Home ಧಾರ್ಮಿಕ ಕ್ಷೇತ್ರಗಳು ಗೋವಾದಿಂದ ಜಾರ್ಜಿಯಕ್ಕೆ….ಕೇಥೇವನ್ ರಾಣಿಯ ಅಸ್ಥಿ ಕಥೆ!

ಗೋವಾದಿಂದ ಜಾರ್ಜಿಯಕ್ಕೆ….ಕೇಥೇವನ್ ರಾಣಿಯ ಅಸ್ಥಿ ಕಥೆ!

2314
0
SHARE

ಬಹುದೂರ ಊರಿನಲ್ಲಿ ರಾಣಿಯಾಗಿದ್ದವಳ ಅಸ್ಥಿಗಳನ್ನು 400 ವರ್ಷಗಳ ಹಿಂದೆ ನಮ್ಮ ದೇಶಕ್ಕೆ ಗುಪ್ತವಾಗಿ ಸಾಗಿಸಿದ್ದು ಒಂದು ರೋಚಕ ಇತಿಹಾಸವಾದರೆ, ಆ ಮೂಳೆಗಳು ಅದೇ ರಾಣಿಯದ್ದು ಎಂದು ಆಧುನಿಕ ವಿಜ್ಞಾನ ಸಾಬಿತುಪಡಿಸಿರುವುದು ಮತ್ತೊಂದು ರೋಚಕ ಸಂಗತಿ. ಈ ಸಂಶೋಧನೆಯನ್ನು ನಮ್ಮ ದೇಶದ ತಜ್ಞರು ಹಾಗೂ ಪುರಾತತ್ತ್ವ ಮಾಡಿದೆ ಎಂಬುದೇ ಹೆಮ್ಮೆಯ ವಿಷಯ.

ಸೈಂಟ್ ಅಗಸ್ಟೀನ್ ಚರ್ಚ್. ಇದು ಹಳೇ ಗೋವಾದ ಅತೀ ಪುರಾತನವಾದ ಮತ್ತು ಭಗ್ನವಾಗಿರುವ ಕ್ರೈಸ್ತ ದೇವಾಲಯ. ಆದರೆ ಈ ದೇವಾಲಯವು ತನ್ನ ಒಡಲಲ್ಲಿ ಯಾವ ಐತಿಹಾಸಿಕ ಘಟನೆಗಳನ್ನು ಅಡಗಿಸಿಕೊಂಡಿದೆಯೋ ಎನ್ನುವ ಭಾವನೆ ಮೂಡಿಸುತ್ತದೆ. ಮನಸ್ಸಿನ ಭಾವನೆಗೆ ಇಂಬು ಕೊಡುವಂತೆ ಅಲ್ಲಿನ ಸ್ಥಳೀಯ ಪುರಾತತ್ತ್ವ ಇಲಾಖೆಯ ಅಧಿಕಾರಿಗಳು ಹೇಳಿದ ವಿವರಗಳನ್ನು ಕೇಳಿದರೆ ಆಶ್ಚರ್ಯ, ಹೆಮ್ಮೆಯ ಎರಡೂ ಏಕಕಾಲದಲ್ಲಿ ಉಂಟಾಗುತ್ತದೆ. ಅಂದ ಹಾಗೆ, ಈ ಚರ್ಚಿನಲ್ಲಿ ಸುಮಾರು 400 ವರ್ಷಗಳ ಹಿಂದೆ ಬದುಕಿದ್ದು ಜಾರ್ಜಿಯಾ ರಾಣಿಯ ಮೂಳೆಗಳನ್ನು ಗುಪ್ತವಾಗಿರಿಸಿದ್ದ ರೋಚಕ ಕಥೆ ಮೈನವಿರೇಳಿಸುತ್ತದೆ.

ರಾಜನ ದುರಾಕ್ರಮಣ!

ಇರಾನಿನ ಮೊದಲನೆಯ ಶಾ ಅಬ್ಬಾಸ್ ಬಹಳ ಮಹತ್ತ್ವಾಕಾಂಕ್ಷೆಯ ರಾಜನಾಗಿದ್ದನು. ಕ್ರಿ.ಶ.17ನೆಯ ಶತಮಾನದ ಪೂರ್ವಾರ್ಧದಲ್ಲಿ ಸಂಪೂರ್ಣ ಇರಾನನ್ನು ವಶಪಡಿಸಿಕೊಂಡಿದ್ದನು. ಉತ್ತರ ಭಾಗವನ್ನು ಕೈವಶಪಡಿಸಿಕೊಳ್ಳಲು ಜಾರ್ಜಿಯಾದ ಪೂರ್ವಭಾಗದಲ್ಲಿರುವ ‘ಕಖೇತಿ’ ರಾಜ್ಯದ ಮೇಲೆ ದಾಳಿ ಮಾಡಿ ಗೆದ್ದ. ಅಲ್ಲಿನ ಜನರು ‘ಜಾರ್ಜಿಯಾದ ಸಾಂಪ್ರಾದಾಯಿಕ ಕ್ರೈಸ್ತ’ ರಾಗಿದ್ದರು. ಅವರು ತಮ್ಮ ‘ರಾಣಿ ಕೆಥೇವನ್; ಳನ್ನು ಪೂಜಿಸುತ್ತಿದ್ದರು. ಜಾರ್ಜಿಯಾ ದೇಶ ದ್ರಾಕ್ಷಾರಸಕ್ಕೆ ಬಹಳ ಪ್ರಸಿದ್ಧಿ. ಶಾ ಅಬ್ಬಾಸ್ ಗೆ ದೇಶ ಗೆದ್ದರೂ ಜನರ ಮನಸ್ಸನ್ನು ಗೆಲ್ಲಲಾಗಲಿಲ್ಲ. ಆ ರೋಷದಿಂದ ಅವನು ಅಲ್ಲಿನ ದ್ರಾಕ್ಷಿ ತೋಟಗಳನ್ನೆಲ್ಲ ನಾಶಪಡಿಸಿದ. ರಾಣಿ ಕೆಥೇವನ್ ಳನ್ನು 10 ವರ್ಷಗಳ ಕಾಲ (1614-1624) ಸೆರಮನೆಯಲ್ಲಿ ಇರಿಸಿದ್ದ, ಹಾಗೂ ಅವಳನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳ್ಳಲು ಬಲವಂತಪಡಿಸಿದ. ಆದರೆ ರಾಣಿ ಇದಕ್ಕೆ ಒಪ್ಪಲಿಲ್ಲ ಮತ್ತು ಶಾ ಅಬ್ಬಾಸ್ ನ ರಾಣಿ ಪಟ್ಟವನ್ನೂ ತಿರಸ್ಕರಿಸಿದಳು. ಇದರಿಂದ ಅವಳನ್ನು ಹಿಂಸಿಸಿ, ಕತ್ತು ಹಿಚುಕಿ ಸಾಯಿಸಲಾಯಿತು. ಕೆಥೇವನ್ ರಾಣಿಯು ತನ್ನ ಧರ್ಮ ಉಳಿಸಲು ಪ್ರಾಣತ್ಯಾಗ ಮಾಡಿದಳು.

ಗೋವಾದ ಅಗಸ್ಟೀನಿಯನ್ ಪಂಗಡದ ಇಬ್ಬರು ಪಾದ್ರಿಗಳು ರಾಣಿಯನ್ನು 1623 ರಲ್ಲೇ ಭೇಟಿಯಾಗಿದ್ದರು. ಅವರು ಕೆಥೇವನ್ ಳ ಸಾವಿನ ಅನಂತರ ಅವಳ ಶರೀರದ ಅಸ್ಥಿಗಳನ್ನು ಗುಪ್ತವಾಗಿ ಜಾರ್ಜಿಯಾದಿಂದ ಹೊರಗಡೆ ಸಾಗಿಸಿದರು. ಕಾಲಾಂತರದಲ್ಲಿ ಆ ಅಸ್ಥಿಗಳು ಬೇರೆ ಬೇರೆ ಕಡೆ ಹಂಚಿಹೋದವು. ಆದರೆ ಸುಮಾರು 400 ವರ್ಷಗಳ ಅನಂತರ ರಾಣಿಯ ಬಲಗೈಯ ಎರಡು ಮೂಳೆಗಳು (ಅಸ್ಥಿ) ನಮ್ಮ ದೇಶದ ಗೋವಾ ರಾಜ್ಯದಲ್ಲಿ ಪತ್ತೆಯಾದವು. 1958ರಲ್ಲಿ ‘ಸಿಲ್ವಾರೆಗೊ’ ಎನ್ನುವ ಒಬ್ಬ ಪೋರ್ಚುಗೀಸ್ ನಾಗರಿಕನು ತನ್ನ ಸಂಶೋಧನೆಯಿಂದ ‘ರಾಣಿ ಕೆಥೇವನ್ ಳ ಕೈ ಮೂಳೆಗಳು ಹಳೆ ಗೋವಾದ ಅಗಸ್ಟೀಯನ್ ಕಾನ್ವೆಂಟ್ ನ ಚಾಪ್ಪರ್ ಚಾಪೆಲ್ ನ ಬಲಭಾಗದ ಗೋಡೆಯ ಎರಡನೆಯ ಕಿಟಕಿಯಲ್ಲಿ’ ಇಟ್ಟಿರುವುದನ್ನು ವಿವರಿಸಿದ್ದನು.

ಹಳೇ ಗೋವಾದ ಪ್ರಾಂತ್ಯದಲ್ಲಿ ಅಗಸ್ಟೀನಿಯನ್ ಪಂಗಡದವರು ಒಂದು ಕಾಲದಲ್ಲಿ ಬಹಳ ಪ್ರಾಮುಖ್ಯ ಹೊಂದಿದ್ದರು. ಆದರೆ ಅನಂತರ ದಿನಗಳಲ್ಲಿ ಅವರನ್ನು ಗೋವಾದಿಂದ ಪೋರ್ಚುಗೀಸ್ ಸರಕಾರ ಓಡಿಸಿತ್ತು. ಪಾಳು ಬಿದ್ದಿದ್ದ ಅಗಸ್ಟೀನಿಯನ್ ಕಾನ್ವೆಂಟ್ ಶಿಥಿಲಗೊಂಡು ಬಿದ್ದುಹೋಯಿತು. ಅಲ್ಲಿ ಅದರ ಭಗ್ನಾವಶೇಷಗಳು ಮಾತ್ರ ಉಳಿದವು. ಹಳೇ ಗೋವಾದಲ್ಲಿ ಪ್ಲೇಗ್ ಮಾರಿ ಬಂದಾಗ ಅಲ್ಲಿನ ಜನರೆಲ್ಲ ಪಣಜಿಗೆ ವಲಸೆ ಹೋದರು ಹಾಗೂ ಅದನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು ಅಲ್ಲಿ ಕಟ್ಟುವ ಹೊಸ ಕಟ್ಟಡಗಳಿಗೆ ಹಳೇ ಗೋವಾದ ಪಾಳುಬಿದ್ದದ್ದ ಕಟ್ಟಡಗಳಿಂದ ಎಷ್ಟೋ ಕಲ್ಲುಗಳನ್ನು ತಂದರು.

ಕೇಂದ್ರ ಸರಕಾರದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ 2004 ರಿಂದ 2006 ರವರೆಗೆ ಅಗಸ್ಟೀನ್ ಚರ್ಚ್ ನಲ್ಲಿ ಉತ್ಖನದ ನಡೆಯಿತು.ಅಲ್ಲಿ ಒಂದು ‘ಕಲ್ಲಿನ ಮುಚ್ಚಳ’ದ ಹತ್ತಿರ ರಾಣಿಯ ಮೂಳೆಗಳು ಕಂಡವು. ‘ಸಿಲ್ಚರೆಗೋ’ ಹೇಳಿದ್ದ ಜಾಗದಲ್ಲಿಯೇ ಆ ಮೂಳೆಗಳು ದೊರಕಿದವು. ಆ ಮೂಳೆಗಳನ್ನು ಹೈದರಾಬಾದಿನ ಸಿಸಿಎಂಬಿ (ಸೆಂಟರ್ ಫಾರ್ ಸೆಲ್ಯುಲರ್ ಆ್ಯಂಡ್ ಮಾಲಿಕ್ಯುಲರ್ ಬಯಾಲಜಿ) ಸಂಸ್ಥೆಯಲ್ಲಿ ಡಿಎನ್ಎ ಪರೀಕ್ಷೆಗೆ ಒಳಪಡಿಸಿದಾಗ ತಿಳಿದು ಬಂದದ್ದು ಆ ಮೂಳೆ ಒಬ್ಬ ಹೆಂಗಸಿನದು ಎಂದು. ಅನಂತರ ಕಾಕೇಶಿಯನ್ ಪರ್ವತದ ಹತ್ತಿರ ವಾಸಿಸುವ ಜನರ ಒಳಗೆನ್ನೆಯ ದ್ರವದ ಡಿಎನ್ಎ ಮಾದರಿಯು ರಾಣಿಯ ಮೂಳೆಯ ಡಿಎನ್ಎ ಯೊಂದಿಗೆ ಹೊಂದಾಣಿಕೆ ಆಗುತ್ತಿತ್ತು. ಇದರಿಂದ ಆ ಮೂಳೆಗಳು ರಾಣಿ ಕೆಥೇವನ್ ಳದ್ದೇ ಎಂದು ದೃಢಪಟ್ಟಿತು.

ಜಾರ್ಜಿಯದ ಚರ್ಚಿನ ಸತತ ಪ್ರಯತ್ನದಿಂದ ಜಾರ್ಚಿಯ ಸರಕಾರ ಮತ್ತು ಭಾರತೀಯ ಪುರಾತತ್ತ್ವ ಇಲಾಖೆಯೊಂದಿಗೆ ಒಂದು ಒಪ್ಪಂದ ಏರ್ಪಟ್ಟಿತು. ಆ ಪ್ರಕಾರ, ‘ರಾಣಿಯ ಆ ಮೂಳೆಗಳನ್ನು ಆರು ತಿಂಗಳ ಕಾಲ ಜಾರ್ಜಿಯ ಬೇರೆ ಬೇರೆ ಚರ್ಚ್ ಗಳಲ್ಲಿ ಪ್ರದರ್ಶಿಸಬಹುದು. ಜಾರ್ಜಿಯ ಸರಕಾರ ಗೋವಾದ ಪುರಾತತ್ತ್ವ ಇಲಾಖೆ ತಮ್ಮ ರಾಣಿಯ ಅಸ್ಥಿಯನ್ನು ಮತ್ತೆ ಹುಡುಕಿಕೊಟ್ಟದ್ದಾಗಿ ಇಲಾಖೆಯ ಅಧಿಕಾರಿಗಳೆ ತಮ್ಮ ರಾಣಿಯನ್ನು ನಮ್ಮಲ್ಲಿಗೇ ತರಲಿ’ ಎಂದು ಆಹ್ವಾನಿಸಿದರು. ಆದ್ದರಿಂದ ಕೆಥೇವನ್ ರಾಣಿಯ ಅಸ್ಥಿಗಳನ್ನು ಒಂದು ಮರದ ಪೆಟ್ಟಿಗೆಯಲ್ಲಿ ಇರಿಸಿ, ಅದನ್ನು ಸೆಪ್ಟೆಂಬರ್ ಒಂಭತ್ತರಂದು ಗೋವಾದಿಂದಲೇ ಜಾರ್ಜಿಯಾಗೆ ಕೊಂಡೊಯ್ಯಲಾಯಿತು.

ಮರಳಿ ಬಂದಳು ರಾಣಿ!
400 ವರ್ಷಗಳ ಅನಂತರ ಅಸ್ಥಿಯ ಮೂಲಕ ತಮ್ಮ ರಾಣಿಯೇ ತಾಯ್ನಾಡಿಗೆ ಮರಳಿ ಬಂದಳೆಂದು ಅಲ್ಲಿನ ಜನರಿಗೆ ಸಂತೋಷವೋ ಸಂತೋಷ. ರಾಣಿಯ ಅಸ್ಥಿಯನ್ನು ‘ಟಿಬಿಲಿಸಿ’ ಯ ‘ಟ್ರಿನಿಟಿ’ ಚರ್ಚ್ ನಲ್ಲಿ ಅದ್ದೂರಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪ್ರದರ್ಶನಕ್ಕೆ ಇಡಲಾಯಿತು. ಕೆಥೇವನ್ ರಾಣಿಯ ಊರಾದ ‘ಅಲಾವರ್ಧಿ’ ಚರ್ಚನಲ್ಲಿ (ಕಕೇತಿ ಜಿಲ್ಲೆ) ರಾತ್ರಿಯೆಲ್ಲ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿ, ಪ್ರದರ್ಶನಕ್ಕೆ ಇಡಲಾಯಿತು.ತಮ್ಮ ಧರ್ಮವನ್ನು ಉಳಿಸಿದ ರಾಣಿಯೇ ಮತ್ತೆ ತನ್ನ ಊರಿಗೆ ಬಂದಳೆಂದು ಅವಳ ಅಸ್ಥಿಯನ್ನು ನೋಡಲು ಜನರೆಲ್ಲ ದಾರಿ ಉದ್ದಕ್ಕೂ ಕಿಕ್ಕಿರಿದು ತುಂಬಿದ್ದರು.

LEAVE A REPLY

Please enter your comment!
Please enter your name here