ಅಜೆಕಾರು: ಮನೆಗಳಲ್ಲಿ ನಿತ್ಯ ಭಜನಾ ಸಂಕೀರ್ತನೆಗಳಿಂದ ಆರಾಧನೆ ಮಾಡುವುದರಿಂದ ಶೀಘ್ರ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ, ದೇವರನ್ನು ಭಕ್ತಿಯಿಂದ ಆರಾಧಿಸಿ ಎಲ್ಲಿಯವರೆಗೆ ನಂಬಿಕೆ ಇಡುತ್ತೇವೆಯೋ ಅಲ್ಲಿಯವರೆಗೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಗೊಂಡು ಸುದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ನುಡಿದರು.
ಅವರು ಶ್ರೀ ಮಹಾಮ್ಮಾಯಿ ದೇವಸ್ಥಾನ ಹಂಚಿಕಟ್ಟೆ ಎಣ್ಣೆಹೊಳೆ ಇದರ 25ನೇ ವರ್ಷದ ರಜತ ಸಂಭ್ರಮದ ಭಜನ ಮಂಗಲೋತ್ಸವ ಮತ್ತು ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಜ. 27ರಂದು ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಜತ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ ಸುಧಾಕರ ಶೆಟ್ಟಿ ಸೇವಂತಿಗುಡ್ಡೆ ವಹಿಸಿದ್ದರು.
ಸೂರಿಮಣ್ಣು ಸದಾಶಿವ ಉಪಾಧ್ಯಾಯ ಧಾರ್ಮಿಕ ಪ್ರವಚನ ನೀಡಿ ಯುವ ಸಮುದಾಯ ಧಾರ್ಮಿಕತೆ ಮೈಗೂಡಿಸಿಕೊಂಡು ಸುಸಂಸ್ಕೃತರಾಗಿ ಬೆಳೆಯಲು ಇಂತಹ ಭಜನ ಮಂಡಳಿಗಳು ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಸಾಧು ಟಿ. ಶೆಟ್ಟಿ ಎಣ್ಣೆಹೊಳೆ, ರಾಜೇಂದ್ರ ಶೆಟ್ಟಿ ಮುಂಬಯಿ, ಯುನೈಟೆಡ್ ಇನ್ಸುರೆನ್ಸ್ ಕಂಪೆನಿಯ ವಿಭಾಗೀಯ ಅಧಿಕಾರಿ ಶೇಷ ನಾಯ್ಕ, ಎಣ್ಣೆಹೊಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ನಾಯಕ್, ಶುಭಹಾರೈಸಿದರು.
ಸಮ್ಮಾನ: ಶ್ರೀ ಮಹಾಮ್ಮಾಯಿ ಭಜನ ಮಂಡಳಿಯ ಗೌರವಾಧ್ಯಕ್ಷ ವೈ. ಅರುಣ್ ಭಟ್ ದಂಪತಿ ಹಾಗೂ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅವರನ್ನು ಸ್ವಾಮೀಜಿ ಅವರು ಸಮ್ಮಾನಿಸಿದರು. ಈ ಸಂದರ್ಭ ಭಜನ ಮಂಡಳಿಯ ಎಲ್ಲ ಸದಸ್ಯರನ್ನು ಗೌರವಿಸಲಾಯಿತು.
ಧಾರ್ಮಿಕ ಸಭೆಯಲ್ಲಿ ಮರ್ಣೆ ಎಜುಕೇಶನಲ್ ಚಾರಿಟೆಬಲ್ ಟ್ರಸ್ಟ್ (ರಿ.) ಇವರಿಂದ ಮರ್ಣೆ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಶ್ರೀ ಮಹಾಮ್ಮಾಯಿ ಭಜನ ಮಂಡಳಿಯ ಗೌರವಾಧ್ಯಕ್ಷ ವೈ. ಅರುಣ್ ಭಟ್, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಜಂಗಮ ಮಠದ ಆಡಳಿತ ಮೊಕ್ತೇಸರ ಪರಮೇಶ್ವರಯ್ಯ, ಭಜನ ಮಂಡಳಿ ಅಧ್ಯಕ್ಷ ರಾಜೇಂದ್ರ, ದೇಗುಲದ ವ್ಯವಸ್ಥಾಪಕ ಶ್ಯಾಮ ನಾಯ್ಕ ಉಪಸ್ಥಿತರಿದ್ದರು.
ಹರೀಶ್ ನಾಯಕ್ ಪ್ರಸ್ತಾವನೆಗೈದರು. ವೀನಿತ್ ವರದಿ ವಾಚಿಸಿದರು. ಸುಕೇಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಸದಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ಶೆಟ್ಟಿ ವಂದಿಸಿದರು.
ಜಗತ್ತು ನಂಬಿಕೆಯ ಮೇಲೆ ಬದುಕುತ್ತಿದೆ. ಅಧರ್ಮದಿಂದ ಪಾಪ ಪ್ರಾಪ್ತಿಯಾದರೆ ಧರ್ಮದಲ್ಲಿ ನಡೆದಾಗ ಪುಣ್ಯ ಲಭಿಸಿ ಸಮಾಜ ಸನ್ಮಾರ್ಗದಲ್ಲಿ ಬೆಳೆಯುತ್ತದೆ.
–ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ,
ಸುಬ್ರಹ್ಮಣ್ಯ ಮಠ