Home ನಂಬಿಕೆ ಸುತ್ತಮುತ್ತ ಗಣಸೂಕ್ತ ಅಥವಾ ಗಣಪತಿ ಸೂಕ್ತ

ಗಣಸೂಕ್ತ ಅಥವಾ ಗಣಪತಿ ಸೂಕ್ತ

2914
0
SHARE

ಗಣಪತಿ ಪ್ರಥಮ ಪೂಜಿತ, ವಿಘ್ನನಿವಾರಕ ದೇವನಾಗಿದ್ದಾನೆ. ಋಗ್ವೇದದಲ್ಲಿ ಗಣಪತಿಗೆ ಸಂಬಂಧಿಸಿ ಆರಾಧಿಸಲು ಗಣಪತಿಸೂಕ್ತವನ್ನು ಹೇಳಲಾಗಿದೆ. ಗಣಪತಿಯು ಏನು? ಎಂಬುದನ್ನೂ ಏನೆಲ್ಲವನ್ನು ಆತನಿಂದ ಪಡೆಯಬಹುದು? ಎಂಬುದನ್ನು ಗಣಸೂಕ್ತ ಹೇಳುತ್ತದೆ. ಆತೂನ ಇಂದ್ರ ಕ್ಷುಮಂತಂ ಚಿತ್ರಂ ಗ್ರಾಭಂ ಸಂಗೃಭಾಯ .. ಎಂದು ಆರಂಭವಾಗುವ ಈ ಸೂಕ್ತ ಸಸ್ವರಸಹಿತವಾಗಿ ಉಚ್ಚರಿಸುವಾಗ ಕೇಳಲೂ ಇಂಪು; ಮನಸಿಗೂ ತಂಪು.

ಗಣಪತಿಯು ಬಹುಕರ್ಮಿಯೂ ಬಹುಧನನೂ ಬಹುದಾನಿಯೂ ಆಗಿರುವನಲ್ಲದೆ ರಕ್ಷಣಾಯುತನೂ ಆಗಿದ್ದಾನೆ. ಭೀಕರವಾದ ಗೂಳಿಯನ್ನು ತಡೆಯಲು ಅಸಾಧ್ಯ. ಅಂತೆಯೇ ಗಣಪನ ದಾನದ ಶೂರತನವನ್ನು ಮನುಷ್ಯರಷ್ಟೇ ಅಲ್ಲ ದೇವತೆಗಳಿಂದಲೂ ತಡೆಯಲಾಗದು. ಗಣಪನು ಸ್ವಯಂ ಪ್ರಕಾಶಮಾನನೂ ಸಂಪತ್ತಿನ ಒಡೆಯನೂ ಆಗಿದ್ದಾನೆ. ಧನಮದದಿಂದ ಯಾರೂ ಪೀಡಿಸದಂತೆ, ನಮ್ಮ ಸಂಪತ್ತನ್ನು ಯಾರೂ ಕೊಳ್ಳೆಹೊಡೆಯದಂತೆ ರಕ್ಷಿಸುವವನೂ ಆಗಿದ್ದಾನೆ. ವಿಶೇಷವಾಗಿ ಶತ್ರುಸಂಹಾರಿಯೂ ಲೋಭಿಯಾದ ಜನರ ಸಂಪತ್ತನ್ನು ತಂದು ಬಡವರಿಗೆ ಹಂಚುವವನೂ ಆಗಿದ್ದಾನೆ. ಇವೆಲ್ಲವನ್ನೂ ಅನುಗ್ರಹಿಸುವವನಾಗು ಎಂದು ಈ ಸೂಕ್ತದಲ್ಲಿ ಪ್ರಾರ್ಥಿಸಿಕೊಳ್ಳಲಾಗಿದೆ. ಅಲ್ಲದೆ ಅಪರಿಮಿತ ಜ್ಞಾನವುಳ್ಳ ದೇವನಾದ ಗಣಪನು ರಕ್ಷಕನಾಗಿರಲಿ, ನಮ್ಮ ಯಜ್ಞಗೃಹದಲ್ಲಿ ಬಂದು ಕುಳಿತುಕೊಳ್ಳಲಿ ಎಂಬ ಸದಾಶಯದ ಬೇಡಿಕೆಗಳನ್ನು ಈ ಸೂಕ್ತ ಒಳಗೊಂಡಿದೆ.

ಮನುಷ್ಯನ ಜೀವನಕ್ಕೆ ತೀರಾ ಹತ್ತಿರವಾದ ಸಂಬಧವುಳ್ಳದ್ದು ದೇವರ ಗಣಪತಿಯ ರೂಪ. ಯಾವುದೇ ಸಣ್ಣ ಸಭಾಕಾರ್ಯಕ್ರಮವಿದ್ದರೂ ಗಣೇಶಸ್ತುತಿಯಿಂದಲೇ ಆರಂಭಿಸುವ ಸಂಪ್ರದಾಯ ಇದಕ್ಕೆ ಉದಾಹರಣೆ. ಆನೆಯ ಮೊಗವನ್ನೂ ಹಿರಿದಾದ ಹೊಟ್ಟೆಯನ್ನೂ ಕಿರಿದಾದ ಕೈಕಾಲುಗಳನ್ನೂ ಹೊಂದಿರುವ ಗಣಪತಿಯ ರೂಪವೇ ನಾವು ಹೇಗೆ ಇರಬೇಕೆಂಬುದರ ಸೂಚಕ. ಈ ರೂಪ ದೇವರು ಮನುಷ್ಯನಲ್ಲಿಯೂ ಇದ್ದಾನೆ; ಪ್ರಾಣಿಗಳಲ್ಲಿಯೂ ಇದ್ದಾನೆ ಎಂಬುದನ್ನು ತೋರಿಕೊಡುತ್ತದೆ. ಪ್ರಾಜ್ಞರಲ್ಲಿಯೇ ಗಣಪತಿಯು ಅತ್ಯಂತ ಮೇಧಾವಿ ಎನ್ನಲಾಗಿದೆ. ವ್ಯಾಸರು ಮಹಾಭಾರತವನ್ನು ಕುಳಿತು ಬರೆಯಲು ಯಾರು ಸೂಕ್ತ? ಯಾರಿಂದ ಸಾಧ್ಯವಾದೀತು? ಎಂಬ ಚಿಂತೆಯಲ್ಲಿದ್ದಾಗ ಸಮರ್ಥನಾಗಿ ಸಿಕ್ಕಿದ್ದು ಗಣಪತಿಯೇ. ಆದರೆ ಮಹಭಾರತವನ್ನು ಬರೆಯುವ ಮೊದಲು ಗಣಪತಿಯು ನಿಬಂಧನೆಯೊಂದನ್ನು ಹೇಳಿದ್ದನಂತೆ. ಅದೇನೆಂದರೆ “ನಾನು ನೀವು ಹೇಳುವ ಮಹಾಭಾರತವವನ್ನು ಬರೆಯುತ್ತಲೇ ಹೋಗುತ್ತೇನೆ. ಆದರೆ ನಾನು ಒಂದು ಶ್ಲೋಕದ ಕೊನೆಯ ಪದಕ್ಕೆ ಬರುವಾಗ ಇನ್ನೊಂದು ಶ್ಲೋಕವನ್ನು ಹೇಳಿರಬೇಕು. ಅದಕ್ಕಾಗಿ ಸಮಯವನ್ನು ತೆಗೆದುಕೊಂಡ ಕ್ಷಣ ನಾನು ಎದ್ದು ಹೊರಟುಬಿಡುತ್ತೇನೆ” ಎಂಬುದಾಗಿ. ಇದನ್ನು ಒಪ್ಪಿಕೊಂಡ ವ್ಯಾಸರು ಮುಂದಿನ ಶ್ಲೋಕಕ್ಕೆ ಸಮಯ ತಗಲುವಂತಿದ್ದಾಗ ಹಿಂದಿನ ಶ್ಲೋಕದಲ್ಲಿ ಕಠಿಣ ಶಬ್ದಗಳನ್ನು ಬಳಸುತ್ತಿದ್ದರಂತೆ. ಅದನ್ನು ಯೋಚಿಸಿ ಗಣಪತಿ ಬರೆದು ಮುಗಿಯುವುದರೊಳಗೆ ಮುಂದಿನ ಶ್ಲೋಕವನ್ನು ರಚಿಸಿಬಿಡುತ್ತಿದ್ದರಂತೆ. ಹಾಗಾಗಿ ಗಣಪತಿ ಎದ್ದು ಹೋಗುವ ಪ್ರಸಂಗ ಬರಲಿಲ್ಲ. ಮಹಾಭಾರತವು ಲೋಕಾರ್ಪಣೆಯಾಯಿತು.

ಇಂತಹ ಕುಶಲಮತಿ, ವಿದ್ಯೆ, ಜ್ಞಾನ, ಧನ, ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸುವ ಸೂಕ್ತವೇ ಗಣಸೂಕ್ತ. ದೇವನಲ್ಲಿರುವ ಶಕ್ತಿಯನ್ನು ಗುರುತಿಸುವುದು ಮತ್ತು ಆ ಶಕ್ತಿಯಿಂದ ನಮ್ಮಲ್ಲಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರೆರೇಪಿಸುವಂತಹ ಮಂತ್ರಗಳಿಂದ ಕೂಡಿದ ಈ ಸೂಕ್ತ ನಮ್ಮ ಬದುಕಿಗೆ ಸ್ಫೂರ್ತಿಯೂ ಹೌದು. ಧನವಿದ್ದವನಲ್ಲಿ ದರ್ಪವಿರಬಾರದು, ಧನವು ಒಬ್ಬನಲ್ಲಿಯೇ ಸಂಗ್ರಹವಾಗದೆ ಎಲ್ಲಡೆ ಹಂಚಿಹೋಗಬೇಕು, ದ್ವೇಷ ವಿನಾಶವಾಗಬೇಕು, ಸಂತೋಷ ಎಲ್ಲರಿಗೂ ಒದಗಿಬರಬೇಕು, ಗಣಪನಲ್ಲಿಯ ಬುದ್ಧಿಮತ್ತೆ ನಮ್ಮೆಲ್ಲರಲ್ಲೂ ಬೆಳೆಯಬೇಕು ಎಂಬ ಆಶಯವು ಈ ಸೂಕ್ತದಲ್ಲಿ ಅಡಗಿದೆ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here