ಪುಂಜಾಲಕಟ್ಟೆ : ಬಂಟ್ವಾಳ ತಾ| ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಮಾ. 21ರಿಂದ ಮಾ.26ರ ವರೆಗೆ ನಡೆಯಲಿರುವ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಬೆಳಗ್ಗೆ ಪ್ರ.ಅರ್ಚಕ ವೇ| ಮೂ| ನಟರಾಜ ಉಪಾಧ್ಯಾಯ ಸಹಕಾರದಲ್ಲಿ ತೋರಣ ಮುಹೂರ್ತ, ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ಬಾಳ್ತಬೈಲು ಜನಾರ್ದನ ಆಚಾರ್ಯ ಮತ್ತು ಮುಚ್ಲೋಡಿ ಸೂರ್ಯಹಾಸ ಆಚಾರ್ಯ ಅವರ ವತಿಯಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಕಾರಿಂಜಬೈಲು, ಬಾಳ್ತಬೈಲು, ಮುಚ್ಲೋಡಿಯಿಂದ ಸಂಗ್ರಹಿತ ಹಸಿರು ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಸಾಗಿಸಿ ಉಗ್ರಾಣಕ್ಕೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಋತ್ವಿಜರ ಆಗಮನ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಪಚ್ಚಾಜೆ ಗುತ್ತು, ಗ್ರಾಮಣಿಗಳಾದ ವೆಂಕಟರಾಜ ಎಳಚಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರಾದ ಸಮಿತಿ ಸದಸ್ಯರಾದ ಮಾಣಿಕ್ಯರಾಜ್ ಜೈನ್, ಧನಂಜಯ ಹೆಗ್ಡೆ, ಸುರೇಶ್ ಪೂಜಾರಿ ವಗ್ಗ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಾಳ್ತಬೈಲ್, ಸದಾಶಿವ ಪ್ರಭು, ಕೃಷ್ಣಪ್ಪ ಗೌಡ ತಾಳಿತ್ತೂಟ್ಟು, ವಿಶ್ವನಾಥ ಪೂಜಾರಿ ಪೀರ್ಯ, ವೆಂಕಪ್ಪ ನಾಯ್ಕ ಕಾರಿಂಜಬೈಲ್, ವ್ಯವಸ್ಥಾಪಕ ಸತೀಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಇಂದು ಸುತ್ತು ಗೋಪುರ ಉದ್ಘಾಟನೆ
ಮಾ. 22ರಂದು ಶ್ರೀ ಪಾರ್ವತಿ ಸನ್ನಿಧಿಯ ಸುತ್ತುಗೋಪುರವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿರುವರು. ಅರಣ್ಯ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿರುವರು. ಶ್ರೀ ಪಾರ್ವತಿ ಸನ್ನಿಧಿಯಲ್ಲಿ 108 ಗಣಪತಿ ಯಾಗ, ತ್ರಿಮಧುರ ಕದಳಿಯಾಗ, ಸಂಜೆ ಮಹಾಸುದರ್ಶನ ಯಾಗ, ಅರಣಿ ಮಥನ ನಡೆಯಲಿದೆ. ಈಶ್ವರ ಸನ್ನಿಧಿಯಲ್ಲಿ ಗಣಪತಿ ಯಾಗ, ರುದ್ರಯಾಗ, ರಾತ್ರಿ ತುಳುನಾಟಕ ಪ್ರದರ್ಶನವಿದೆ.