ಸೊಲ್ಲಾಪುರ: ದಕ್ಷಿಣ ಕಾಶೀ ಎಂದೇ ಪ್ರಸಿದ್ಧವಾಗಿರುವ ಅಕ್ಕಲಕೋಟ ತಾಲೂಕು ಜೇವೂರ ಗ್ರಾಮದ ಕಾಶೀವಿಶ್ವೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರ ಗರ್ಭಗುಡಿಯಲ್ಲಿ ಕಾಶೀ ಕ್ಷೇತ್ರದಿಂದ ಗಂಗಾಜಲ ಉದ್ಭವವಾಗುತ್ತದೆ. ಆದ್ದರಿಂದ ಕಾಶೀ ವಿಶ್ವನಾಥನ ದರ್ಶನಕ್ಕೆ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಭಕ್ತ ಸಾಗರವೇ ಹರಿದು ಬಂದಿತ್ತು.
ದಕ್ಷಿಣ ಕಾಶೀ ಎಂದೇ ಪ್ರಸಿದ್ಧವಾಗಿರುವ ಜೇವೂರ ಗ್ರಾಮದ ಶ್ರೀ ಕಾಶೀವಿಶ್ವೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರ ಮಧ್ಯಾಹ್ನ 1.18ಕ್ಕೆ ಗರ್ಭಗುಡಿಯಲ್ಲಿ ಕಾಶೀ ಕ್ಷೇತ್ರದಿಂದ ಗಂಗಾಜಲ ಉದ್ಭವವಾಗಿದ್ದು, ಲಿಂಗದ ಸುತ್ತಲೂ ನೀರು ಮತ್ತು ಮರಳು ಬಂದಿದೆ. ಭಕ್ತರು ದರ್ಶನ ಪಡೆದರು.
ವಿಶೇಷವಾಗಿ ಮೂರು ವರ್ಷಕ್ಕೊಮ್ಮೆ ಶ್ರಾವಣ ಮಾಸದ ಮೂರನೇ ಸೋಮವಾರ ಗರ್ಭಗುಡಿಯಲ್ಲಿ ಕಾಶೀ ಕ್ಷೇತ್ರದಿಂದ ಗಂಗಾಜಲ ಬರುತ್ತಿದೆ. ಅದಕ್ಕಾಗಿ ಇಂತಹ ದರ್ಶನ ಸಿಗುವುದು ಪುಣ್ಯ ಪಡೆದಿರಬೇಕು ಎಂದು ಭಕ್ತರು ಹೇಳುತ್ತಿದ್ದರು.
ಮಂದಿರ ಪರಿಸರದಲ್ಲಿ 60 ಅಡಿ ಆಳವಾದ ಬಾವಿ ಇದೆ. ಮಳೆಗಾಲದಲ್ಲಿ ಮಾತ್ರ ಬಾವಿಯಲ್ಲಿ ನೀರು ಇರುತ್ತದೆ. ಮಳೆ ಕಡಿಮೆಯಾದರೆ ನೀರು ಕಡಿಮೆಯಾಗುತ್ತದೆ. ಆದರೆ ಶಿವಲಿಂಗದ ಸುತ್ತಲಿನ ನೀರು ಯಾವುದೇ ಕಾರಣಕ್ಕೆ ಕಡಿಮೆಯಾಗುವುದಿಲ್ಲ. ಕಾಶೀವಿಶ್ವೇಶ್ವರನ ಸ್ವಯಂಭು ಲಿಂಗವಿದ್ದು, ಲಿಂಗದ ಸುತ್ತಲೂ 12 ತಿಂಗಳೂ ಅಷ್ಟೇ ನೀರು ಇರುತ್ತವೆ. ಬರಗಾಲದಲ್ಲಿಯೂ ಲಿಂಗದ ಸುತ್ತಲಿರುವ ಗಂಗಾಜಲ ಇಲ್ಲಿಯವರೆಗೂ ಬತ್ತಿ ಹೋಗಿಲ್ಲ ಎಂದು ಗ್ರಾಮಸ್ಥ ಕಾಶೀನಾಥ ಕಡಗಂಚಿ ತಿಳಿಸಿದರು.