ಸುಬ್ರಹ್ಮಣ್ಯ: ಲೌಕಿಕ ಜೀವನದ ಸುಖವನ್ನು ಅನುಭವಿಸುತ್ತ ಬದುಕುವುದೇ ನಿಜವಾದ ಜೀವನ. ಅದಕ್ಕಿಂತ ಮಿಗಿಲಾದ ಬದುಕು ಬೇರೊಂದಿಲ್ಲ. ದೈವಿಕ ಶಕ್ತಿಯ ಆರಾಧನೆಯಲ್ಲಿ ನಂಬಿಕೆ ಇಲ್ಲದಿದ್ದರೆ ಬದುಕು ಪರಿಪೂರ್ಣವಾಗದು ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ಹೇಳಿದರು.
ಸ್ವಾಮೀಜಿ ಅವರ 22ನೇ ವರ್ಷದ ಚಾತುರ್ಮಾಸ ವ್ರತದ ಪ್ರಯುಕ್ತ ಶ್ರೀ ಮಠದ ಅನಿರುದ್ಧ ತೀರ್ಥ ವೇದಿಕೆಯಲ್ಲಿ ರವಿವಾರ ಆರಂಭಗೊಂಡ ಸಾಂಸ್ಕೃತಿಕ ವೈಭವ-2018
ಕಾರ್ಯಕ್ರಮದಲ್ಲಿ ಅವರು ಆಶೀರ್ವಚ ನೀಡಿದರು.
ಚಾತುರ್ಮಾಸ ಎಂಬುದೊಂದು ವಿಶೇಷ ಸಂದರ್ಭ. ಈ ಅವಧಿಯಲ್ಲಿ ಯತಿವರ್ಯರು ಒಂದೇ ಕಡೆ ಇದ್ದು, ಅನುಷ್ಠಾನಾದಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ವಿಶಿಷ್ಟವಾಗಿ ಸಾಂಸ್ಕೃತಿಕ, ಧಾರ್ಮಿಕ ಮತ್ತು ಭೌತಿಕ ಸ್ಫೂರ್ತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜೀವನದ ಶ್ರೇಷ್ಠತೆ ಹಾಗೂ ಸಾರ್ಥಕತೆ ಪಡೆಯಲು ದೇವರ ಅನುಗ್ರಹ ಪಡೆಯುವುದಾಗಿದೆ ಎಂದರು.
ಇದಕ್ಕಿಂತ ಮೊದಲು ಸ್ಥಳೀಯ ಸಂಗೀತ ಕಲಾವಿದರಿಂದ ಮಂಗಳ ವಾದ್ಯ ನೆರವೇರಿತು. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು. ಮಠದ ಭಕ್ತರು, ಕಲಾಸಕ್ತರು ಉಪಸ್ಥಿತರಿದ್ದರು.