿ ಮಳೆ ಕಡಿಮೆ ಇದ್ದರಿಂದ ಸಮಸ್ಯೆಯಾಗಲಿಲ್ಲ. ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಸಮಸ್ಯೆ ನೀಗಿಸಲು ಹಿರಿಯಡಕ ಠಾಣೆ ಹಾಗೂ ಬ್ರಹ್ಮಾವರ ಸರ್ಕಲ್ ಠಾಣೆ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಭಕ್ತರು ಸರತಿ ಸಾಲಿನಲ್ಲಿ ಸಾಗುವಲ್ಲಿ ಊರಿನವರು ಹಾಗೂ ಸಂಘ ಸಂಸ್ಥೆಯ ನೆರವಿನಿಂದ ಹೋಮ್ಗಾರ್ಡ್ ವ್ಯವಸ್ಥೆ ಮಾಡಲಾಗಿತ್ತು ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ ಹೇಳಿದ್ದಾರೆ.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶಿವರಾಮ ಶೆಟ್ಟಿ ಬುಕ್ಕಿಗುಡ್ಡೆ, ರಾಜ್ಕುಮಾರ್ ಶೆಟ್ಟಿ ದೊಡ್ಮನೆ, ದಿನೇಶ್ ಪೂಜಾರಿ ಗರಡಿಮನೆ, ರಾಜು ಮೂಲ್ಯ ಬಣ್ಣಂಪಳ್ಳಿ, ರಾಮಯ್ಯ ನಾಯ್ಕ ಮಟ್ಟಿಬೈಲು, ಶುಭಲಕ್ಷ್ಮೀ ಭಂಡಾರ್ಕರ್ ಪೆರ್ಡೂರು, ಆಶಾ ಜಿ. ಭಂಡಿ ಪೆರ್ಡೂರು ಮೊದಲಾದವರಿದ್ದರು.
ದುಬಾರಿಯಾದ ಕದಳಿ
ಈ ಬಾರಿ ಕದಳಿ ಬಾಳೆ ಹಣ್ಣಿನ ಬೆಲೆ ದುಪ್ಪಟ್ಟು ಆದ್ದರಿಂದ ಸಾವಿರ ಹಣ್ಣಿನ ಸಮರ್ಪಣೆ ವಿರಳವಾಗಿತ್ತು. ಈ ಹಿಂದೆ ಸಾವಿರ ಹಣ್ಣು ಸೇವೆಗೆ 3 ಸಾವಿರ ರೂ. ಆಗಿರುತ್ತಿದ್ದರೆ, ಈ ಬಾರಿ 6 ಸಾವಿರ ರೂ. ದಾಟಿದೆ. ಈ ಕಾರಣದಿಂದ ಬಾಳೆಹಣ್ಣಿನ ಖರೀದಿಯಲ್ಲಿ ಕುಸಿತ ಉಂಟಾಯಿತು. ಪೆರ್ಡೂರು ಸುತ್ತಮುತ್ತಲಿನ ಅಂಗಡಿಗಳಲ್ಲಿ ಕಳೆದ ಬಾರಿಯಂತೆ ಈ ಸಲವೂ ಜಾಸ್ತಿ ಹಣ್ಣು ಬೇಕಾಗಬಹುದೆಂದು ಸಂಗ್ರಹ ಮಾಡಿದ್ದು, ಹೆಚ್ಚಿನ ವ್ಯಾಪಾರ ಇರಲಿಲ್ಲ ಎಂದು ಅಂಗಡಿಯವರು ಹೇಳಿದ್ದಾರೆ.