Home ನಂಬಿಕೆ ಸುತ್ತಮುತ್ತ ಶಿವನಿಗೆ ಮೀನಿನ ನೈವೇಧ್ಯ, ಸತ್ಯವತಿಗೆ ಕೆಂಡದ ನೈವೇಧ್ಯ!

ಶಿವನಿಗೆ ಮೀನಿನ ನೈವೇಧ್ಯ, ಸತ್ಯವತಿಗೆ ಕೆಂಡದ ನೈವೇಧ್ಯ!

1775
0
SHARE

ಸಾಮಾನ್ಯವಾಗಿ ಯಾವುದೇ ಆಲಯದಲ್ಲಿ ದೇವರಿಗೆ ನೈವೇದ್ಯವಾಗಿ ಹಣ್ಣು, ಸಿಹಿ, ಪಾಯಸದಂಥ ನೈವೇಧ್ಯಗಳನ್ನು ಸಮರ್ಪಿಸುತ್ತಾರೆ. ಆಲಯ ಪ್ರಾಂಗಣದಲ್ಲಿ ಆಚಾರ, ಸಂಪ್ರದಾಯಕ್ಕೆ ಅನುಗುಣವಾಗಿ ಆಯಾ ದೇವರಿಗೆ ನೈವೇಧ್ಯ ಸಮರ್ಪಿಸುತ್ತಾರೆ. ಕೆಲವೆಡೆ ದೇವಾಲಯದ ಹೊರಗೆ ಪ್ರಾಣಿಬಲಿ ಕೊಡುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಆಲಯದ ಒಳಗೆ ಮಾಂಸಾಹಾರವನ್ನು ನೈವೇಧ್ಯವಾಗಿ ಇಟ್ಟಿರುವುದನ್ನು ನೀವೆಂದಾದರೂ ಕೇಳಿದ್ದೀರಾ?

ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆ ಕೋಮರಾಡ ಗುಂಪ ಎಂಬಲ್ಲಿನ ಸೋಮೇಶ್ವರನ ಆಲಯದಲ್ಲಿ ಪರಮಶಿವನಿಗೆ ಮೀನಿನ ಸಾರು ನೈವೇಧ್ಯವಾಗಿ ಸಮರ್ಪಿಸುತ್ತಾರೆ. ಬೇಡರ ಕಣ್ಣಪ್ಪ ಶಿವನಿಗೆ ಕಾಡಿನಲ್ಲಿ ಸಿಕ್ಕ ಮಾಂಸಾಹಾರವನ್ನು ಪ್ರಸಾದವಾಗಿ ಸಮರ್ಪಿಸಿದಂತೆ ಪುರಾಣಗಳಲ್ಲಿ ಹೇಳಿದೆ. ಅದೇ ಆಚರಣೆ ಇಲ್ಲಿ ಇಂದಿಗೂ ಮುಂದುವರಿದಿದೆ.

ಕೆಂಡದ ನೈವೇದ್ಯ!
ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಎಂಬ ಗ್ರಾಮದ ಅಧಿದೇವತೆ ಸತ್ಯವತಿ ದೇವಿ. ಆಕೆಗೆ ಅರ್ಪಿಸುವ ನೈವೇದ್ಯ ಎಂದರೆ ‘ಕೆಂಡ’!
ಹೌದು, ಈ ದೇವಿಗೆ ನಿಗಿನಿಗಿ ಸುಡುವ ಕೆಂಡವೇ ಅತ್ಯಂತ ಪ್ರಿಯ. ಅದನ್ನು ಕೊಳಗದಲ್ಲಿ ಅಳೆದು, ಜೋಳಿಗೆಯಲ್ಲಿ ತುಂಬಿ ತಂದು ನೈವೇಧ್ಯವಾಗಿ ಅರ್ಪಿಸಬೇಕು. ದೇವಿಯ ಕೋರಿಕೆಯಂತೆ ವರ್ಷಕ್ಕೊಮ್ಮೆ ಕೆಂಡವನ್ನೇ ನೈವೇಧ್ಯವಾಗಿ ಅರ್ಪಿಸಿ ಗ್ರಾಮದ ಜನ ಪುನೀತರಾಗುತ್ತಾರೆ.

ಪ್ರತಿವರ್ಷ ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ನಡುವೆ ಬರುವ ಹುಣ್ಣಿಮೆಯ ಆಚೀಚಿನ ಎರಡು ದಿನಗಳಲ್ಲಿ ಈ ವಿಶಿಷ್ಟ ಹಬ್ಬವನ್ನು ಆಚರಿಸಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಮರದ ದಿಮ್ಮಿಗಳನ್ನು ಪೇರಿಸಿಟ್ಟು ಬೆಂಕಿ ಹಚ್ಚಿ ಉರಿಸಿ ಕೆಂಡ ತಯಾರಿಸುತ್ತಾರೆ. ಹೂಗಳಿಂದ ಅಲಂಕೃತವಾದ ಕೊಳಗವೊಂದನ್ನು ಹಿಡಿದು ಬರುವ ವ್ಯಕ್ತಿಯೊಬ್ಬ ಅದರೊಳಗೆ ಕೆಂಡ ತುಂಬಿಸುತ್ತಾನೆ. ಜೊತೆಯಲ್ಲಿರುವವ ಜೋಳಿಗೆಯ ಬಟ್ಟೆ ಬಿಡಿಸಿ ನಿಲ್ಲುತ್ತಾನೆ. ಜೋಳಿಗೆಯಲ್ಲೂ ಕೆಂಡ ತುಂಬುತ್ತದೆ.

ಬಳಿಕ ಇಬ್ಬರೂ ಓಡುತ್ತ ಹೋಗಿ ಗುಡಿಯ ಮೂರ್ತಿಯ ಮುಂದೆ ಹಾಸಲಾದ ಬಾಳೆ ಎಲೆಗೆ ಜೋಳಿಗೆ ಹಾಗೂ ಕೊಳಗದಲ್ಲಿರುವ ನಿಗಿನಿಗಿ ಕೆಂಡವನ್ನು ಸುರಿದು ಸತ್ಯವತಿ ದೇವಿಗೆ ನೈವೇಧ್ಯವಾಗಿ ಅರ್ಪಿಸುತ್ತಾರೆ.

ಅಚ್ಚರಿಯೆಂದರೆ, ಕೆಂಡವನ್ನು ತುಂಬಿಸಿಕೊಂಡಿದ್ದ ಹಸಿ ಅರಸಿನದ ಬಟ್ಟೆ ಸ್ವಲ್ಪವೂ ಸುಡುವುದಿಲ್ಲ! ನೈವೇದ್ಯ ಸಮರ್ಪಿಸುವ ಬಾಳೆ ಎಲೆಯೂ ಸುಟ್ಟು ಕರಕಲಾಗುವುದಿಲ್ಲ.
ದೇವಿ ಕೆಂಡದ ನೈವೇಧ್ಯ ಉಂಡು ಗ್ರಾಮಸ್ಥರನ್ನು ಹರಸುತ್ತಾಳೆ ಎಂಬ ನಂಬಿಕೆ ಇಲ್ಲಿದೆ. ಉತ್ಸವದ ಸಂದರ್ಭ ಊರವರೆಲ್ಲ ಒಂದಾಗುತ್ತಾರೆ. ಹೀಗಾಗಿ ಒಂದು ವರ್ಷವೂ ಈ ಹಬ್ಬ ಸ್ಥಗಿತಗೊಂಡಿಲ್ಲವಂತೆ!

LEAVE A REPLY

Please enter your comment!
Please enter your name here