ಸಂಯೋಗೋಹಿವಿಯೋಗಸ್ಯಸಂಸೂಚಯತಿಸಂಭವಮ್ |
ಅನತಿಕ್ರಮಣೀಯಸ್ಯಜನ್ಮಮೃತ್ಯೋರಿವಾಗಮಮ್ || ಹಿತೋಪದೇಶ ೭೭
ತಪ್ಪಿಸಿಕೊಳ್ಳಲಾರದ ಸಾವಿನ ಆಗಮನವನ್ನು ಹುಟ್ಟು ಸೂಚಿಸುವಂತೆ. ಒಬ್ಬರನ್ನುಇನ್ನೊಬ್ಬರು ಭೇಟಿಯಾಗುವುದು ಪರೋಕ್ಷವಾಗಿ ವಿಯೋಗವನ್ನು ಸೂಚಿಸುತ್ತದೆ. ಎಷ್ಟುಚಂದದ ಮಾತು! ಬದುಕಿಗೆ ಒಂದು ಸಕಾರಾತ್ಮಕವಾದ ಚಿಂತನೆಯನ್ನು ಕೊಡುತ್ತ ಬದುಕನ್ನು ಸ್ವೀಕರಿಸುವ ಬಗೆಯನ್ನು ಹೇಳುವ ಹಿತೋಪದೇಶದ ಈ ಮಾತು ಎಲ್ಲಾ ಕಾಲಕ್ಕೂ ಪ್ರಸ್ತುತ ಮತ್ತು ಇದು ಬದುಕಿಗೆ ಒಂದು ಸುಲಭ ಸೂತ್ರ. ಮನುಷ್ಯನಿಗೆ ಹುಟ್ಟು ಎಂಬ ಆನಂದ ಮತ್ತು ಸಾವು ಎಂಬ ನೋವಿನ ಬಗ್ಗೆ ಗೊತ್ತು. ಸಾವು ಕೊಟ್ಟಷ್ಟು ದುಃಖವನ್ನು ಯಾವುದೂ ಕೊಡಲಿಕ್ಕಿಲ್ಲ. ಹಾಗೆಯೇ ಯೋಚಿಸುತ್ತಾ ಹೋದರೆ ಬದುಕು ಕೂಡಾ ಅಷ್ಟೇ ನೋವನ್ನು ಕೊಡುತ್ತದೆ.
ಅದನ್ನೇ ಅರ್ಥಮಾಡಿಕೊಂಡು, ಜಗತ್ತಿನ ಸತ್ಯವನ್ನು ಅರಿತು ಬಾಳಿದವನಿಗೆ ನೋವಿಲ್ಲ. ನೋವಿದ್ದರೂ ಅವನಿಗೆ ನೋವು ಮತ್ತು ನಲಿವು ಎರಡೂ ಒಂದೇ! ಹುಟ್ಟು ಎಂದ ಕೂಡಲೇ ಸಾವು ಸನ್ನಿಹಿತ ಎಂಬ ಸತ್ಯವನ್ನು ಮೊದಲು ಅರಗಿಸಿಕೊಳ್ಳಬೇಕು. ಅಷ್ಟೇ ಸಹಜವಾಗಿ ಸ್ವೀಕರಿಸಬೇಕು. ಈ ಹುಟ್ಟು ಕೂಡಾ ಅಷ್ಟೇ ಎಲ್ಲವನ್ನೂ ಕಳೆದುಕೊಳ್ಳುವದಕ್ಕೆ ಬೆಳೆಯುತ್ತಾ ಹೋಗುತ್ತದೆ.
ನಿಧಾನವಾಗಿ ಬಾಲ್ಯ, ಯೌವ್ವನ, ಮುದಿತನ, ಮುಗ್ಧತೆ, ಸ್ನೇಹ, ಪ್ರೀತಿ, ದ್ವೇಷ ಎಲ್ಲವನ್ನೂ ಕಳೆದುಕೊಳ್ಳುತ್ತಾ, ಸಂಪತ್ತು, ಆನಂದ, ಅಂತಸ್ತು ಹೀಗೆ ಪಡೆದದ್ದನ್ನು ಕಳಕೊಳ್ಳುತ್ತ, ನಲಿವನ್ನೂ ನೋವನ್ನು ಒಂದರ ಜೊತೆಗೆ ಒಂದರಂತೆ ಪಡೆಯುತ್ತಾ ಕೆಳೆದುಕೊಳ್ಳುತ್ತ ಸಾಗುವುದು. ಬದುಕಿನ ಪ್ರತಿಕ್ಷಣವೂ ಹುಟ್ಟು ಮತ್ತು ಸಾವಿನ ರೂಪಗಳೇ! ಇದು ಹುಟ್ಟಿನ ನಿಜವಾದ ಗುಟ್ಟು ಮತ್ತು ಸಾವಿನ ಸತ್ಯ. ಆದರೆ ಸಾವಿಗೆ ಹುಟ್ಟಿಗೆ ಎರಡಕ್ಕೂ ಇದೇ ದಿನ, ಗಳಿಗೆ, ವಾರ, ತಿಥಿ ಅಂತ ಇಲ್ಲ!
ಇನ್ನು ಭೇಟಿಯ ವಿಷಯ;
ಬದುಕಿನ ಹಾದಿ. ಕಾಡಲ್ಲಿ ಹೊರಟವನಿಗೆ ಕಾಡಿನ ಹಣ್ಣುಗಳು ಕೊಡುವ ಒಂದಿಷ್ಟು ಹಿತದಂತೆ. ಎಲ್ಲೋ ಒಂದು ಒಂದಷ್ಟು ದಿನದ ಪ್ರೀತಿ, ಒಲವು, ಅವಲಂಬನೆ, ಅಗತ್ಯತೆ ಮತ್ತು ಅನಿವಾರ್ಯತೆ. ಇವನ್ನೆಲ್ಲ ಬಿಟ್ಟು ಹೊರಟವನು ಧೀರ ಮತ್ತು ಸಾವನ್ನು ಗೆದ್ದವ. ಒಂದಷ್ಟು ಕಳೆದುಕೊಳ್ಳುವುದೂ ಒಂದು ಬಗೆಯ ನೋವು ಮತ್ತು ನಲಿವು!
ಬದುಕಿನ ಕ್ಷಣಗಳು ಕೆಲವೊಮ್ಮೆ ಅಗತ್ಯವಾಗಿ ಯಾವುದೋ ವ್ಯಕ್ತಿಯನ್ನು ಭೇಟಿಯಾಗುವಂತೆ ಮಾಡುತ್ತವೆ. ಹಾಗೆ ಭೇಟಿಯಾದ ವ್ಯಕ್ತಿ ಅಥವಾ ಶಕ್ತಿ ಒಂದಲ್ಲ ಒಂದು ದಿನ ನಮ್ಮನ್ನು ಬಿಟ್ಟು ಹೋಗುವ ಅಥವಾ ನಾವೇ ಬಿಟ್ಟು ಹೊರಡುವ ಕಾಲ ಬಂದೇ ಬರುತ್ತದೆ. ಭೇಟಿಯಾದ ತಕ್ಷಣವೇ ವಿಯೋಗದ ಬಗ್ಗೆ ಯೋಚನೆ ಇಟ್ಟುಕೊಂಡಿರಬೇಕು. ವಿಯೋಗವನ್ನು ಧೈರ್ಯದಿಂದ ಇದಿರಿಸುವ ಮತ್ತು ಇನ್ನೊಂದು ಹೊಸ ಭೇಟಿಗೆ, ಅದೇ ಭೇಟಿಯ ಅಗಲುವಿಕೆಗೆ ಮನಸ್ಸು ಸದಾ ಸಿದ್ಧವಾಗಿರಬೇಕು. ಕೆಲವೊಮ್ಮೆ ವಿಯೋಗದ ಭಯ ಅಥವಾ ಅತಿಯಾದ ವ್ಯಾಮೋಹ ನಮ್ಮ ಬೆಳವಣಿಗೆಯನ್ನೂ ಕುಂಠಿತಗೊಳಿಸುತ್ತದೆ. ಜೀವನದ ಆಗು ಹೋಗುಗಳ ಒಳಾರ್ಥವನ್ನುತಿಳಿದುಕೊಂಡು, ಯೋಚಿಸಿ ಮುಂದುವರಿದರೆ ಮುಂದಿನ ಪರಿಣಾಮಕ್ಕೆ ನಾವು ವಿಚಲಿತರಾಗದೆ, ಆನಂದದಿಂದ ಸ್ವೀಕರಿಸುವ ಮನಸ್ಸನ್ನು ಹೊಂದಬಹುದು. ಹೀಗೆ ವಿಯೋಗ ಕೂಡಾ ಒಂದು ಅನಿವಾರ್ಯ ಸುಖ! ಬೆಳಕಿನ ಅಗತ್ಯವಿರುವ ಕತ್ತಲೆಯನ್ನು ಹಣತೆ ಹಿಡಿದು ಬೆಳಗಿಸಲು ಹೊರಟರೆ ಕೈಸುಡುವ ತನಕ ಬೆಳಗಬಹುದು ಅಷ್ಟೆ. ಸುತ್ತುವ ಬದುಕು, ತಿರುಗುವ ಭೂಮಿ ಹಗಲನ್ನೂ ಕತ್ತಲೆಯನ್ನೂತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ . ಈ ಪರಿಧಿಯಲ್ಲಿ ಶಾಶ್ವತವಾಗಿ ಉಳಿಯುವುದು ಮತ್ತು ಬೆಳೆಯುವುದು ವಿಯೋಗ ಮತ್ತು ಹುಟ್ಟನ್ನು ಅಪ್ಪಿಕೊಳ್ಳುವ ಸಾವು.
ವಿಷ್ಣು ಭಟ್ ಹೊಸ್ಮನೆ.