Home ಧಾರ್ಮಿಕ ಸುದ್ದಿ ಗುರು ಸೇವೆ ಶ್ರೇಷ್ಠ ಕಾರ್ಯ: ಮುನಿ ಮಹಾರಾಜ್‌

ಗುರು ಸೇವೆ ಶ್ರೇಷ್ಠ ಕಾರ್ಯ: ಮುನಿ ಮಹಾರಾಜ್‌

ಕಾರ್ಕಳ: ಚಾತುರ್ಮಾಸ್ಯ ಮಂಗಲ ಕಲಶ ಸ್ಥಾಪನೆ

1515
0
SHARE

ಕಾರ್ಕಳ : ಜೈನ ಧರ್ಮದಲ್ಲಿ ದಿಗಂಬರ ಮುನಿಗಳಿಗೆ ಗುರು ಸ್ಥಾನವಿದೆ. ದಿಗಂಬರ ಮುನಿಗಳ ಆಚರಣೆ ಬೇರೆ ಬೇರೆ ರೀತಿಯಲ್ಲಿದ್ದರೂ ಸಮುದಾಯ ಅವರೆಲ್ಲರನ್ನೂ ಗುರುಗಳೆಂದು ಸ್ವೀಕರಿಸಬೇಕು. ಅವರ ಸೇವೆ ಮಾಡುವುದು ಶ್ರೇಷ್ಠ ಕಾರ್ಯ ಎಂದು ಪರಮಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರು ಹೇಳಿದರು. ದಾನಶಾಲೆ ಭಗವಾನ್‌ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಶ್ರೀಗಳ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಜು. 27ರಂದು ನಡೆದ ಮಂಗಲ ಕಲಶ ಸ್ಥಾಪನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಂಗಲ ಪ್ರವಚನ ನೀಡಿದರು.

ಅಜ್ಞಾನ, ಅಂಧಕಾರವನ್ನು ದೂರ ಮಾಡುವವರು ಗುರುಗಳು. ಗುರುಗಳಿಲ್ಲದಿದ್ದರೆ ಜೀವನ ಪ್ರಾರಂಭವೇ ಇಲ್ಲ. ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನಮಾನವಿದೆ. ಚಾರ್ತುಮಾಸ್ಯದ ಅವಧಿಯಲ್ಲಿ ನಡೆಯುವ ಪ್ರವಚನವನ್ನು ಅರಿತು ಆತ್ಮಕಲ್ಯಾಣ ಮಾಡಿಕೊಳ್ಳಬೇಕು. ಅದು ಶ್ರೇಷ್ಠ ಗುರುದಕ್ಷಿಣೆ ಎಂದರು. ಕಾರ್ಕಳ ಜೈನ ಮಠದ ರಾಜಗುರು ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಧರ್ಮ ರಕ್ಷಣೆಗಾಗಿ ಮುನಿಗಳು ಬರುತ್ತಾರೆ. ಅವರ ಚಾರ್ತುಮಾಸ್ಯದ 4 ತಿಂಗಳ ಅವಧಿಯಲ್ಲಿ ಪ್ರವಚನ ಕೇಳಿ ಅದನ್ನು ನಮ್ಮಲ್ಲಿ ಆಚರಿಸಿಕೊಳ್ಳಬೇಕು. ಅದೇ ಕಾರ್ಕಳಕ್ಕೆ ದೊಡ್ಡ ಸಂಪತ್ತು ಎಂದರು.

ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ರಯಣಸಾರ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಗುರುಗಳ ಮೂಲಕ ಬರುವುದು ನಿಜವಾದ ಜ್ಞಾನ. ಶ್ರದ್ಧೆ, ಚಾರಿತ್ರ್ಯವನ್ನು ಜೀವನದಲ್ಲಿ ಅಳವಡಿಸಿ ಆಚರಿಸುವುದು ಮುಖ್ಯ ಎಂದರು. ಕಲಶಕ್ಕೆ ಕಂಚಲ ದ್ರವ್ಯ ಹಾಕುವ ಮೂಲಕ ಪ್ರಾರ್ಥನೆ ಸಲ್ಲಿಸಿ ವಿವಿಧ ಧಾರ್ಮಿಕ ವಿಧಾನದೊಂದಿಗೆ ಮಂಗಲ ಕಲಶ ಸ್ಥಾಪನೆ ಮಾಡಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್‌, ಬಾರಾಡಿಬೀಡು ಡಾ| ಜೀವಂಧರ್‌ ಬಲ್ಲಾಳ್‌, ಸುಪ್ರಿಯಾ ಹರ್ಷೇನ್ದ್ರ ಕುಮಾರ್‌ ಉಪಸ್ಥಿತರಿದ್ದರು.

ಸಮಿತಿಯ ಪ್ರ. ಕಾರ್ಯದರ್ಶಿ ಎಂ.ಕೆ. ವಿಜಯ ಕುಮಾರ್‌ ಪ್ರಸ್ತಾವನೆಗೈದರು. ಅಂಡಾರು ಮಹಾವೀರ ಹೆಗ್ಡೆ ಸ್ವಾಗತಿಸಿ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಎ. ಮೋಹನ್‌ ಪಡಿವಾಳ್‌ ವಂದಿಸಿದರು. ಯೋಗರಾಜ್‌ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು. ಹಿರಿಯಂಗಡಿಯಿಂದ ಮೆರವಣಿಗೆ ಶುಕ್ರವಾರ ಬೆಳಗ್ಗೆ 7 ಗಂಟೆಗೆ ನಗರದ ಹಿರಿಯಂಗಡಿ ಹಿರೇ ಬಸದಿ ಶ್ರೀ ನೇಮಿನಾಥ ಸ್ವಾಮಿ ಬಸದಿಯಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಜಿನಬಿಂಬದೊಂದಿಗೆ ಮೆರವಣಿಗೆ ನಡೆಯಿತು.

ಜ್ಞಾನ ಶಾಶ್ವತ
ಮುನಿಮಹಾರಾಜರು ಧರ್ಮದ ಬಗ್ಗೆ ಚಿಂತೆ ಮಾಡುತ್ತಾರೆ. ಅವರು ನೀಡುವ ಜ್ಞಾನ ಶಾಶ್ವತ. ಈ ಚಾರ್ತುಮಾಸ್ಯದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು.
 - ಡಾ| ಎಂ.ಎನ್‌.
ರಾಜೇಂದ್ರ ಕುಮಾರ್‌

LEAVE A REPLY

Please enter your comment!
Please enter your name here