Home ಧಾರ್ಮಿಕ ಸುದ್ದಿ ಭಕ್ತರ ಹೃದಯಮಂದಿರದಲ್ಲಿ ಕೃಷ್ಣ-ಸಂಕಲ್ಪ ಸಾಕಾರ

ಭಕ್ತರ ಹೃದಯಮಂದಿರದಲ್ಲಿ ಕೃಷ್ಣ-ಸಂಕಲ್ಪ ಸಾಕಾರ

ಶ್ರೀಕೃಷ್ಣಪೂಜೆ ನೇರ ಪ್ರಸಾರಕ್ಕೆ ಚಾಲನೆ ನೀಡಿ ಪರ್ಯಾಯ ಶ್ರೀ

1346
0
SHARE

ಉಡುಪಿ: ಉಡುಪಿ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆ ಮಾಡುವಾಗ ಮುರಳೀಲೋಲ ಕೇವಲ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಬೇಕೆಂಬುದು ಮಾತ್ರವೇ ಮಧ್ವಾಚಾರ್ಯರ ಉದ್ದೇಶ ವಾಗಿರಲಿಲ್ಲ. ಭಗವದ್ಭಕ್ತರ ಹೃದಯಮಂದಿರದಲ್ಲಿಯೂ ಪ್ರತಿಷ್ಠಾಪನೆಯಾಗಬೇಕು ಎಂಬುದು ಸಂಕಲ್ಪವಾಗಿತ್ತು. ಈಗ ಶ್ರೀಕೃಷ್ಣ ಪೂಜೆಯ ನೇರ ಪ್ರಸಾರದಿಂದಾಗಿ ಆಚಾರ್ಯರ ಸಂಕಲ್ಪ ಸಾಕಾರವಾದಂತೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಪಾದರು ನಡೆಸುವ ಶ್ರೀಕೃಷ್ಣನ ದೈನಂದಿನ ಪ್ರಾತಃಕಾಲ ಪೂಜೆಯ ನೇರಪ್ರಸಾರ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ
ಅವರು ಆಶೀರ್ವಚನ ನೀಡಿದರು. ಕೃಷ್ಣನ ಪೂಜೆಯನ್ನು ನೇರ ಪ್ರಸಾರ ಮಾಡುವಂತೆ ರಾಜಾಂಗಣದಲ್ಲಿ ಜರಗುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಗಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು. ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ನೇರ ಪ್ರಸಾರ ದಿಂದ ಮನೆ ಮನೆಗಳಲ್ಲಿ ಕೃಷ್ಣದೇವರ ಅನುಸಂಧಾನ ಸಾಧ್ಯವಾದಂತಾಗಿದೆ ಎಂದು ಹೇಳಿದರು.

ಈಗಿನ ಪರ್ಯಾಯ ಶ್ರೀಗಳು ಹಿಂದಿನ ಬಾರಿ ಪರ್ಯಾಯ ಪೀಠದಲ್ಲಿದ್ದಾಗ ಆರಂಭಿಸಿದ್ದ ಚಿಣ್ಣರ ಸಂತರ್ಪಣೆ ಅನಂತರ ಇಡೀ ರಾಜ್ಯ, ದೇಶಕ್ಕೆ ವಿಸ್ತರಣೆಯಾಯಿತು. ಪುತ್ತಿಗೆ ಶ್ರೀ
ಸುಗಣೇಂದ್ರತೀರ್ಥರ ‘ಸ್ವಚ್ಛ ಉಡುಪಿ ಸುಂದರ ಉಡುಪಿ’ ಪರಿಕಲ್ಪನೆ ಸರಕಾರದ ಮೂಲಕ ಸಾಕಾರವಾಯಿತು. ಶ್ರೀಗಳ ಆಶಯದಂತೆ ಸಮಾಜಮುಖೀ ಕೆಲಸಗಳಿಗೆ ಸಹಕಾರ ನೀಡಲಾಗುವುದು ಎಂದು ಮುಖ್ಯ ಅತಿಥಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥರು, ಉದ್ಯಮಿ ಭುವನೇಂದ್ರ ಕಿದಿಯೂರು, ಡೆನ್‌ ನೆಟ್‌ವರ್ಕ್‌ನ ನಿರ್ದೇಶಕ ಎರಿಕ್‌ ಸಲ್ದಾನ, ಸಂಪರ್ಕ್‌ ಇನ್ಫೋದ ತಾಂತ್ರಿಕ ವಿಭಾಗದ ಮುಖ್ಯಸ್ಥ ರೋನಿ ಫೆರ್ನಾಂಡಿಸ್‌ ಉಪಸ್ಥಿತರಿದ್ದರು. ಸಿ4ಯುನ ಪಾಲುದಾರ ಕಿರಣ್‌ ಕುಮಾರ್‌ ಪ್ರಾಸ್ತಾವಿಸಿದರು. ಪತ್ರಕರ್ತ ನಾಗರಾಜ ರಾವ್‌ ನಿರ್ವಹಿಸಿದರು.

ಕಿಂಡಿ ಉಳಿಸಲು ಶ್ರೀಕೃಷ್ಣನ ಉಪಾಯ!
ಕನಕನ ಕಿಂಡಿಯ ಮೂಲಕ ಕೃಷ್ಣನನ್ನು ನೋಡಿದರೆ ಸರಿಯಾಗಿ ಕಾಣುವುದಿಲ್ಲ ಎಂದು ಅನೇಕ ಮಂದಿ ನನಗೆ ಲಿಖೀತವಾಗಿ ಆಕ್ಷೇಪ ಕೊಟ್ಟಿದ್ದರು. ಒಂದು ವೇಳೆ ನಾನು ಆ ಕಿಂಡಿ ಇಟ್ಟಿದ್ದರೆ ತೆಗೆಯುವ ಹಕ್ಕು ಇದೆ. ಆದರೆ ಅದು ಕನಕದಾಸರ ಭಕ್ತಿಗೆ ಒಲಿದು ಆದ ಕಿಂಡಿ. ಇದನ್ನು ತೆಗೆಯಬಾರದೆಂದೇ ಶ್ರೀಕೃಷ್ಣ ನೇರಪ್ರಸಾರದ ಮೂಲಕ ಮನೆಯಲ್ಲಿ ನೋಡುವ ಹಾದಿ ತೋರಿಸಿದ್ದಾನೆ.
– ಶ್ರೀ ವಿದ್ಯಾಧೀಶ
ತೀರ್ಥ ಶ್ರೀಪಾದರು,ಪರ್ಯಾಯ
ಶ್ರೀ ಪಲಿಮಾರು ಮಠಾಧೀಶರು

LEAVE A REPLY

Please enter your comment!
Please enter your name here