ಸಮುದ್ರ ಗರ್ಭ ಸೇರಿದ ದ್ವಾರಕೆ ಮತ್ತೆಂದೂ ಕಾಣಿಸಿಕೊಳ್ಳಲಿಲ್ಲ. ಆದರೆ ದ್ವಾರಕೆಗೆ ಸೇರಿದ್ದ ಒಂದು ಭಾಗ (ಬೇಟ್ ದ್ವಾರಕಾ) ಇನ್ನೂ ಉಳಿದಿತ್ತು. ಕಾಲಾಂತರದಲ್ಲಿ ಗೋಮತೀ ನದಿ ಸಮುದ್ರ ಸೇರುವ ಭಾಗದಲ್ಲಿ ಹೊಸದೊಂದು ದ್ವಾರಕಾ ಪಟ್ಟಣ ಹುಟ್ಟಿ ಬೆಳೆದಿತ್ತು.
ಪ್ರಾಚೀನ ಗ್ರೀಕರ ಬರಹಗಳಲ್ಲಿ ದ್ವಾರಕೆಯನ್ನು ಬಾರಕೆ ಎಂದು ಉಲ್ಲೇಖಿಸಲಾಗಿದೆ. ಇಲ್ಲಿನ ಬಂದರಿನ ಜೊತೆಗೆ ಗ್ರೀಕರ ವಾಣಿಜ್ಯ ಸಂಬಂಧ ಇತ್ತು.
ಆರ್ಯರ ಕಾಲದಲ್ಲಿ ಸೌರಾಷ್ಟ ದೇಶದ ರಾಜಧಾನಿ ದ್ವಾರಕೆ ಆಗಿತ್ತು ಎನ್ನುತ್ತಾರೆ.
ವಲ್ಲಭಿ ರಾಜ್ಯದ ಮೈತ್ರಕ ವಂಶದ ಮಂತ್ರಿ ಸಿಂಹಾದಿತ್ಯ ಬರೆಸಿದ್ದ ಕ್ರಿ.ಪೂ.574ನೆಯ ಕಾಲದ ತಾಮ್ರ ಶಾಸನ ಇಲ್ಲಿ ದೊರೆತಿದೆ. ಅದರ ಪ್ರಕಾರ ಬೇಟ್ ದ್ವಾರಕಾ ದ್ವೀಪ ಒಂದು ಧಾರ್ಮಿಕ ತೀರ್ಥಕ್ಷೇತ್ರವಾಗಿತ್ತು.
ದ್ವಾರಕೆಯಲ್ಲಿ ಹರಪ್ಪಾ ನಾಗರೀಕತೆಯ ಕೊನೆಗಾಲದ ಅವಶೇಷಗಳು ಸಿಕ್ಕಿವೆ. ಇದರ ಕಾಲ ಸುಮಾರು ಕ್ರಿಸ್ತ ಪೂರ್ವ 1570 ಎಂದು ಗುರುತಿಸಲಾಗಿದೆ.
ಶಿಲಾಬರಹಗಳು ಮತ್ತು ದೇವಾಲಯದ ದಾಖಲೆಗಳ ಪ್ರಕಾರ ದ್ವಾರಕೆಯ ಐತಿಹಾಸಿಕ ಘಟನೆಗಳು ಹೀಗಿವೆ:
ಕ್ರಿಸ್ತಪೂರ್ವ 400: ವಜ್ರನಾಭ ತನ್ನ ಪೂರ್ವಜರ ನೆನಪಿನಲ್ಲಿ ಹರಿಮಂದಿರದ ಪೂರ್ವಕ್ಕೆ ಛತ್ರಿಯ ಆಕೃತಿಯಲ್ಲಿ ಸ್ಮಾರಕ ನಿರ್ಮಿಸಿದ್ದ.
ಕ್ರಿಸ್ತ ಪೂರ್ವ 100: ಹರಿಮಂದಿರದ ಮೊದಲ ಮಾಳಿಗೆಯಲ್ಲಿರುವ ಬ್ರಾಹ್ಮೀ ಲಿಪಿಯ ಮೊದಲ ಮಾಳಿಗೆಯಲ್ಲಿರುವ ಬ್ರಾಹ್ಮೀ ಲಿಪಿಯ ಶಿಲಾಬರಹದ ಪ್ರಕಾರ ಈ ಭಾಗವನ್ನು ಕ್ರಿಸ್ತಪೂರ್ವದ 100ರ ಕಾಲದಲ್ಲಿ ನವೀಕರಣ ಮಾಡಲಾಗಿತ್ತು.
ಕ್ರಿ.ಸ್ತ ಪೂರ್ವ 200: ಕ್ರಿ.ಶ.200ರ ಕಾಲದಲ್ಲಿ ದ್ವಾರಕೆಯ ರಾಜ ಎರಡನೆಯ ವಾಸುದೇವ ಮಹಾಕ್ಷತ್ರಿಯ ರುದ್ರ ದಮನನ ಕೈಯಲ್ಲಿ ಸೋಲಪ್ಪಿದ. ರುದ್ರ ದಮನ ಮೃತ್ಯುವಿನ ತರುವಾಯ ರಾಣಿ ಧೀರಾದೇವಿ ವಾಸುದೇವನ ಸೋದರ ಪುಲುಮಾವಿಯನ್ನು ಮಂತ್ರಿಯಾಗಿ ಆಹ್ವಾನಿಸಿದ್ದಳು. ಮುಂದೆ ರುದ್ರದಮ ವೈಷ್ಣವ ಧರ್ಮವನ್ನು ಸ್ವೀಕರಿಸಿ ಶ್ರೀಕೃಷ್ಣನನ್ನು ದ್ವಾರಕೆಯಲ್ಲಿ ಆರಾಧಿಸಿದ್ದ.
ಕ್ರಿ.ಶ.800: ಆದಿಗುರು ಶಂಕರಾಚಾರ್ಯರು ದ್ವಾರಕಾಧೀಶ ದೇವಾಲಯವನ್ನು ನವೀಕರಿಸಿ, ನಾಲ್ಕನೆಯ ಮಾಳಿಗೆಯಲ್ಲಿ ಆದಿಶಕ್ತಿಯನ್ನು ಪ್ರತಿಷ್ಠಾಷಿಸಿದ್ದರು.
ಕ್ರಿ.ಶ.885: ಪಠಾಣ್ ನಲ್ಲಿ ವೇದಶಾಸ್ತ್ರ ಮೀಮಾಂಸೆಯಲ್ಲಿ ಬೃಹಸ್ಪತಿ ಗುರುವನ್ನು ಸೋಲಿಸಿದ್ದ ಶ್ರೀ ನೃಸಿಂಹಶರ್ಮ ಜಗದ್ಗುರು ಶಂಕರಾಚಾರ್ಯರ ಪೀಠದ ಮುಖ್ಯಸ್ಥನಾಗಿ ದೇವಾಲಯವನ್ನು ನವೀಕರಿಸಿದ್ದರು.
ಕ್ರಿ.ಶ:1120: ಮಿನಾಲ್ ದೇವಿ ದ್ವಾರಕೆಗೆ ಬಂದು ದೇವಾಲಯವನ್ನು ನವೀಕರಿಸಿದ್ದಳು.
ಕ್ರಿ.ಶ:1156: ವಿಜಯಾನಂದ ಬೋದನಾ ಎಂಬಾತ ದ್ವಾರಕೆಯಿಂದ ಶ್ರೀಕೃಷ್ಣನ ಮೂರ್ತಿಯನ್ನು ಒಯ್ದಿದ್ದ. ಮುಂದೆ ಉದಯಪುರದ ರಾಣಾ ದ್ವಾರಕೆಗೆ ಬಂದಾಗ ಶ್ರೀಕೃಷ್ಣನ ಮೂರ್ತಿ ಪವಾಡಸದೃಶವಾಗಿ ದ್ವಾರಕಾಧೀಶ ದೇವಾಲಯದಲ್ಲಿತ್ತು.
ಕ್ರಿ.ಶ.1162: ಉದಯಪುರದ ರಾಣಾ ಭೀಮಸಿಂಹ ದ್ವಾರಕೆಗೆ 7000 ಬೀಘಾ ಭೂಮಿಯನ್ನು ದತ್ತಿ ನೀಡಿದ್ದ.
ಕ್ರಿ.ಶ.1241: ಮೊಹಮ್ಮದ್ ಶಾ ದ್ವಾರಕೆಯ ಮೇಲೆ ದಾಳಿ ನಡೆಸಿ, ದೇವಾಲಯವನ್ನು ಒಡೆದುಹಾಕಿದ್ದ. ಐವರು ಬ್ರಾಹ್ಮಣರು ಅವನ ಸೈನ್ಯದ ವಿರುದ್ಧ ಹೋರಾಡಿ ವೀರಮರಣ ಪಡೆದಿದ್ದರು.
ಕ್ರಿ.ಶ.1250:ಗುರ್ಜರ ಕವಿ ಸೋಮೇಶ್ವರನ ತನ್ನ ಉಲ್ಲಾಘರಾವು ಎಂಬ ನಾಟಕವನ್ನು ಶ್ರೀ ದ್ವಾರಕಾಧೀಶನ ಮುಂದೆ ಆಡಿಸಿ, ಭಗವಂತನಿಗೆ ಸಮರ್ಪಣೆ ಮಾಡಿದ್ದ.
ಕ್ರಿ.ಶ.1345: ದೇವಾಲಯದ ಅಬೋಟಿಯಾ ಮತ್ತು ಮೀನ್ ಸಮುದಾಯದ ವ್ಯವಸ್ಥಾಪಕರ ನಡುವೆ ಆದಾಯದ ಹಂಚಿಕೆಯ ಬಗ್ಗೆ ಯುದ್ದ ನಡೆದಿತ್ತು.
ಕ್ರಿ.ಶ.1473: ಗುಜರಾತ್ ನ ಸುಲ್ತಾನ ಮೊಹಮ್ಮದ್ ಬೇಗಡಾ ದ್ವಾರಕೆಯ ಮೇಲೆ ದಾಳಿ ಮಾಡಿ ಮಂದಿರವನ್ನು ಹಾಳುಗೆಡವಿದ್ದ. ದೇವಾಲಯದ ಮೂರ್ತಿ ಅವನ ಕೈಗೆ ಸಿಗದಂತೆ ಪೂಜಾರಿಗಳು ಅದನ್ನೊಯ್ದು ಸಾವಿತ್ರಿ ವಾವ್ ಎಂಬ ಬಾವಿಯಲ್ಲಿ ಅಡಗಿಸಿಟ್ಟಿದ್ದರು. ಆ ಬಳಿಕ ಮೂರ್ತಿ ನಾಪತ್ತೆಯಾಗಿತ್ತು.
ಕ್ರಿ.ಶ.1504: ಶುದ್ಧಾ ದ್ವೈತ ದಾರ್ಶನಿಕ ಸಿದ್ದಾಂತದ ಪ್ರಚಾರಕರಾಗಿದ್ದ ಶ್ರೀ ವಲ್ಲಭಾಚಾರ್ಯರಿಗೆ ಶ್ರೀಕೃಷ್ಣನ ಮೂರ್ತಿ ಸಿಕ್ಕಿತು. ಅವರು ಅದನ್ನು ಲಾಡ್ವಾ ಎಂಬ ಹಳ್ಳಿಯ ಖಾಲೀ ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಿದ್ದರು.
ಕ್ರಿ.ಶ.1551:ಅಜೀಬ್ ಎಂಬ ತುರುಕ ದಾಳಿಕೋರರ ದ್ವಾರಕೆಗೆ ನುಗ್ಗಿದಾಗ ಮೂರ್ತಿಯನ್ನು ಲಾಡ್ಡಾದಿಂದ ಬೇಟ್ ದ್ವಾರಕ್ಕೆ ಒಯ್ಯಲಾಗಿತ್ತು.
ಕ್ರಿ.ಶ.557: ಅಬೋಟಿ ಮತ್ತು ಗುಗ್ಲಿ ಪೂಜಾರಿಗಳು ನಡುವಿನ ವಿವಾದವನ್ನು ಪರಿಹರಿಸಿದ್ದ ಶ್ರೀ ವಿಠಲ್ ನಾಥಜೀ ಅವರ ಆದಾಯದ ಹಂಚಿಕೆಯನ್ನು ನಿರ್ಧರಿಸಿ ತಾಮ್ರಪತ್ರದಲ್ಲಿ ದಾಖಲಿಸಿದ್ದರು.
ಕ್ರಿ.ಶ.1559: ಶಂಕರಾಚಾರ್ಯ ಶ್ರೀ ಅನಿರುದ್ದಶರ್ಮ ಶ್ರೀ ಕೃಷ್ಣನ ಮೂರ್ತಿಯನ್ನು ಸ್ಥಳಾಂತರಿಸಿ, ದೇವಾಲಯದ ಪುನನಿರ್ಮಾಣ ಮಾಡಿದ್ದರು.
ಕ್ರಿ.ಶ.1730: ಲಾಖಾ ಠಾಕೂರ್ ದೇವಾಲಯದಲ್ಲಿ ಮಹಾಯಜ್ಞ ನಡೆಸಿ, ದೇವಾಲಯದ ನವೀಕರಣ ನಡೆಸಿದ್ದರು. ಓಖಾಮಂಡಲದ ವಾಘೇರ್ ದೊರೆ ಮಾಪ ಬ್ರಾಹ್ಮಣರ ಮೇಲಿನ ತೆರಿಗೆಯನ್ನು ಅರ್ಧಕ್ಕೆ ತಗ್ಗಿಸಿದ.
ಕ್ರಿ.ಶ.1858: ಓಖಾಮಂಡಲದ ವಾಘೇರ್ ಸಮುದಾಯ ಬ್ರಿಟಿಷರ ವಿರುದ್ಧ ತಲೆಯೆತ್ತಿ, ಇಲ್ಲಿಂದ ಬ್ರಿಟಿಷರನ್ನು ಬುಡ ಕೀಳಿಸಿದ್ದರು.
ಕ್ರಿ.ಶ.1859: ಸೆಪ್ಟೆಂಬರ್ 1859ರಲ್ಲಿ ಬ್ರಿಟಿಷರು, ಗಾಯಕ್ ವಾಡ್ ಮತ್ತು ಇತರ ಸ್ಥಾನೀಯರ ರಾಜರ ದಂಡು ವಾಘೇರ್ ಗಳನ್ನು ಮಣಿಸಿ ಓಖಾಮಂಡಲವನ್ನು ಮರುವಶಪಡಿಸಿಕೊಂಡಿದ್ದರು. ದ್ವಾರಕೆ ಮತ್ತು ಓಖಾಮಂಡಲ ಪ್ರದೇಶದ ಆಡಳಿತ ಬರೋಡಾದ ಗಾಯಕ್ ವಾಡ್ ರಾಜರ ಕೈ ಸೇರಿತು.
ಕ್ರಿ.ಶ.1861: ಮಹಾರಾಜಾ ಖಂಡೇರಾವ್ ದ್ವಾರಕಾಧೀಶ ಮಂದಿರವನ್ನು ನವೀಕರಿಸಿದರು. ವಾಘೇರ್ ಯುದ್ಧದಲ್ಲಿ ಭಗ್ನವಾಗಿದ್ದ ದೇವಾಲಯದ ಶಿಖರವನ್ನು ಬ್ರಿಟಿಷರು ದುರಸ್ತಿ ಮಾಡಿದ್ದರು.
ಕ್ರಿ.ಶ.1903: ಬರೋಡಾದ ಗಾಯಕ್ ವಾಡ್ ಮಹಾರಾಜ 1958ರಲ್ಲಿ ಮಂದಿರದ ಶಿಖರಕ್ಕೆ ಬಂಗಾರದ ಹೊದಿಕೆ ಕಾಣಿಕೆ ಕೊಟ್ಟಿದ್ದರು.
ಕ್ರಿ.ಶ.1960:ಮಂದಿರದ ಆಡಳಿತವನ್ನು ಭಾರತ ಸರಕಾರ ಕೈಗೆತ್ತಿಕೊಂಡಿತು.
ಕ್ರಿ.ಶ.1965: ಪಾಕಿಸ್ತಾನೀ ನೌಕಾಪಡೆ ದ್ವಾರಕೆಯ ದೇವಾಲಯಗಳ ಮೇಲೆ ಆಕ್ರಮಣದ ವಿಫಲ ಯತ್ನ ಮಾಡಿತ್ತು.