ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ನಿರ್ಮಾಣಗೊಂಡಿದ್ದು, ಬ್ರಹ್ಮರಥವನ್ನು ಶ್ರೀಕ್ಷೇತ್ರಕ್ಕೆ ಮೆರವಣಿಗೆ ಮೂಲಕ ಸಾಗಾಟ ಕಾರ್ಯಕ್ರಮಕ್ಕೆ ಮೂಡುಬಿದಿರೆ ಅಶ್ವತ್ಥಪುರದಲ್ಲಿ ಬುಧವಾರ ಚಾಲನೆ ನೀಡಲಾಯಿತು. ಅಶ್ವತ್ಥಪುರದಿಂದ ಬೆಳಗ್ಗೆ ಬ್ರಹ್ಮರಥ ಸಾಗಾಟಕ್ಕೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಮೋಹನ್ ಆಳ್ವ ಅವರು ಚಾಲನೆ ನೀಡಿದರು.
ಮಾಜಿ ಜಿ.ಪಂ. ಸದಸ್ಯ ಜಗದೀಶ ಅಧಿಕಾರಿ, ಜಿ.ಪಂ. ಸದಸ್ಯ ಪದ್ಮಶೇಖರ ಜೈನ್, ಬಾರ್ದಡ್ಗುತ್ತು ಮನೆತನದ ರಾಜವೀರ ಜೈನ್, ಕಕ್ಯಪದವು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್, ಪದಾಧಿಕಾರಿ ಗಳಾದ ಕೆ. ಮಾಯಿಲಪ್ಪ ಸಾಲ್ಯಾನ್, ವಿಶ್ವನಾಥ ಸಾಲ್ಯಾನ್ ಬಿತ್ತ, ಮ್ಯಾನೇಜರ್ ವೀರೇಂದ್ರ ಕುಮಾರ್ ಜೈನ್, ಡೀಕಯ ಕುಲಾಲ್, ಉತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ, ಶಿವಾಜಿ ಫ್ರೆಂಡ್ಸ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸದಸ್ಯರು, ಅರುಣೋದಯ ಯುವಕ ಮಂಡಲದ ಸದಸ್ಯರು ಭಾಗವಹಿಸಿದ್ದರು. ಬಳಿಕ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿ ವಾಹನ ಜಾಥಾವನ್ನು ಸ್ವಾಗತಿಸಿ, ಕಲ್ಲೇರಿಯಿಂದ ವಿವಿಧ ವಾಹನಗಳ ಸಹಿತ ಬ್ಯಾಂಡ್, ವಾದ್ಯ, ಚೆಂಡೆ, ಕಹಳೆಯೊಂದಿಗೆ ಶ್ರೀ ಕ್ಷೇತ್ರದವರೆಗೆ ಮೆರವಣಿಗೆ ನಡೆಯಿತು.