Home ನಂಬಿಕೆ ಸುತ್ತಮುತ್ತ ದತ್ತಾತ್ರೆಯ ಅವತಾರಕ್ಕೆ ಕಾರಣವಾದ ಅತಿಥಿ ಸತ್ಕಾರ

ದತ್ತಾತ್ರೆಯ ಅವತಾರಕ್ಕೆ ಕಾರಣವಾದ ಅತಿಥಿ ಸತ್ಕಾರ

1853
0
SHARE

ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಇಂದಿಗೂ ಅತಿಥಿ ಸತ್ಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. “ಅತಿಥಿ ದೇವೋಭವ” ಎಂಬ ಅತಿಥಿಯೇ ದೇವರು ಅಥವಾ ದೇವರಿಗೆ ಸಮನಾದವನು ಎಂಬ ಮಧುರವಾದ ಸಿದ್ಧಾಂತವನ್ನು ಅನುಸರಿಸುವ ಸಂಸ್ಕಾರ ಹಿಂದಿನಿಂದಲೂ ಬಂದುದಾಗಿದೆ. ಅತಿಥಿಯೊಬ್ಬನ ಸಂತೃಪ್ತಿಯೇ ನಮ್ಮ ಸಂತೋಷ ಎಂದುಕೊಂಡವರು ನಾವು. ಈ ಅತಿಥಿ ಸತ್ಕಾರದಿಂದಾಗಿ ದೇವರ ಸಾಕ್ಷಾತ್ಕಾರ ಹೇಗೆ ಆಗಿದೆ ಎಂಬುದನ್ನು ದತ್ತಾವತಾರದ ಹುಟ್ಟು ತಿಳಿಸಿಕೊಡುತ್ತದೆ.

ವೇದದಲ್ಲೊಂದು ಉಕ್ತಿಯಿದೆ.
ಯತ್ರಾತಿಥೀನಾಂ ಸೇವನಂ ಯಥಾವತ್ ಕ್ರಿಯತೇ |
ತತ್ರ ಸರ್ವಾಣಿ ಸುಖಾನಿ ಭವಂತೀತಿ ||

ಅಂದರೆ ಯಾವ ಕ್ರಿಯೆ ಅಥವಾ ಕರ್ಮದಲ್ಲಿ ಅತಿಥಿಗಳ ಸೇವನೆಯು ಯಥಾವತ್ತಾಗಿ ಮಾಡಲಾಗುತ್ತದೆಯೋ ಅಲ್ಲಿ ಸಮಸ್ತ ಸುಖಗಳೂ ಉಂಟಾಗುತ್ತದೆ ಎಂದರ್ಥ. ಅತಿಥಿ ಸೇವೆಗೆ ಅಷ್ಟೊಂದು ಶಕ್ತಿಯಿದೆ. ಇದರಿಂದಾಗುವ ಫಲವೆಂದರೆ ಸುಖಪ್ರಾಪ್ತಿ. ಸುಖಪ್ರಾಪ್ತಿಯಾದವನಿಗೆ ಶತಾಯುಷ್ಯವೂ ಕ್ಷಣಾರ್ಧದಲ್ಲಿ ಕಳೆದುಹೋಗುತ್ತದೆ. ಅತಿಥಿ ಸತ್ಕಾರದ ಫಲವನ್ನು ಅನುಸೂಯೆಯ ಮಗನಾಗಿ ಜನಿಸಿದ ವಿಷ್ಣುವಿನ ದತ್ತಾವತಾರದಿಂದ ನಾವು ಅರಿಯಬಹುದು.

ಅತ್ರಿಮುನಿಯ ಪತ್ನಿ ಅನುಸೂಯೆಯ ಪತಿವ್ರತಾಶಕ್ತಿಗೆ ದೇವಾನುದೇವತೆಗಳೇ ತಲೆಬಾಗಿದ್ದರು. ಈ ವಿಷಯವನ್ನು ನಾರದರು ವಿಷ್ಣುವಿನಲ್ಲಿ ತಿಳಿಸಿದಾಗ ಲಕ್ಷ್ಮೀದೇವಿಯು ಅನುಸೂಯೆಯ ಪತಿವ್ರತಾಶಕ್ತಿಯನ್ನು ಪರೀಕ್ಷಿಸಿ ಪ್ರಪಂಚಮುಖಕ್ಕೆ ತೋರಬೇಕೆಂದು ಕೇಳಿಕೊಳ್ಳುತ್ತಾಳೆ. ಇದಕ್ಕೊಪ್ಪಿದ ವಿಷ್ಣುವು ಶಿವ ಮತ್ತು ಬ್ರಹ್ಮನನ್ನು ಒಡಗೂಡಿಕೊಂಡು ವಟುಗಳ ವೇಷದಲ್ಲಿ ಅನಸೂಯೆಯ ಮನೆಗೆ ಬರುತ್ತಾರೆ. ನಾವು ಹಸಿದಿರುತ್ತೇವೆ ಭೋಜನವನ್ನು ನೀಡುವಂತೆ ಕೇಳಿದಾಗ ಅನುಸೂಯೆ ಅತಿಯಾದ ಆನಂದದಿಂದ ಭೋಜನವನ್ನು ಸಿದ್ಧಪಡಿಸಿ ಬಡಿಸುತ್ತಾಳೆ. ಆದರೆ ಈ ಮೂವರೂ “ನೀನು ವಿವಸ್ತ್ರೆಯಾಗಿ ಬಡಿಸಿದರೆ ಮಾತ್ರ ಊಟವನ್ನು ಸ್ವೀಕರಿಸುತ್ತೇವೆ” ಎಂದು ಹೇಳಿದಾಗ ಅನುಸೂಯೆಗೆ ಇವರು ಸಾಮಾನ್ಯ ವಟುಗಳಲ್ಲ ಅವತಾರಪುರುಷರು ಎಂಬುದು ಮನದಟ್ಟಾಗಿ, ಅಲ್ಲದೆ ಅತಿಥಿಗಳನ್ನು ನೋಯಿಸುವುದು ಉಚಿತವಲ್ಲ ಎಂದು ಬಗೆದು, ಅವರನ್ನು ಮಕ್ಕಳೆಂಬ ಭಾವದಲ್ಲಿ ಪತಿಯ ಪಾದೋದಕವನ್ನು ಅವರಿಗೆ ಪ್ರೋಕ್ಷಿಸಿ, ಅವರ ಇಷ್ಟದಂತೆ ಬಡಿಸಲು ಅಣಿಯಾಗುತ್ತಿದ್ದಂತೆ ಆ ಮೂವರೂ ಅಲ್ಲಿಯೇ ಪುಟ್ಟ ಶಿಶುಗಳಾಗಿ ಬಿಟ್ಟರು. ಅನುಸೂಯೆ ಪಾತಿವ್ರತದ ಶಕ್ತಿಯೇ ಇದಕ್ಕೆ ಕಾರಣ. ಆ ಮೂರೂ ಮಕ್ಕಳನ್ನು ಹಾಲುಣಿಸಿ, ತೊಟ್ಟಿಲಲ್ಲಿ ತೂಗಿ ಮುದ್ದಿಸಿದಳು. ಅತ್ರಿಮುನಿಯು ಮನೆಗೆ ಬಂದಾಗ ಆತನಿಗೆ ನಡೆದುದೆಲ್ಲವನ್ನೂ ವಿವರಿಸಿದಳು. ತ್ರಿಮೂರ್ತಿಗಳ ಮಡದಿಯರು ತಮ್ಮ ಗಂಡಂದಿರನ್ನು ಹುಡುಕಿಕೊಂಡು ಅನಸೂಯೆಯ ಮನೆಗೆ ಬಂದರು. ಮಗುವಾಗಿದ್ದ ತಮ್ಮ ಪತಿಯರನ್ನು ಮತ್ತೆ ಹಿಂದಿನ ರೂಪಕೊಡುವಂತೆ ಅನುಸೂಯೆಯಲ್ಲಿ ಕೇಳಿಕೊಂಡರು. ಮತ್ತೆ ಅನುಸೂಯೆಯ ಪತಿಯ ಪಾದೋದಕವನ್ನು ಪ್ರೋಕ್ಷಿಸಿದಾಗ ತ್ರಿಮೂರ್ತಿಗಳು ಮೊದಲಿನ ರೂಪಕ್ಕೆ ಬಂದರು. ಅನುಸೂಯೆಯ ಆತಿಥ್ಯದಿಂದ ಸಂಪ್ರೀತರಾದ ತ್ರಿಮೂರ್ತಿಗಳು ಅನುಸೂಯೆ ಅಪೇಕ್ಷೆಯಂತೆ ಅವಳ ಮಕ್ಕಳಾಗಿ ಜನಿಸಿದರು. ಅವರಿಗೆ ಚಂದ್ರ, ದತ್ತ ಮತ್ತು ದೂರ್ವಾಸ ಎಂಬ ಹೆಸರನ್ನಿಟ್ಟಳು. ಬ್ರಹ್ಮ ರೂಪವಾದ ಚಂದ್ರ ಮತ್ತ ಶಿವರೂಪನಾದ ದೂರ್ವಾಸ ತಮ್ಮ ದಿವ್ಯಾಂಶವನ್ನು ವಿಷ್ಣುರೂಪಿಯಾದ ದತ್ತನಲ್ಲಿ ಇಟ್ಟು, ಚಂದ್ರನು ಚಂದ್ರಮಂಡಲಕ್ಕೂ ದುರ್ವಾಸನು ತಪಸ್ಸಿಗೂ ಹೋದರು. ಸ್ವಯಂ ಪರಾಶಕ್ತಿಯಾದ ಭಗವಂತನು ಪೂರ್ಣಾಂಶದಿಂದ ತನ್ನನ್ನು ತಾನೇ ಅತ್ರಿ ಅನುಸೂಯೆಯರಿಗೆ ಕೊಡಲ್ಪಟ್ಟುದರಿಂದ ದತ್ತ ಎಂಬ ಹೆಸರು ಪ್ರಚುರವಾಯಿತು. ಅತ್ರಿಯ ಮಗನಾದ ಕಾರಣ ಆತ್ರೇಯನಾಗಿ ಮುಂದೆ ದತ್ತಾತ್ರೇಯ ಎಂದು ಪ್ರಸಿದ್ಧಿ ಪಡೆದ ಭಗವದ್ರೂಪ. ಹೀಗೆ ಭಗವಂತನ ತ್ರಿಮೂರ್ತಿಗಳಿಂದಾದ ದತ್ತಾವತಾರಕ್ಕೆ ಮೂಲವಾದುದು ಅತಿಥಿ ಸತ್ಕಾರ.

ಅತಿಥಿಸತ್ಕಾರ ನಮ್ಮ ಸಂಸ್ಕಾರವನ್ನು ಸೂಚಿಸುತ್ತದೆ. ಅತ್ರಿಯು ಎಂತಹ ಕಷ್ಟವೆದರಾದರೂ ಅತಿಥಿಗಳ ಸೇವೆಯಲ್ಲಿ ಲೋಪವಾಗಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಸೂಚಿಸಿದ್ದರ ಪರಿಣಾಮ ದತ್ತಾತ್ರೆಯನ ಉದಯವಾಯಿತು. ಹಾಗಾಗಿಯೇ ಅತಿಥಿಯನ್ನು ದೇವರ ಸ್ಥಾನದಲ್ಲಿಟ್ಟು ಸತ್ಕರಿಸಿದರೆ ನಮಗೆ ಎಲ್ಲ ಸುಖಭೋಗಗಳು ಒದಗಿಬರುವುದೆಂದು ವೇದ, ಪುರಾಣಗಳು ಹೇಳುತ್ತವೆ. ಹಾಗಾಗಿ ಇಂತಹ ಸುಸಂಸ್ಕಾರ ಎಲ್ಲಾ ಕಾಲಗಳಲ್ಲೂ ಚಿರಾಯುವಾಗಿರಲಿ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here