Home ಧಾರ್ಮಿಕ ಸುದ್ದಿ ಧಾರ್ಮಿಕ ಕೇಂದ್ರಗಳಿಂದ ದೇವರ ಪ್ರಜ್ಞೆ ಜಾಗೃತ : ಕೃಷ್ಣಾಪುರ ಶ್ರೀ

ಧಾರ್ಮಿಕ ಕೇಂದ್ರಗಳಿಂದ ದೇವರ ಪ್ರಜ್ಞೆ ಜಾಗೃತ : ಕೃಷ್ಣಾಪುರ ಶ್ರೀ

1086
0
SHARE

ಕಾಪು : ಭಕ್ಷ್ಯದಲ್ಲಿರುವ ದೇವರ ರೂಪಕ್ಕೂ, ಬಿಂಬದಲ್ಲಿರುವ ದೇವರ ರೂಪಕ್ಕೂ ಸಂಬಂಧ ಕಲ್ಪಿಸುವ ಅನುಷ್ಠಾನವೇ ನೈವೇದ್ಯ ಸಮರ್ಪಣೆ. ಭಕ್ತ ಪ್ರೀತಿ ಮತ್ತು ಅನುಗ್ರಹಕ್ಕೋಸ್ಕರ ಭಕ್ತಿಯಿಂದ ಸಮರ್ಪಿಸಿದ ಭೋಜನವನ್ನು ಸ್ವೀಕರಿಸಿದ ದೇವರ ಪವಿತ್ರ ಕ್ಷೇತ್ರವೇ ಉಂಡಾರು. ನಾವು ದೇವರಲ್ಲಿ ಶರಣಾಗತಿ ಹೊಂದಿದಾಗ ಮಾತ್ರ ದೇವರ ಅನುಗ್ರಹ ಪ್ರಾಪ್ತವಾಗಿ, ಇಷ್ಟಾರ್ಥಗಳು ನೆರವೇರಲು ಸಾಧ್ಯವಿದೆ. ಧಾರ್ಮಿಕ ಕ್ಷೇತ್ರಗಳಿಂದಾಗಿ ಜನರಲ್ಲಿ ದೇವರ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಹೇಳಿದರು.

ಉಂಡಾರು ಶ್ರೀ ವಿಷ್ಣುಮೂರ್ತಿ ದೇವಳದ ನವೀಕೃತ ದೇವಾಲಯ ಸಮರ್ಪಣೆ, ಬಿಂಬ ಪ್ರತಿಷ್ಠೆ, ಬ್ರಹ್ಮಕಲಶ ಮಹೋತ್ಸವದ ಪ್ರಯುಕ್ತ ವಿಶ್ವೋತ್ತಮ ವೇದಿಕೆಯಲ್ಲಿ ಶನಿವಾರ ರಾತ್ರಿ ಜರಗಿದ ನಾಲ್ಕನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಧಾರ್ಮಿಕ ಉಪನ್ಯಾಸ ನೀಡಿದ ಹೆರ್ಗ ರವೀಂದ್ರ ಭಟ್‌ ಮಾತನಾಡಿ, ದೇಗುಲ ಅತ್ಯಂತ ಪವಿತ್ರ ಶಕ್ತಿ ಕೇಂದ್ರವಾಗಿದೆ. ಸೈಬೀರಿಯಾ, ಜಪಾನ್‌, ಇಂಡೋನೇಶಿಯಾ, ಥೈಲ್ಯಾಂಡ್‌, ಚೀನಾ, ರಷ್ಯಾಗಳಲ್ಲಿ ನೂರಾರು ಪುರಾತನ ಹಿಂದೂ ದೇಗುಲಗಳಿದ್ದು, ರಾಮಾಯಣ, ಮಹಾಭಾರತ ಸಹಿತ ವಿವಿಧ ಪುರಾಣಗಳು ಅಲ್ಲಿನ ಪವಿತ್ರಗ್ರಂಥಗಳಾಗಿವೆ. ವಿದೇಶಿಯರು ಕೂಡಾ ನಮ್ಮ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತಾರೆ ಎನ್ನುವುದಕ್ಕೆ ಇದುವೇ ಉದಾಹರಣೆ ಎಂದರು.

ಮುಂಬಯಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಎಲ್‌.ಶೆಟ್ಟಿ, ಉದ್ಯಮಿಗಳಾದ ದಯಾನಂದ ಶೆಟ್ಟಿ ಮಂಡೇಡಿ, ಕೃಷ್ಣ ವೈ. ಶೆಟ್ಟಿ , ಡಾ| ಅನಿಲ್‌ ಶೆಟ್ಟಿ, ಡಾ| ಸುನಿಲ್‌ ಶೆಟ್ಟಿ ಮುಂಬಯಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಕರ್ನಿರೆ ವಿಶ್ವನಾಥ ಶೆಟ್ಟಿ, ಸುಧಾಕರ ಹೆಗ್ಡೆ ಮುಂಬಯಿ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅತಿಥಿಗಳಾಗಿ ಭಾಗವಹಿಸಿದ್ದರು.

ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಡಾ| ಶ್ರೀನಿವಾಸ ಭಟ್‌ ಸ್ವಾಗತಿಸಿದರು. ವಿ.ಜಿ. ಶೆಟ್ಟಿ ಸಮ್ಮಾನಿತರ ಪಟ್ಟಿ ವಾಚಿಸಿದರು. ಲಕ್ಷ್ಮಣ ಶೆಟ್ಟಿ ಮಂಡೇಡಿ ವಂದಿಸಿದರು. ನವೀನ್‌ ಅಮೀನ್‌ ಶಂಕರಪುರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here