Home ಧಾರ್ಮಿಕ ಸುದ್ದಿ ಫೆ. 5-23: ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಬ್ರಹ್ಮಕಲಶೋತ್ಸವ

ಫೆ. 5-23: ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಬ್ರಹ್ಮಕಲಶೋತ್ಸವ

1604
0
SHARE

ವಿಟ್ಲಮುಟ್ನೂರು : ಕುಳ, ವಿಟ್ಲಮುಟ್ನೂರು ಗ್ರಾಮಗಳ ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ ಮತ್ತು ವಿಟ್ಲಮುಟ್ನೂರು ಗ್ರಾಮದ ಮಾಡತ್ತಡ್ಕ ಶಿಬರಿಕಲ್ಲ ಮಾಡದ ಶ್ರೀ ಮಲರಾಯ-ಮೂವರ್‌ ದೈವಂಗಳ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ. 5ರಿಂದ 23ರ ವರೆಗೆ ನಡೆಯಲಿದೆ.

ದೇಗುಲ, ಗಣಪತಿ ಗುಡಿ, ಶಾಸ್ತಾರ ಗುಡಿಗಳ ಕಾಮಗಾರಿ, ಯಾತ್ರಿ ನಿವಾಸ, ಗೋಶಾಲೆ, ಅರ್ಚಕರ ನಿವಾಸ, ಪಾಕಶಾಲೆ ಕಾಮಗಾರಿ ಪೂರ್ತಿ ಗೊಂಡಿದೆ. ಕಾರ್ಯಾಲಯ, ಚಪ್ಪರ, ಸಭಾಂಗಣ, ಸ್ಟಾಲ್‌ ವ್ಯವಸ್ಥೆ, ಅನ್ನಸಂತರ್ಪಣೆಗೆ ಚಪ್ಪರ, ಪಾಕಶಾಲೆ, ಮ್ಯೂಸಿಯಂ, ಪ್ರಸಾದ ವಿತರಣೆ ಕೌಂಟರ್‌ಗಳೆಲ್ಲವೂ ಸಜ್ಜುಗೊಂಡಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 2.5 ಲಕ್ಷ ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಯಶಸ್ಸಿಗೆ ಕೆಎಸ್‌ಆರ್‌ಪಿ ಪಡೆಯ 22 ಸದಸ್ಯರು ಸಿದ್ಧರಾಗಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

5ರಂದು ಸಂಜೆ ತಂತ್ರಿಯವರ ಆಗಮನ, ಸಾಮೂಹಿಕ ಪ್ರಾರ್ಥನೆ, ಪ್ರಾಸಾದ ಶುದ್ಧಿ, ಅಂಕುರಾರೋಹಣ, ರಕ್ಷೋಘ್ನ ಹೋಮ, ವಾಸ್ತು ಹೋಮ ನಡೆಯಲಿದೆ. 6ರಂದು ಬೆಳಗ್ಗೆ ಆದಿಸ್ಥಳ ಬದಿಕೆರೆಯಿಂದ ತೀರ್ಥೋದಕ ಆಗಮಿಸಲಿದ್ದು, ಬಳಿಕ ಗಣಪತಿ ಹವನ, ಕೊಪ್ಪರಿಗೆ ಏರಲಿರುವುದು. 10ಕ್ಕೆ ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು, ಕರ್ಗಲ್ಲು ನೂಜಿ ಮನೆತನದ ಕೆ.ಟಿ. ವೆಂಕಟೇಶ್ವರ ನೂಜಿ, ಕುಳ ಮನೆತನದ ರವೀಂದ್ರ ಅಡ್ಯಂತಾಯ, ಕುಡ್ವ ಮನೆತನದ ಯೋಗೀಶ ಕುಡ್ವ, ಯಾಮಿನಿ ಶ್ರೀದೇವಿ ಅಮರ್‌ಜಿಲ್‌ವುಲ್ಲಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ವೇದಾದಿ ಪುರಾಣ ಪಾರಾಯಣ ಆರಂಭಗೊಳ್ಳಲಿದೆ. ಉಗ್ರಾಣ ಮುಹೂರ್ತ ನೆರವೇರಲಿದೆ.

10.20ಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಉಗ್ರಾಣವನ್ನು, 10.30ಕ್ಕೆ ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಅವರು ವಸ್ತುಸಂಗ್ರಹಾಲಯವನ್ನು, 11ಕ್ಕೆ ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ಸಭೆಯನ್ನು ಉದ್ಘಾಟಿಸಲಿದ್ದಾರೆ. ಅಪರಾಹ್ನ 4.30ಕ್ಕೆ ಧರ್ಮಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ವಿಟ್ಲ ಯೋಗೀಶ್ವರ ಮಠದ ರಾಜಗುರು ಶ್ರೀ ಶ್ರದ್ಧಾನಾಥಜೀ ಮಹಾರಾಜ ಅವರು ಆಶೀರ್ವಚನ ನೀಡಲಿದ್ದಾರೆ. ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀವತ್ಸ ಕೆದಿಲಾಯ ಶಿಬರ ಅವರು ದೇವಸ್ಥಾನ ಮತ್ತು ಶಿಲ್ಷದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ದಾರಿ ಎಲ್ಲಿ ?

ದೇಗುಲಕ್ಕೆ ಆಗಮಿಸುವ ರಸ್ತೆಗಳು ಸುಸಜ್ಜಿತಗೊಂಡಿವೆ. ದೇವಸ್ಥಾನವು ವಿಟ್ಲದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ವಿಟ್ಲ-ಪುತ್ತೂರು ಮುಖ್ಯ ರಸ್ತೆಯಲ್ಲಿ ಬದನಾಜೆಯಲ್ಲಿ ತಿರುಗಿ ಬೇರಿಕೆ, ಅಲ್ಲಿಂದ ಮುನ್ನೂರು ಮೀಟರ್‌ ಸಾಗಿದರೆ ದೇಗುಲವನ್ನು ತಲುಪಬಹುದು. ಕಬಕ, ಕೊಡಿಪ್ಪಾಡಿ ಮಾರ್ಗವಾಗಿ ಅರ್ಕ, ಓಜಾಲ, ಕುಂಡಡ್ಕ ರಸ್ತೆ ಹಾಗೂ ಬಲ್ನಾಡು, ಬೇರಿಕೆ, ಕುಂಡಡ್ಕ ರಸ್ತೆ, ಪರಿಯಾಲ್ತಡ್ಕ, ಬೇರಿಕೆ ಕುಂಡಡ್ಕ ರಸ್ತೆ ಮೂಲಕ ದೇಗುಲವನ್ನು ತಲುಪಬಹುದು. ಚಂದಳಿಕೆಯಲ್ಲಿ ತಿರುಗಿ ಸಾಗಿದರೆ ಶಿಬರಿಕಲ್ಲ ಮಾಡ ದೈವಸ್ಥಾನವನ್ನು ತಲುಪಬಹುದು.

ಪಾರ್ಕಿಂಗ್‌ ವ್ಯವಸ್ಥೆ

ವಿಟ್ಲದಿಂದ ಆಗಮಿಸುವವರಿಗೆ ವಿಶ್ವನಾಥ ಶೆಟ್ಟಿಯವರ ಗದ್ದೆ, ಕುಂಡಡ್ಕ ಹತ್ತಿರದ ಗದ್ದೆ, ಬುಳೇರಿಕಟ್ಟೆ ಪುಣಚದಿಂದ ಆಗಮಿಸುವವರಿಗೆ ಕಂಪಗದ್ದೆ, ಮಾರ್ಪುಗದ್ದೆ, ಗಾಳಿಗುಡ್ಡೆ, ಪಾಂಡೇಲು ಕೋಸ್ಟಲ್‌ ಫಾರ್ಮ್, ನಾರಾಯಣ ಶೆಟ್ಟಿಯವರ ಗದ್ದೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

LEAVE A REPLY

Please enter your comment!
Please enter your name here