ಮಹಾನಗರ, : ಪರಶುರಾಮ ಸೃಷ್ಟಿಯ ಶ್ರೇಷ್ಠ ಮಣ್ಣಿನ ಸ್ಥಳವು ಬಂಗರಸರು ಆಳಿದ ಪ್ರದೇಶವಾಗಿರುವುದರಿಂದ ಬಂಗ್ರ ಕೂಳೂರು ಎಂದು ನಾಮಂಕಿತಗೊಂಡಿದೆ.
ಇಂತಹ ಪುಣ್ಯ ಭೂಮಿಯಲ್ಲಿ 2008 ಗಿಡಮೂಲಿಕೆಗಳ ಬಳಸಿ ಶ್ರೀ ಧನ್ವಂತರಿ ಮಹಾಯಾಗ ಜರಗುತ್ತಿರುವುದು ನಮ್ಮೆಲ್ಲರ ಮಹಾಯೋಗ ಎಂದು ಶ್ರೀ ಕ್ಷೇತ್ರ ಕದ್ರಿಯ ವೇ| ಮೂ| ಬ್ರಹ್ಮಶ್ರೀ ದೇರೆಬೈಲ್ ವಿಟ್ಠಲ್ ದಾಸ್ ತಂತ್ರಿ ಹೇಳಿದರು.
ಶ್ರೀ ಧನ್ವಂತರಿ ಮಹಾಯಾಗದ ಪೂರ್ವಭಾವಿಯಾಗಿ, ಮಹಾಯಾಗ ನಡೆ ಯಲಿರುವ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಗಣಪತಿ ಹೋಮ, ಧನ್ವಂತರಿ ಪೂಜೆ ಬಳಿಕ ಧಾರ್ಮಿಕ ಸಮಾರಂಭದ ದೀಪ ಪ್ರಜ್ವಲನಗೈದು ಮಾತನಾಡಿದರು. ಮಹಾಯಾಗದ ಕಾರ್ಯಾಲಯದ ಉದ್ಘಾಟನೆಯನ್ನು ಗೋಲ್ಡ್ಪಿಂಚ್ನ ಸ್ಥಾನೀಯ ನಿರ್ದೇಶಕ ಪ್ರಸಾದ್ ಕುಮಾರ್ ಶೆಟ್ಟಿ ನೆರವೇರಿಸಿದರು.
ಮಹಾನಗರ ಪಾಲಿಕೆಯ ಮುಖ್ಯ ಸಚೇತಕ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ, ಶ್ರೀ ಧನ್ವಂತರಿಯು ಆರೋಗ್ಯ ಪ್ರದಾಯಿನಿ, ಈ ಮಹಾಯಾಗವನ್ನು ಸಂಘಟಿತವಾಗಿ ಕಾರ್ಯನಿರ್ವಹಿಸಿ ಸರ್ವರೂ ಸುಖ, ಶಾಂತಿ, ಸಂತೋಷ ಕಾಣುವಂತಾಗಲೆಂದು ಹಾರೈಸಿದರು. ಶೆಡ್ಡೆ ಮಂಜುನಾಥ ಭಂಡಾರಿ ಅವರು ಮಾತನಾಡಿ, ಆಚಾರ, ವಿಚಾರ, ಪ್ರಚಾರ ಶುದ್ಧಾ ಚಾರದಿಂದ ಮಹಾಯಾಗ ಯಶಸ್ಸು ಕಂಡು ಸದಾಚಾರ ಸಂಪನ್ನರಾಗೋಣವೆಂದು ನುಡಿದರು.
ವಿಮರ್ಶಿಸುವ ಜ್ಞಾನ ಬೆಳೆಸಿ ಡಾ| ಆಶಾಜ್ಯೋತಿ ರೈ ಮಾತನಾಡಿ, ಇಂದು ಧನ್ವಂತರಿ ಅರ್ವಿಭವಿಸಿದ ದಿನ ವಾಗಿದೆ. ಋಷಿಮುನಿಗಳು ಜಗತ್ತಿಗೆ ನೀಡಿದ ಪದ್ಧತಿಯನ್ನು ಅನುಷ್ಠಾನಗೊಳಿಸಿ ಬಾಳಿನಲ್ಲಿ ಅಳವಡಿಸುವುದರೊಂದಿಗೆ ಶ್ರದ್ಧಾ ಭಕ್ತಿ ನಂಬಿಕೆಗಳೊಂದಿಗೆ ವೈಜ್ಞಾನಿಕವಾಗಿ ವಿಮರ್ಶಿಸುವ ಜ್ಞಾನವನ್ನು ಬೆಳೆಸಿಕೊಳ್ಳೋಣ ಎಂದರು.
ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಮಾರ್ಗದರ್ಶನಗೈದು ಸರ್ವರ ಸಹಕಾರ ಕೋರಿದರು. ಮಹೇಶ್ ತುಪ್ಪೆಕಲ್ಲು, ಯೋಗ ಗುರು ಎಂ. ಜಗದೀಶ್ ಶೆಟ್ಟಿ ಬಿಜೈ, ಕಾರ್ಪೊರೇಟರ್ ಹರೀಶ್ ಕುಮಾರ್, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮೀನ್, ವಸಂತ ಬಜಪೆ, ರಾಜೇಶ್ ರಾವ್, ಮೆಸ್ಕಾಂ ಕಾಟಿಪಳ್ಳ ಜಯ ಶೆಟ್ಟಿ , ಜಗದೀಶ ಶೆಟ್ಟಿ ದೇವಿ ದಯಾಳ್, ಅಶೋಕ್ ಮಾಡ, ವಿಜಯ ಎಸ್.ಆರ್ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ನಾಟಿ ವೈದ್ಯ ಡಾ|ಎಂ. ಮುರುಳಿ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು.
ಪ್ರಧಾನ ಕಾರ್ಯದರ್ಶಿ ಲೋಕನಾಥ್ ಬಂಗೇರ ವಂದಿಸಿದರು. ಕಾರ್ಯದರ್ಶಿ ಪಿ. ಸುಧಾಕರ್ ಕಾಮತ್ ಮತ್ತು ಆನಂದ ಶೆಟ್ಟಿ ತೊಕ್ಕೊಟ್ಟು ಅವರು ನಿರೂಪಿಸಿದರು.