ಶಿರ್ವ : ಸುಮಾರು 50 ಲ.ರೂ. ವೆಚ್ಚದಲ್ಲಿ ಪುನಃ ನಿರ್ಮಾಣಗೊಂಡ ಶಿರ್ವಭೂತಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆವರ್ಕ ಆರೂಢದಲ್ಲಿ ನವೀಕೃತ ಗರ್ಭಗೃಹ ಸಮರ್ಪಣೆ, ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ,ಚಂಡಿಕಾ ಯಾಗ ಹಾಗೂ ಮಹಾ ಅನ್ನಸಂತರ್ಪಣೆಯು ಫೆ. 8 ರಿಂದ 10ರ ಪರ್ಯಂತ ನಡೆಯಲಿದೆ.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಕಟಪಾಡಿ ಅವರ ಮಾರ್ಗದರ್ಶನದಲ್ಲಿ ವೆ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮತ್ತು ಶಿರ್ವಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ರಘುಪತಿ ಗುಂಡು ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿರುವುವು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಫೆ. 8ರಂದು ಸಾನ್ನಿಧ್ಯಕ್ಕೆ ಸಂಬಂಧಪಟ್ಟ ಶ್ರೀ ನಾಗಪಂಚದೈವೀಕ ಕ್ಷೇತ್ರದಲ್ಲಿ ಅಶ್ಲೇಷಾ ಬಲಿ- ಅನ್ನಸಂತರ್ಪಣೆ, ಫೆ. 9ರಂದು ನೂತನ ಶಿಲಾಮಯ ಆವರ್ಕ ಆರೂಢದಲ್ಲಿ ಶ್ರೀ ದೇವಿಗೆ ನವೀಕೃತ ಗರ್ಭಗೃಹ ಸಮರ್ಪಣೆ, ಶ್ರೀ ದುರ್ಗಾಪರಮೇಶ್ವರೀ ದೇವಿಯ ಪುನಃಪ್ರತಿಷ್ಠೆ-ಬ್ರಹ್ಮಕಲಶೋತ್ಸವ- ಅನ್ನಸಂತರ್ಪಣೆ ಹಾಗೂ ಫೆ.10 ರಂದು ಚಂಡಿಕಾಯಾಗ- ಶ್ರೀ ದೇವಿ ಸಂದರ್ಶನ ಮತ್ತು ಅನ್ನಸಂತರ್ಪಣೆ ನೆರವೇರಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ.9ರಂದು ಪೆರ್ಡೂರು ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿಯ ಸಮನ್ವಯದೊಂದಿಗೆ ಜನ್ಸಾಲೆ ರಾಘವೇಂದ್ರ ಆಚಾರ್ಯ ಬಳಗದವರಿಂದ ಯಕ್ಷಗಾನ ಬಯಲಾಟ ಸುದರ್ಶನ ವಿಜಯ, ಫೆ. 10ರಂದು ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ನಾಟಕ ತೂಯಿನಾಯೆ ಪೋಯೆ ಪ್ರದರ್ಶನಗೊಳ್ಳಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಕಟಪಾಡಿ ಅವರು ಅಶೀರ್ವಚನ ನೀಡಲಿದ್ದು, ವೆ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮತ್ತು ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ರಘುಪತಿ ಗುಂಡು ಭಟ್ಶುಭಾಶಂಸನೆಗೈಯಲಿದ್ದಾರೆ. ಮುಂಬಯಿ ಉದ್ಯಮಿ,ದೇವಸ್ಥಾನದ ಗೌರವಾಧ್ಯಕ್ಷ ಕೃಷ್ಣ ವಿ.ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕಾಪು ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ, ಪಾದೂರು ಧರ್ಮರಾಜ ಇಂದ್ರ, ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿವೇಕಾನಂದ ಆಚಾರ್ಯ ಮತ್ತು ಮೊಕ್ತೇಸರ ಸೀತಾರಾಮ ಆಚಾರ್ಯಹಾಗೂ ಆಡಳಿತ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.