Home ಧಾರ್ಮಿಕ ಕಾರ್ಯಕ್ರಮ ಮಹಾಲಿಂಗೇಶ್ವರನ ಜಾತ್ರೆಗೆ ಧ್ವಜಾರೋಹಣ

ಮಹಾಲಿಂಗೇಶ್ವರನ ಜಾತ್ರೆಗೆ ಧ್ವಜಾರೋಹಣ

1806
0
SHARE

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಅಂಗವಾಗಿ ಮಂಗಳವಾರ ಧ್ವಜಾರೋಹಣ ನಡೆಯಿತು.

ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬೆಳಗ್ಗೆ ದೇವಾಲಯದಲ್ಲಿ ಪ್ರಾರ್ಥನೆ, ದೇವರ ಬಲಿ ಉತ್ಸವದ ಬಳಿಕ ಧ್ವಜ ಸ್ಥಂಭ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ವಿ.ಎಸ್‌. ಭಟ್‌ ಮತ್ತು ವೇ| ಮೂ| ವಸಂತ ಕೆದಿಲಾಯ ವೈದಿಕ ಕಾರ್ಯಕ್ರಮ ನೆರವೇರಿಸಿದರು.

ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ, ಸದಸ್ಯರಾದ ಅರ್ಚಕ ವಸಂತ ಕೆದಿಲಾಯ, ಎನ್‌. ಕರುಣಾಕರ ರೈ, ಯು.ಪಿ. ರಾಮಕೃಷ್ಣ, ಜಾನು ನಾಯ್ಕ, ಸಂಜೀವ ನಾಯಕ್‌ ಕಲ್ಲೇಗ, ನಯನಾ ರೈ, ರೋಹಿಣಿ ಆಚಾರ್ಯ, ಮಾಜಿ ಆಡಳಿತ ಮೊಕ್ತೇಸರ ಹಾಗೂ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಎನ್‌.ಕೆ. ಜಗನ್ನಿವಾಸ ರಾವ್‌, ವಾಸ್ತು ಎಂಜಿನಿಯರ್‌ ಪಿ.ಜಿ. ಜಗನ್ನಿವಾಸ್‌ ರಾವ್‌, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್‌, ನಗರಸಭಾ ಅಧ್ಯಕ್ಷೆ ಜಯಂತಿ ನಾಯ್ಕ, ಸದಸ್ಯ ರಾಜೇಶ್‌ ಬನ್ನೂರು, ರಮೇಶ್‌ ಬಾಬು, ಕಿಟ್ಟಣ್ಣ ಗೌಡ, ಭಾಸ್ಕರ ಬಾರ್ಯ, ಅರುಣ್‌ ಕುಮಾರ್‌ ಪುತ್ತಿಲ ಸಹಿತ ಸೀಮೆಯ ಸಹಸ್ರಾರು ಭಕ್ತರು, ಗಣ್ಯರು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಹರಿದು ಬಂತು ಹಸಿರುಕಾಣಿಕೆ
ದೇವಾಲಯದ ಜಾತ್ರೆಯ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಅಡಿಕೆ, ಸೀಯಾಳ, ಬಾಳೆಗೊನೆ, ಕಬ್ಬಿನ ಜಲ್ಲೆ, ಮಾವಿನ ಕಾಯಿಯ ಗೊಂಚಲು, ಹಲಸಿನ ಕಾಯಿ, ಹಿಂಗಾರ ಮೊದಲಾದ ಸುವಸ್ತುಗಳನ್ನು ಮಂಗಳವಾರ ಬೆಳಗ್ಗಿನಿಂದಲೇ ದೇವಾಲಯಕ್ಕೆ ತಂದೊಪ್ಪಿಸುತ್ತಿದ್ದಾರೆ. ಸುವಸ್ತುಗಳನ್ನು ಧ್ವಜಸ್ತಂಭದ ಕಟ್ಟೆಗೆ ಸುತ್ತಲೂ ಕಟ್ಟಲಾಗುತ್ತದೆ. ನಿರಂತರ ಅನ್ನದಾನದಲ್ಲಿ ದಿನಂಪ್ರತಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ.

ಭಗವಾ ಧ್ವಜಾರೋಹಣ
ಜಾತ್ರೆಯ ಧ್ವಜಾರೋಹಣ ನಡೆದ ಬಳಿಕ ಎದುರಿನ ಗದ್ದೆಯಲ್ಲಿರುವ ಧ್ವಜಸ್ತಂಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಭಗವಾಧ್ವಜಾರೋಹಣ ನೆರವೇರಿಸಿದರು. ಬಳಿಕ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ರಥಬೀದಿಯ ಇಕ್ಕೆಲಗಳಲ್ಲಿ ಕೇಸರಿ ಪತಾಕೆಗಳನ್ನು ಹಾರಿಸಲಾಯಿತು. ಹಿಂದೂ ಸಂಘಟನೆಗಳ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮೊದಲಾದವರಿದ್ದರು.

ಬಾನಂಗಳದಲ್ಲಿ ಗರುಡ
ದೇವಾಲಯಗಳ ಧ್ವಜಸ್ತಂಭಕ್ಕೂ ಗರುಡ ಪಕ್ಷಿಗೂ ನೇರ ಸಂಬಂಧ ಹಲವು ವರ್ಷಗಳಿಂದ ಸಾಬೀತಾಗುತ್ತಿದೆ. ಉತ್ತರ ಕರ್ನಾಟಕದ ಕಡೆಗಳಲ್ಲಿ ಧ್ವಜಸ್ತಂಭವನ್ನು ಗರುಡ ಕಂಬವೆಂದೇ ಕರೆಯುತ್ತಾರೆ. ಮಂಗಳವಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಜಾತ್ರೆಯ ಧ್ವಜಾರೋಹಣದ ಸಂದರ್ಭದಲ್ಲಿ ಬಾನಂಗಳದಲ್ಲಿ ಮೂರು ಗರುಡ ಪಕ್ಷಿಗಳು ಹಾರಾಟ ನಡೆಸಿದವು. ಕಳೆದ ಎರಡು ವರ್ಷಗಳಿಂದಲೂ ಧ್ವಜಾರೋಹಣದ ಸಂದರ್ಭದಲ್ಲಿ ಗರುಡ ಹಾರಾಟ ನಡೆಸುತ್ತಿರುವುದು ವಿಶೇಷ.

ಇಂದು ಪೇಟೆ ಸವಾರಿ
ಜಾತ್ರೆಯ ಅಂಗವಾಗಿ ಎ. 11ರಂದು ಬೆಳಗ್ಗೆ ಬಲಿ ಉತ್ಸವ, ರಾತ್ರಿ ಉತ್ಸವದ ಬಳಿಕ ಶ್ರೀ ದೇವರ ಪೇಟೆ ಸವಾರಿಯು ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟುಗಳಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here