ಮೂಲ್ಕಿ : ಭಾರತದ ಮೂಲ ಸಂಸ್ಕೃತಿ ಕೃಷಿಯಾಗಿದೆ. ಈಗ ನಾವೆಲ್ಲ ಅದನ್ನು ಮರೆತಿದ್ದೇವೆ. ಪರಿಸರ ಮಾಲಿನ್ಯ ಮಿತಿ ಮೀರುತ್ತಿದೆ. ಮತ್ತೂಮ್ಮೆ ಎಲ್ಲೆಡೆ ಕೃಷಿ ಸಂಸ್ಕೃತಿ ಜಾಗೃತಿಗೊಳ್ಳಬೇಕು. ಆಗ ಮಾತ್ರ ದೇಶ, ಊರು ಅಭಿವೃದ್ಧಿಯಾಗಿ ಸುಸ್ಥಿರ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಕೇಮಾರು ಸಾಂದೀಪಿನಿ ಮಠದ ಶ್ರೀ ಈಶ ವಿಠಲ ಸ್ವಾಮೀಜಿ ಹೇಳಿದರು.
300 ವರ್ಷಗಳಿಂದ ಜೀರ್ಣ ಸ್ಥಿತಿಯಲ್ಲಿದ್ದ ಕಿಲ್ಪಾಡಿಯ ಆದಿಕಿಲ್ಲಾಡಿ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ, ಪ್ರತಿಷ್ಠೆ, ಕಲಶಾಭಿಷೇಕ ಸಂದರ್ಭದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕ ಕ್ಷೇತ್ರಗಳಲ್ಲಿ ಜ್ಞಾನಸತ್ರ ನಡೆಯಬೇಕು. ಜ್ಞಾನದಿಂದ ಅರಿವು ಹೊಂದಲು ಸಾಧ್ಯ. ಇದರಿಂದ ಮೂಢನಂಬಿಕೆ ತೊಲಗಿ ಅಭಿವೃದ್ಧಿ ಹೊಂದಲು ಸಾಧ್ಯ.ಇಂದು ನಮಗೆ ರೈತರು, ಯೋಧರು ಮಾದರಿ ವ್ಯಕ್ತಿಗಳಾಗಬೇಕು. ನಿಜವಾದ ಪರಿಸರ ಪ್ರೇಮವನ್ನು ರೈತ ಹೊಂದಿದ್ದರೆ, ದೇಶ ಪ್ರೇಮವನ್ನು ಯೋಧ ಹೊಂದಿದ್ದಾನೆ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಧಾರ್ಮಿಕ ಸಭೆಯನ್ನು ಉದ್ಘಾಟಿಸಿದರು. ದೈವಸ್ಥಾನ -ದೇವಸ್ಥಾನಗಳು ಊರಿನ ಒಗ್ಗಟ್ಟನ್ನು ಉಳಿಸುತ್ತವೆ. ಜತೆಗೆ ಸಂಸ್ಕೃತಿಯ ಉಳಿವಿಗೂ ತಮ್ಮದೇ ಕೊಡುಗೆ ನೀಡುತ್ತಿವೆ ಎಂದರು. ಉದ್ಯಮಿ ದಾಮೋದರ ದಂಡಕೇರಿ ಮುಖ್ಯ ಅತಿಥಿಯಾಗಿದ್ದರು.
ಜೀರ್ಣೋದ್ಧಾರ ಸಮಿತಿಯ ಗೋಪಿನಾಥ ಪಡಂಗ, ರಂಗನಾಥ ಶೆಟ್ಟಿ, ಸತೀಶ್ ಕಿಲ್ಪಾಡಿ, ಮಹೇಂದ್ರ ಬಂಗೇರ, ಮಹೇಶ್ ಅಮೀನ್, ಮೋಹನ್ ಶೆಟ್ಟಿ, ಪ್ರಭಾವತಿ, ವಿನಯಾ ವಿಶ್ವನಾಥ್, ಕಿಶೋರ್ ಕುಮಾರ್, ವಿನೋದ್ ಕೋಟ್ಯಾನ್, ಪುನೀತ್ ಸುವರ್ಣ, ಲೋಹಿತ್ ಎನ್.,
ದಯೇಶ್ ಅಮೀನ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು. ಸಮಾರಂಭದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ನೆರವು ನೀಡಿದ ಮತ್ತು ಸಹಕರಿಸಿದ ಗಣ್ಯರನ್ನು ಸಮ್ಮಾನಿಸಲಾಯಿತು.