ಯಾವನು ನನಗೆ ಎಳೆಯನ್ನಾಗಲ್ಲಿ, ಹೂವನ್ನಾಗಲೀ, ಹಣ್ಣನ್ನಾಗಲೀ ಭಕ್ತಿಯಿಂದ ಕೊಡುವನೋ ಅಂತಹ ಶುದ್ಧ ಚಿತ್ತವುಳ್ಳವನು ಭಕ್ತಿಯಿಂದ ಸಮರ್ಪಿಸಿದ ಅದನ್ನು ನಾನು ಸ್ವೀಕರಿಸುತ್ತೇನೆ. ಇದು ಪರಮಾತ್ಮನೇ ಹೇಳಿದ ಮತ್ತು. ನೀನು ಯಾವುದನ್ನು ಮಾಡುತ್ತೀಯೋ ಯಾವುದನ್ನು ತಿನ್ನುತ್ತೀಯೋ, ಯಾವುದನ್ನು ಹೋಮಮಾಡುತ್ತೀಯೋ, ಯಾವುದನ್ನು ದಾನ ಮಾಡುತ್ತೀಯೋ, ಅವೆಲ್ಲವನ್ನು ನನಗೆ ಸಮರ್ಪಿಸು. ಪರಮಾತ್ಮನ ಈ ಮಾತಿನಂತೆ ಸಮರ್ಪಿಸುವ ವಸ್ತುವಾಗಲೀ, ಅದರ ಮೂಲ್ಯವಾಗಲೀ ಮುಖ್ಯವಲ್ಲ. ಬದಲಾಗಿ ಸಮರ್ಪಿಸುವಾಗಿನ ಭಕ್ತಿಬಾವ ಮುಖ್ಯ. ಭಕ್ತಿಯಿಂದ ಎಷ್ಟೇ ಚಿಕ್ಕ ವಸ್ತುವನ್ನು ಸಮರ್ಪಿಸಿದರೂ ಅದು ದೇವರಿಗೆ ಸಲ್ಲುತ್ತದೆ. ಕೋಳೂರ ಕೊಡಗೂಸಿನ ಕಥೆಯಲ್ಲಿ ಶಿವ ಪುಟ್ಟ ಬಾಲಕಿ ಸಮರ್ಪಿಸಿದ ಹಾಲನ್ನು ಸ್ವೀಕರಿಸುತ್ತಾನೆ. ರಾಮಾಯಣದ ಶಬರಿ ಕಚ್ಚಿ ನೀಡಿದ ಹಣ್ಣು ಶ್ರೀರಾಮನಿಗೆ ಪ್ರಿಯವಾಯ್ತು . ವಿದುರನ ಮನೆಯ ಕುಡುತೆ ಹಾಲಿನಿಂದ ಶ್ರೀಕೃಷ್ಣ ತೃಪ್ತಿಪಟ್ಟ. ಕಣ್ಣಪ್ಪನ ಮುಗ್ದ ಭಕ್ತಿಯ ಸಮರ್ಪಣೆಗೆ ಶಿವ ಮೆಚ್ಚಿದ. ಕುಚೇಲನ ಮುಷ್ಠಿ ಅವಲಕ್ಕಿ ನವನೀತ ಚೋರನ ಹೊಟ್ಟೆತಣಿಸಿತು. ರಾತ್ರಿಯಿಡೀ ನಿರುದ್ದಿಶ್ಯವಾಗಿ ಕಿತ್ತು ಹಾಕುತ್ತಿದ್ದ ಬಿಲ್ವದೆಲೆಯಿಂದ ರುದ್ರ ಪ್ರಸನ್ನನಾದ. ಇಂತಹ ಅದೆಷ್ಟೋ ಕಥೆಗಳು ಪುರಾಣಗಳಲ್ಲಿ ಭಕ್ತಿಪೂರ್ವಕ ಸಮರ್ಪಣೆಯ ಮಹತ್ವವನ್ನು ತಿಳಿಸುತ್ತೇವೆ. ದೇವರಿಗೆ ನಾವೇನು ಕೊಡಲು ಸಾಧ್ಯ ಆತ ಕೊಟ್ಟದ್ದನ್ನೇ ಆತನಿಗೆ ನೀಡುತ್ತೇವೆ