ಉಪ್ಪಿನಂಗಡಿ : ದೇಶ ಸ್ವತಂತ್ರವಾದರೂ ನ್ಯಾಯಾಂಗ, ಶಿಕ್ಷಣ ಸಹಿತ ಎಲ್ಲದರಲ್ಲೂ ಬ್ರಿಟಿಷರ ವ್ಯವಸ್ಥೆಯನ್ನೇ ಸ್ವೀಕಾರ ಮಾಡಿದ್ದೇವೆ. ಹೀಗಾಗಿ, ನಮ್ಮ ದೇಶಕ್ಕೆ ನೈಜ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ ಎಂದು ಕೊಲ್ಯ ಶ್ರೀ ಮೂಕಾಂಬಿಕ ಕ್ಷೇತ್ರದ ಮೊಕ್ತೇಸರ ಮಧುಸೂದನ್ ಅಯ್ಯರ್ ತಿಳಿಸಿದರು.
ಸನಾತನ ಸಂಸ್ಥೆಯ ವತಿಯಿಂದ ಇಲ್ಲಿನ ಶ್ರೀ ಗುರುಸುಧೀಂದ್ರ ಕಲಾ ಮಂದಿರದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಹಿಂದೂಗಳು ಗೌರವದಿಂದ ಬದುಕುವಂತಾಗಬೇಕು. ಧರ್ಮ ಶಿಕ್ಷಣ ಪಡೆದು, ಧರ್ಮಾಚರಣೆ ಮಾಡಿ, ಹಿಂದೂ ರಾಷ್ಟ್ರಕ್ಕೆ ಕೊಡುಗೆ ನೀಡಬೇಕಾಗಿದೆ ಎಂದರು. ಹಿಂದೂ ಜನಜಾಗೃತಿ ಸಮಿತಿಯ ಪ್ರಿಯಾ ಪ್ರಭು ಮಾತನಾಡಿ, ಶಿಷ್ಯನ ಪರಮಮಂಗಲ ಗುರುಕೃಪೆಯಿಂದ ಮಾತ್ರ ಆಗಲು ಸಾಧ್ಯ. ಗುರುಕೃಪೆಯಿಂದ ಧರ್ಮ ಸಂಸ್ಥಾಪನೆಯೂ ಆಗಿದೆ ಎಂದರು.
ಸುಬ್ರಹ್ಮಣ್ಯ ಪ್ರಸಾದ ಇವರ ಪೌರೋಹಿತ್ಯದಲ್ಲಿ ಎಲ್ಯಣ್ಣ ಗೌಡ ಮತ್ತು ವಿಜಯ ದಂಪತಿ ಬೆಳಗ್ಗೆ ಆದಿಗುರು ಮಹರ್ಷಿ ವ್ಯಾಸರ ಪ್ರತಿಮಾ ಪೂಜೆ ನೆರವೇರಿಸಿದರು. ಬಳಿಕ ಸನಾತನ ಸಂಸ್ಥೆಯ ವಕ್ತಾರ ಆನಂದ ಗೌಡ ಪರಾತ್ಪರ ಗುರು ಡಾ| ಜಯಂತ ಆಠವಲೆ ಅವರ ಸಂದೇಶ ವಾಚಿಸಿದರು.
ಎಲ್ಯಣ್ಣ ಗೌಡ, ಡಾ| ರಾಜಗೋಪಾಲ್ ಭಟ್ ಕೈಲಾರ್, ಆನಂದ ಗೌಡ ರಾಮಕುಂಜ, ಉಮೇಶ್ ಶೆಣೈ, ಲಕ್ಷ್ಮಣ ಗೌಡ ಮಿತ್ತಿಲ, ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್ ಬಿ.ಕೆ., ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಚೇತನಾ ಕಾರ್ಯ ಕ್ರಮ ನಿರೂಪಿಸಿದರು.