ಬಳ್ಳಾರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಪವಿತ್ರವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಬುಧವಾರ ಆಚರಿಸಿದರು. ಬುಧವಾರ ಬೆಳಗಿನ ಜಾವ ಪ್ರಾರ್ಥನೆ ಸಲ್ಲಿಸಿದ ಮುಸಲ್ಮಾನರು, ಬಳಿಕ ಮನೆಯಲ್ಲಿ ಸಿಹಿ ತಿನಿಸು ಸೇವಿಸಿ, ನಗರದ ಹಳೆಬೈಪಾಸ್
ರಸ್ತೆಯಲ್ಲಿನ ಈದ್ಗಾ ಮೈದಾನದಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸಲ್ಮಾನರ ಧರ್ಮಗುರು ಖಾಜಿ ಮಹಮ್ಮದ್ ಸಿದ್ಧಿಕಿಯವರು ಧರ್ಮಗ್ರಂಥ ಖುರಾನ್ ಬೋಧನೆ ಮಾಡಿದರು. ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬದ ಮಹತ್ವದ ಕುರಿತು ವಿವರಿಸಿದರು. ಬಳಿಕ ಹಬ್ಬದ ಶುಭಾಶಯವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಹಬ್ಬದ ನಡುವೆ ಕೇರಳ ಹಾಗೂ ಕೊಡಗು ಸಂತ್ರಸ್ತರಿಗಾಗಿ ಪರಿಹಾರ ನಿಧಿ ಸಂಗ್ರಹಿಸಿ ಜನರಿಗೆ ನೆರವಾಗುವಂತೆ ಮೌಲ್ವಿಗಳು ಮನವಿ ಮಾಡಿದರು. ಈ ವೇಳೆ ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ನೆರವಿಗೆ ನೂರಾರು ಮುಸ್ಲಿಂ ಬಾಂಧವರು ವಿವಿಧಡೆ ದೇಣಿಗೆ ಸಂಗ್ರಹಿಸಿದರು. ಹಬ್ಬದ ನಿಮಿತ್ತ ನಗರದ ವಿವಿಧೆಡೆ ಪಾನೀಯವನ್ನು ವಿತರಿಸಲಾಯಿತು. ನಂತರ ಮನೆಗೆ ಬಂದು ಭೂರಿ ಭೋಜನ ಸವೆದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಮುಸ್ಲಿಂ ಸಂಘಟನೆಗಳ ಮುಖಂಡರು, ಪಾಲಿಕೆಯ 24ನೇ ವಾರ್ಡ್ ಸದಸ್ಯ ಗೋವಿಂದರಾಜುಲು, ಬಿಜೆಪಿ ಮುಖಂಡರಾದ ರಾಮಚಂದ್ರಯ್ಯ, ಶ್ರೀನಿವಾಸಪಾಟೀಲ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಂಡು ಮುಸಲ್ಮಾನ ಬಾಂಧವರನ್ನು ಆಲಿಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು.